Advertisement

ಅಂಗನವಾಡಿಗೆ ನೀರು ಹೊತ್ತು ತರುವ ಹೆತ್ತವರು!

04:56 AM Mar 02, 2019 | |

ಸುಬ್ರಹ್ಮಣ್ಯ: ಬೇಸಗೆಯ ಪ್ರಖರತೆ ಹೆಚ್ಚುತ್ತಿದೆ. ಅದಾಗಲೇ ಅಲ್ಲಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಕೈಕಂಬ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು, ಸ್ಥಳೀಯರು ಮತ್ತು ಅಂಗನವಾಡಿ ಮಕ್ಕಳು ಕುಡಿಯುವ ನೀರು ಸಿಗದೆ ಪರದಾಡುತ್ತಿದ್ದಾರೆ. ಪುಟಾಣಿ ಮಕ್ಕಳ ಹೆತ್ತವರೇ ಇಲ್ಲಿ ತಮ್ಮ ಮಕ್ಕಳಿಗೆ ನೀರು ಹೊತ್ತು ತಂದು ತಂದು ಕುಡಿಯಲು ಕೊಡುತ್ತಿದ್ದಾರೆ.

Advertisement

ಬಿಳಿನೆಲೆ ಗ್ರಾ.ಪಂ. ವ್ಯಾಪ್ತಿಯ ಕೈಕಂಬ ಪರಿಸರದಲ್ಲಿ ನೀರಿನ ಸಮಸ್ಯೆ ಒಂದು ತಿಂಗಳಿಂದ ಇದೆ. ಸ್ಥಳಿಯ ಗ್ರಾ.ಪಂ. ಈ ಭಾಗಕ್ಕೆ ಸಮಗ್ರ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸಿದೆ. ಕೈಕಂಬ ಕಾಲನಿ ಪಕ್ಕದಲ್ಲೇ  ಕೊಳವೆಬಾವಿ ತೋಡಿ, ಪೈಪ್‌ ಅಳವಡಿಸಿ ಒಂದು ಸಣ್ಣ ಮತ್ತು ಇನ್ನೊಂದು ದೊಡ್ಡ ಗಾತ್ರದ ನೀರಿನ ತೊಟ್ಟಿ ನಿರ್ಮಿಸಿ ಅಲ್ಲಿಂದ ಪರಿಸರದ ಮನೆ ಹಾಗೂ ಶಾಲೆ, ಅಂಗನವಾಡಿಗೆ ನೀರು ಒದಗಿಸುತ್ತಿದೆ.

ಒಂದು ತಿಂಗಳಿಂದ ಸಮಸ್ಯೆ
ಒಂದು ತಿಂಗಳಿಂದ ಮನೆಗಳಿಗೆ ಹಾಗೂ ಮುಖ್ಯ ಪೇಟೆಯ ಬಳಿ ಇರುವ ಅಂಗನವಾಡಿಗೆ ನೀರು ಪೂರೈಕೆ ಆಗುತ್ತಿಲ್ಲ. ಕೈಕಂಬ ಪರಿಸರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವಾಸಿಗಳ ಕಾಲನಿಗಳಿವೆ. ಜತೆಗೆ ಇತರೆ ಹಲವು ಕುಟುಂಬಗಳೂ ಇವೆ. ಇವರೆಲ್ಲರೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕುಡಿಯುವ ನೀರು ಒದಗಿಸುವ ಕೊಳವೆ ಬಾವಿಗೆ ಅಳವಡಿಸಿರುವ ಪಂಪ್‌ ಆಗಾಗ್ಗೆ ಕೆಡುತ್ತಿರುವುದು ಸಮಸ್ಯೆಗೆ ಒಂದು ಕಾರಣ. ಇನ್ನೊಂದು, ನೀರು ಸರಬರಾಜಿಗೆಂದು ನಿರ್ಮಸಿರುವ ದೊಡ್ಡ ನೀರಿನ ಟ್ಯಾಂಕ್‌ ಗೆ ಅಳವಡಿಸಿರುವ ಪೈಪ್‌ ಗಳು ಶಿಥಿಲಗೊಂಡಿವೆ. 

ಅವು ಆಗಾಗ ಒಡೆದು ನೀರು ಪೋಲಾಗುತ್ತಿದೆ. ಪೈಪ್‌ ಗಳ ಗುಣಮಟ್ಟ ಕಳಪೆ ಎನ್ನುವ ಅನುಮಾನಗಳು ಇವೆ. ತೊಟ್ಟಿಗೆ ಹೋಗುವ ನೀರು ಅರ್ಧಕ್ಕೂ ಹೆಚ್ಚು ಸೋರಿಕೆಯಾಗಿ ಟ್ಯಾಂಕ್‌ನಲ್ಲಿ ಅತ್ಯಲ್ಪ ನೀರು ಸಂಗ್ರಹವಾಗುತ್ತದೆ. ಹೀಗಾಗಿ ಇಲ್ಲಿ ನಿಯಮಿತವಾಗಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.

ಉಚಿತ ನೀರು!
ಕಾಲನಿ ನಿವಾಸಿಗಳು ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ. ಸ್ಥಳೀಯ ನಿವಾಸಿ ವೀರಪ್ಪ ಗೌಡ ಕಳಿಗೆ ಅವರು ಕೊಳವೆಬಾವಿ ಹೊಂದಿದ್ದು, ಒಂದು ತಿಂಗಳು ಉಚಿತವಾಗಿ ನೀರು ನೀಡಲು ನಿರ್ಧರಿಸಿದ್ದಾರೆ. ಅದರಿಂದಲೇ ಸ್ಥಳೀಯರು ಬಿಂದಿಗೆಗಳಲ್ಲಿ ಮನೆಗಳಿಗೆ ನೀರು ಒಯ್ಯುತ್ತಿದ್ದಾರೆ. ಸಂಜೆ ವೇಳೆ ನೀರು ಒಯ್ಯಲು ಮಹಿಳೆಯರು ಸಾಲು ನಿಲ್ಲುವ ಪರಿಸ್ಥಿತಿ ಇದೆ. ಕೃಷಿ ತೋಟಕ್ಕೂ ನೀರುಣಿಸಲು ಆಗದೆ ರೈತರು ಕಂಗಾಲಾಗಿದ್ದಾರೆ.

Advertisement

ಶಾಲೆಗಿದೆ ಪರ್ಯಾಯ ವ್ಯವಸ್ಥೆ
ಗುಂಡ್ಯ, ಕಡಬ ಭಾಗದಿಂದ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವೇಳೆ ಸುಬ್ರಹ್ಮಣ್ಯ ತಲುಪುವ ಮುಂಚಿತ 6 ಕಿ.ಮೀ. ವ್ಯಾಪ್ತಿಯಲ್ಲಿ ಕೈಕಂಬ ಜಂಕ್ಷನ್‌ ಇದೆ. ಇಲ್ಲಿ ಅಂಗಡಿ ಮುಂಗಟ್ಟುಗಳು ಇವೆ. ಇಲ್ಲಿರುವ ಸರಕಾರಿ ಶಾಲೆಗೂ ಪಂಚಾಯತ್‌ ಕಡೆಯಿಂದ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಇದೆ. ಆದರೆ ಶಾಲೆಯಲ್ಲಿ ಪರ್ಯಾಯ ನೀರಿನ ವ್ಯವಸ್ಥೆ ಇದ್ದು ಅವರನ್ನು, ನೀರಿನ ಸಮಸ್ಯೆ ಅಷ್ಟಾಗಿ ಬಾಧಿಸಿಲ್ಲ.ಅಂಗನವಾಡಿ ಕೇಂದ್ರದ ಪುಟಾಣಿಗಳು ಹಾಗೂ ಸಿಬಂದಿ ಒಂದು ತಿಂಗಳಿಂದ ಗಂಭೀರ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅಡುಗೆಗೆ, ಕುಡಿಯಲು ಇಲ್ಲಿ ನೀರಿಲ್ಲ. ಮಕ್ಕಳಿಗೆ ಶೌಚಾಲಯಕ್ಕೂ ನೀರಿಲ್ಲ. ಪುಟಾಣಿ ಮಕ್ಕಳ ಹೆತ್ತವರು ಪ್ರತಿನಿತ್ಯ ಕೇಂದ್ರಕ್ಕೆ ನೀರು ತಂದು ಕೊಡುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಕುರಿತು ಸ್ಥಳೀಯಾಡಳಿತದ ಗಮನಕ್ಕೆ ತಂದಿದ್ದಾರೆ. ಸಾಮಾನ್ಯ ಸಭೆಯಲ್ಲಿ ಕೂಡ ಚರ್ಚೆ ನಡೆದಿದೆ. ಆದರೆ ಸಮಸ್ಯೆ ಇನ್ನು ಬಗೆಹರಿದಿಲ್ಲ.

ಕೈಕೊಡುವ ಪಂಪ್‌
ಕುಡಿಯುವ ನೀರಿನ ಯೋಜನೆಯ ವಿದ್ಯುತ್‌ ಚಾಲಿತ ಪಂಪ್‌ ಆಗಾಗ್ಗೆ ಕೈಕೊಡುತ್ತಿದೆ. ತಿಂಗಳಲ್ಲಿ ಹತ್ತಾರು ಬಾರಿ ಅದರ ದುರಸ್ತಿ ನಡೆಯುತ್ತದೆ. ಕೆಲವೇ ದಿನಗಳಲ್ಲಿ ಮತ್ತೆ ಕೆಡುವುದರಿಂದ ಸಮಸ್ಯೆ ಬಿಗಡಾಯಿಸುತ್ತಿದೆ. ಈಗಲೂ ಅದನ್ನು ರಿಪೇರಿಗೆ ಒಯ್ಯಲಾಗಿದೆ. ಸಣ್ಣ ತೊಟ್ಟಿಯಲ್ಲಿ ಸಂಗ್ರಹಿಸಿದ ನೀರು ನಿವಾಸಿಗಳ ಬಳಕೆಗೆ ಸಾಕಾಗುತ್ತಿಲ್ಲ. ದೊಡ್ಡ ನೀರಿನ ತೊಟ್ಟಿಗೆ ಬಿಡುವ ಎಂದರೆ ಶಿಥಿಲ ಪೈಪ್‌ ಗಳಿಂದಾಗಿ  ಪೂರ್ಣ ಪ್ರಮಾಣದಲ್ಲಿ ಟ್ಯಾಂಕ್‌ಗೆ ನೀರು ಹರಿಯುತ್ತಿಲ್ಲ.

ಸಮಸ್ಯೆ ಬಗೆಹರಿಸುತ್ತೇವೆ
ನೀರು ಸರಬರಾಜಿನ ವಿದ್ಯುತ್‌ ಪಂಪ್‌ ಕೆಟ್ಟಿದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ. ದುರಸ್ತಿಗೆ ಕಳುಹಿಸಲಾಗಿದೆ. ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಬೇರೆ ಪಂಪ್‌ ಅಳವಡಿಸಿ ಎರಡು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಿಕೊಡುತ್ತೇವೆ. 
– ಶೀನ ಪಂಚಾಯತ್‌ ಅಭಿವೃದ್ಧಿ
ಅಧಿಕಾರಿ, ಬಿಳಿನೆಲೆ

 ತತ್‌ಕ್ಷಣ ನೀರಿನ ವ್ಯವಸ್ಥೆ
ಸ್ಥಳಿಯ ನಿವಾಸಿಗಳಿಗೆ, ಅಂಗನವಾಡಿ ಪುಟಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸುತ್ತೇವೆ. ಪಂಪು ಮತ್ತು ಪೈಪ್‌ ಎರಡರ ಜೋಡಣೆ ಅಗಬೇಕಿದೆ. ವಿಳಂಬವಾದಲ್ಲಿ ಶನಿವಾರದಿಂದಲೆ ಟ್ಯಾಂಕರ್‌ ಮೂಲಕ ನೀರು ಒದಗಿಸುವ ವ್ಯವಸ್ಥೆ ಮಾಡುತ್ತೇವೆ.
– ಶಾರದಾ
ಅಧ್ಯಕ್ಷೆ ಗ್ರಾ.ಪಂ. ಬಿಳಿನೆಲೆ 

ತೊಂದರೆ ಅನುಭವಿಸುತ್ತಿದ್ದೇವೆ
ಅಂಗನವಾಡಿ ಕೇಂದ್ರದಲ್ಲಿ ನೀರಿನ ಕೊರತೆ ಇದೆ.  ಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗದೆ ಇರುವುದರಿಂದ ಆತಂಕಗೊಂಡಿದ್ದೇವೆ. ಶೀಘ್ರ ಸಮಸ್ಯೆ ಇತ್ಯರ್ಥಪಡಿಸುವ ಕುರಿತು ಜನಪ್ರತಿನಿಧಿಗಳಿಂದ ಭರವಸೆ ದೊರಕಿದೆ. ಒಂದೆರಡು ದಿನಗಳಲ್ಲಿ ಬಗೆಹರಿಯುವ ವಿಶ್ವಾಸವಿದೆ.
-ತೇಜಾವತಿ
ಕೈಕಂಬ, ಅಂಗನವಾಡಿ ಕಾರ್ಯಕರ್ತೆ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next