Advertisement

ಮೈತ್ರಿ ಬಿರುಕಿಗೆ ತೇಪೆ ಹಚ್ಚಲು ಪರಮೇಶ್ವರ್‌ ಯತ್ನ

06:35 AM Feb 04, 2019 | |

ಬೆಂಗಳೂರು: ಮೈತ್ರಿ ಪಕ್ಷದಲ್ಲಿ ನಾಯಕರ ನಡುವಿನ ಮನಸ್ತಾಪದಿಂದ ಎರಡೂ ಪಕ್ಷಗಳ ಮುಖಂಡರ ನಡುವೆ ಅಂತರ ಹೆಚ್ಚಾಗುತ್ತಿದ್ದು, ದೋಸ್ತಿ ಪಕ್ಷಗಳ ನಡುವೆ ಒಗ್ಗಟ್ಟು ಮೂಡಿಸಲು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಪ್ರಯತ್ನ ಆರಂಭಿಸಿದ್ದಾರೆ.

Advertisement

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರ ಆಪ್ತ ಶಾಸಕರು ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯರೇ ತಮ್ಮ ಮುಖ್ಯಮಂತ್ರಿ ಎಂದು ಹೇಳಿದ್ದರಿಂದ ಮಾಜಿ ಪ್ರಧಾನಿ ದೇವೇಗೌಡರು ಆಕ್ರೋಶ ಗೊಂಡಿದ್ದು, ನೇರವಾಗಿ ಸಿದ್ದರಾಮಯ್ಯ ವಿರುದ್ಧ ಸಮಾಧಾನ ಹೊರ ಹಾಕಿದ್ದರು. ಅದು ಇಬ್ಬರೂ ನಾಯಕರ ನಡುವಿನ ಅಂತರ ಹೆಚ್ಚಾಗುವಂತೆ ಮಾಡಿದ್ದು, ಮೈತ್ರಿ ಸರ್ಕಾರದಲ್ಲಿ ಮತ್ತಷ್ಟು ವೈಮಸ್ಸಿನಗೆ ಕಾರಣವಾಗಿತ್ತು.

ಇದೇ ಕಾರಣಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಸಿದ್ದರಾಮಯ್ಯರನ್ನು ದೆಹಲಿಗೆ ಕರೆಸಿ ಲೋಕಸಭೆ ಚುನಾವಣೆ ಮುಗಿಯುವವರೆಗೂ ಯಾವುದೇ ಗೊಂದಲ ಮಾಡಿಕೊಳ್ಳದಂತೆ ಸಲಹೆ ನೀಡಿದ್ದರು. ಆದರೆ, ಸಿದ್ದರಾಮಯ್ಯ ಕೂಡ ಜೆಡಿಎಸ್‌ ವಿರುದ್ಧ ದೂರು ನೀಡಿ ಬಂದಿದ್ದು, ದೇವೇಗೌಡರು ಮತ್ತಷ್ಟು ಮುನಿಸಿಕೊಳ್ಳುವಂತೆ ಮಾಡಿತ್ತು.

ಆ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳ ನಾಯಕರ ನಡುವಿನ ಅಂತರ ಕಡಿಮೆ ಮಾಡಲು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮುಂದಾಗಿದ್ದು, ಭಾನುವಾರ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಆರೋಗ್ಯ ವಿಚಾರಣೆ ನೆಪದಲ್ಲಿ  ಭೇಟಿ ಮಾಡಿ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ. 

ಫೆ.6ರಿಂದ ಅಧಿವೇಶನ ಆರಂಭವಾಗುವುದರಿಂದ ಮೈತ್ರಿ ಪಕ್ಷದಲ್ಲಿ ಗೊಂದಲ ಉಂಟಾದರೆ, ಪ್ರತಿಪಕ್ಷ ಅದನ್ನೇ ದೊಡ್ಡ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ “ಡ್ಯಾಮೇಜ್‌ ಕಂಟ್ರೋಲ್‌’ಗೆ ಪರಮೇಶ್ವರ್‌ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಜಂಟಿ ಭೋಜನ ಕೂಟ: ಮೈತ್ರಿ ಸರ್ಕಾರದ ಎರಡೂ ಪಕ್ಷದ ಶಾಸಕರು ಹಾಗೂ ಸಚಿವರು ಬಹಿರಂಗವಾಗಿ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿರುವುದು ಕೂಡ ಮೈತ್ರಿ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಎಲ್ಲರಲ್ಲೂ ವಿಶ್ವಾಸ ಮೂಡಿಸಲು ಪರಮೇಶ್ವರ್‌ ಫೆ.6ರಂದು ಎರಡೂ ಪಕ್ಷಗಳ ಶಾಸಕರು, ಸಚಿವರು ಹಾಗೂ ಸಂಸದರಿಗೆ ಜಂಟಿ ಭೋಜನ ಕೂಟ ಏರ್ಪಡಿಸಿದ್ದಾರೆ.

ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿರುವ ಭೋಜನ ಕೂಟಕ್ಕೆ ಮಾಜಿ ಪ್ರಧಾನಿ ದೇವೇಗೌಡರು, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರಿಗೂ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ. ಅದೇ ನೆಪದಲ್ಲಿ ಎರಡೂ ಪಕ್ಷಗಳ ಶಾಸಕರು ಹಾಗೂ ಸಚಿವರ ಜೊತೆಗೆ ನಾಯಕರು ಅನೌಪಚಾರಿಕ ಮಾತುಕತೆ ನಡೆಸಿ, ಗೊಂದಲದ ಹೇಳಿಕೆಗಳನ್ನು ನೀಡದಂತೆ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಂಟಿ ಶಾಸಕಾಂಗ ಸಭೆ: ಅದರ ಬೆನ್ನಲ್ಲೇ ಫೆ.7 ರಂದು ಜಂಟಿ ಶಾಸಕಾಂಗ ಸಭೆಯನ್ನೂ ನಡೆಸಲು ಕಾಂಗ್ರೆಸ್‌ ಮುಂದಾಗಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಎರಡೂ ಪಕ್ಷಗಳ ಶಾಸಕಾಂಗ ಪಕ್ಷದ ಸಭೆ ಕರೆದಿ ದ್ದು, ಶಾಸಕರು ತಮ್ಮ ಸಮಸ್ಯೆಗಳು ಹಾಗೂ ಬೇಡಿಕೆ ಕುರಿತಂತೆ ನೇರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ಹೇಳಿಕೊಳ್ಳಲು ಅವಕಾಶ ಕಲ್ಪಿಸಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next