ಮಹಾನಗರ: ಪುರಾತನ ಇತಿಹಾಸ ಹೊಂದಿದ ಗುಜ್ಜರಕೆರೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ ಕೋಟ್ಯಾಂತರ ರೂ.ವ್ಯಯಿಸಿ ಅಭಿವೃದ್ಧಿಪಡಿಸಲಾಗಿದೆ. ಆದರೆ, ಗುಜ್ಜರಕೆರೆ ನೀರು ಕಲುಷಿತಗೊಂಡಿದ್ದು. ಕುಡಿಯಲು ಯೋಗ್ಯವಿಲ್ಲ ಎಂದು ಮತ್ತೂಮ್ಮೆ ಸಾಬೀತಾಗಿದೆ.
ಕೆರೆಯ ಪಶ್ಚಿಮ ಭಾಗದಲ್ಲಿ ತೆಗೆದು ಪರೀಕ್ಷೆಗೆ ಒಳಪಡಿಸಲಾದ ನೀರಿನ ಪ್ರತಿ 100 ಮಿಲಿ ಲೀಟರ್‌ನಲ್ಲಿ ಟೋಟಲ್ ಕಾಲಿಫಾರ್ಮ್ ಸಂಖ್ಯೆ 1,600ರಷ್ಟು ಕಂಡು ಬಂದಿದೆ. ಫೀಕಲ್ ಕಾಲಿಫಾರ್ಮ್ ಸಂಖ್ಯೆ 300ರಷ್ಟಿದ್ದು, 100 ಎಂ.ಎಲ್.ನೀರಿನಲ್ಲಿ ಈ ಪ್ರಮಾಣದ ಅಂಶ ಕಂಡು ಬರುವುದು ಅಪಾಯಕಾರಿಯಾಗಿದೆ. ಈಶಾನ್ಯ ದಿಕ್ಕಿನಿಂದ ತೆಗೆದು ಪರೀಕ್ಷೆಗೆ ಒಳಪಡಿಸಲಾದ ನೀರಿನ ಪ್ರತಿ 100 ಎಂ.ಎಲ್‌ನಲ್ಲಿಯೂ ಟೋಟಲ್ ಕಾಲಿಫಾರ್ಮ್ ಸಂಖ್ಯೆ 1600ರಷ್ಟಿದೆ, ಫೀಕಲ್ ಕಾಲಿಫಾರ್ಮ್ ಸಂಖ್ಯೆ 300ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದ್ದು, ನೀರನ್ನು ಕುಡಿಯುವುದು ಅಪಾಯಕಾರಿ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
100 ಮಿ.ಮೀ. ನೀರಿನಲ್ಲಿ ಟೋಟಲ್ ಕಾಲಿಫಾರ್ಮ್ ಪ್ರಮಾಣ ಶೂನ್ಯ ಇದ್ದರಷ್ಟೇ ನೀರು ಉತ್ತಮ ಮತ್ತು ಕುಡಿಯಲು ಬಳಕೆ ಮಾಡಬಹುದಾಗಿದೆ. 1-3 ಇದ್ದರೆ ಸಮಾಧಾನಕರ ಮತ್ತು 4-10ರಷ್ಟು ಇದ್ದರೆ ಅಷ್ಟೊಂದು ಉತ್ತಮವಲ್ಲ. 10ಕ್ಕಿಂತ ಮೇಲೆ ಇದ್ದರೆ ಕುಡಿಯಲು ಯೋಗ್ಯವಲ್ಲ. ಫೀಕಲ್ ಕಾಲಿ ಫಾರ್ಮ್ ಕೂಡಾ ಶೂನ್ಯ ಪ್ರಮಾಣದಲ್ಲಿದ್ದರೆ ಮಾತ್ರ ಕುಡಿಯಲು ಯೋಗ್ಯವಾದುದು.
‘ಕೆರೆಯ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸುವ ಮುನ್ನವೇ ಈ ಕುರಿತು ಗಮನಹರಿಸದೆ ನೇರವಾಗಿ ದುಂದು ವೆಚ್ಚದ ಕಾಮಗಾರಿಗಳಿಗೆ ಆದ್ಯತೆ ನೀಡಿರುವುದು ಇಂದಿನ ಈ ಸ್ಥಿತಿಗೆ ಕಾರಣ. ಕೆರೆಯ ಅಭಿವೃದ್ಧಿ ಕಾರ್ಯಗಳು ನಡೆದ ಬಳಿಕ ಕೆರೆಯ ನೀರಿನಲ್ಲಿ ವಿಷಕಾರಿ ಅಂಶಗಳಿರುವುದು ಪ್ರಯೋಗಾಲಯದ ವರದಿಯಿಂದ ಹಲವು ಬಾರಿ ಸಾಬೀತಾಗಿದೆ. ಕೆರೆಯ ಸಂರಕ್ಷಣೆ, ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ಉಳಿವಿಗೆ ಕಳೆದ ಎರಡು ದಶಕಗಳಿಂದ ಹೋರಾಡುತ್ತಿರುವ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ರಿ. ವತಿಯಿಂದ ಇತ್ತೀಚೆಗೆ ನೀರಿನ ಗುಣಮಟ್ಟ ಪರೀಕ್ಷೆ ಮಾಡಲಾಗಿದ್ದು, ಕುಡಿಯಲು ಯೋಗ್ಯವಲ್ಲ ಮತ್ತು ಹೆಚ್ಚು ಬ್ಯಾಕ್ಟೀರಿಯಾಗಳಿವೆ ಎಂದು ವರದಿ ಬಂದಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.
ಗುಜ್ಜರಕೆರೆ ನೀರನ್ನು ಈ ಹಿಂದೆಯೂ ಹಲವು ಬಾರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪ್ರತಿ ಬಾರಿಯೂ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿದೆ. 2014, 2015, 2016ರಲ್ಲಿ ಪರೀಕ್ಷೆಗೆ ಒಳಪಡಿಸಿದಾಗ 1,100ರಷ್ಟು ಬ್ಯಾಕ್ಟೀರಿಯಾ ಪ್ರಮಾಣ ಇತ್ತು. 2019ರಲ್ಲಿ ಮತ್ತೆ ಪರೀಕ್ಷೆಗೆ ಒಳಪಡಿಸಿದಾಗಲೂ ಮತ್ತೆ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚಾಗಿತ್ತು. ಸಾಮಾನ್ಯವಾಗಿ ನೀರು ಪರೀಕ್ಷೆ ಮಾಡುವಾಗ ಅದರಲ್ಲಿರುವ ಟೋಟಲ್ ಕಾಲಿಫಾರ್ಮ್ (ಒಳ್ಳೆಯ ರೀತಿಯ ಬ್ಯಾಕ್ಟೀರಿಯಾ) ಮತ್ತು ಫೀಕಲ್ ಬ್ಯಾಕ್ಟೀರಿಯಾ (ಒಳಚರಂಡಿ-ಶೌಚಾಲಯದ ತ್ಯಾಜ್ಯ)ವನ್ನು ಪರೀಕ್ಷಿಸಲಾಗುತ್ತದೆ.
ಗುಜ್ಜರಕೆರೆ ಸಂರಕ್ಷಣೆ ಅಗತ್ಯವಿದೆ
ಪುರಾತನ ಇತಿಹಾಸ ಹೊಂದಿದ ಗುಜ್ಜರಕೆರೆ ಸಂರಕ್ಷಣೆಯ ಅಗತ್ಯವಿದೆ. ಗುಜ್ಜರಕೆರೆಯ ನೀರು ಕಲುಷಿತವಾಗಿದೆ ಎಂದು ಪ್ರಯೋಗಾಲಯದ ವರದಿಯಲ್ಲಿ ಮತ್ತೆ ಉಲ್ಲೇಖೀಸಲಾಗಿದೆ. ಕೆರೆಗೆ ಒಳಚರಂಡಿ ನೀರು ಸೇರುತ್ತಿದೆ. ಸ್ಮಾರ್ಟ್‌ಸಿಟಿ ಯೋಜನೆಯ ಮೂಲ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೆರೆ ಅಭಿವೃದ್ಧಿಯಾದರೂ, ನೀರು ಮಾತ್ರ ಇನ್ನೂ ಮಲಿನಗೊಂಡಿದೆ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
-ನೇಮು ಕೊಟ್ಟಾರಿ, ಕಾರ್ಯದರ್ಶಿ, ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ