Advertisement

Congress: ಡಿಸೆಂಬರ್‌ ನಂತರ ಸಚಿವ ಸಂಪುಟ ಪುನಾರಚನೆ ಸಾಧ್ಯತೆ: ಪರಮೇಶ್ವರ್‌

09:55 PM Nov 13, 2024 | Team Udayavani |

ಬೆಂಗಳೂರು: ಸಂಪುಟ ಪುನಾರಚನೆ ಪಕ್ಷದ ಹೈಕಮಾಂಡ್‌ ಮತ್ತು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ. ಡಿಸೆಂಬರ್‌ ಅನಂತರ ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್‌ ಮುಂದಾಗಬಹುದು ಅಂತ ಕೂಡ ಹೇಳಲಾಗುತ್ತಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದರು.

Advertisement

ಸದಾಶಿವನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ದಿಲ್ಲಿಗೆ ಹೋದಾಗ ಸಂಪುಟ ಪುನಾರಚನೆ ವಿಚಾರ ಮುನ್ನೆಲೆಗೆ ಬಂದಿತ್ತು. ಡಿಸೆಂಬರ್‌ ಅನಂತರ ಪುನಾರಚನೆ ಆಗಬಹುದು. ಈ ಬಗ್ಗೆ ಹೈಕಮಾಂಡ್‌ನ‌ವರು ಮತ್ತು ಮುಖ್ಯಮಂತ್ರಿ ತೀರ್ಮಾನಿಸುತ್ತಾರೆ. ನಮ್ಮ ಹಂತದಲ್ಲಿ ಆ ಬಗ್ಗೆ ಏನೂ ಚರ್ಚೆಯಾಗಿ, ಆಗುವುದೂ ಇಲ್ಲ ಎಂದರು.

ಮಾಜಿ ಸಚಿವ ಬಿ. ನಾಗೇಂದ್ರ ಮರುಸೇರ್ಪಡೆ ಬಗ್ಗೆ ಕೇಳಿದಾಗ, ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರಕರಣದಲ್ಲಿ ಕ್ಲೀನ್‌ಚಿಟ್‌ ತೆಗೆದುಕೊಂಡು ಬಂದರೆ ನೋಡೋಣ. ಸಂಪುಟಕ್ಕೆ ತೆಗೆದುಕೊಳ್ಳುವುದು ಸಿಎಂಗೆ ಬಿಟ್ಟಿದ್ದು. ಒಂದು ವೇಳೆ ತಪ್ಪಿಲ್ಲ ಅಂತಾದರೆ, ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಹಿಂದೆ ಕೆ.ಜೆ. ಜಾರ್ಜ್‌ ಅವರು ರಾಜೀನಾಮೆ ನೀಡಿ, ಪ್ರಕರಣವೊಂದರಲ್ಲಿ ಕ್ಲೀನ್‌ಚಿಟ್‌ ಸಿಕ್ಕ ಅನಂತರ ಮರುಸೇರ್ಪಡೆಯಾಗಿಲ್ಲವೇ?. ಸದ್ಯಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರಕರಣದ ಬಗ್ಗೆ ಯಾವುದೇ ತನಿಖಾ ತಂಡ ಇನ್ನೂ ವರದಿ ನೀಡಿಲ್ಲ. ಮುಂದಕ್ಕೆ ನೋಡೋಣ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next