Advertisement

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

11:17 AM Nov 28, 2024 | Team Udayavani |

ಬೆಂಗಳೂರು: ನಗರದಲ್ಲಿ 2 ದಿನಗಳ ಹಿಂದೆ ನಡೆದ ಅಸ್ಸಾಂ ಮೂಲದ ಮಾಯಾ ಗೋಗೋಯ್‌ ಹತ್ಯೆ ಪ್ರಕರಣ ಸಂಬಂಧ ಆರೋಪಿಯ ಪತ್ತೆಗಾಗಿ ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್‌ 3 ವಿಶೇಷ ತಂಡ ರಚಿಸಿದ್ದಾರೆ.

Advertisement

ಕೃತ್ಯ ಎಸಗಿದ ಬಳಿಕ ಆರೋಪಿ ಆರವ್‌ ಕೇರಳಕ್ಕೆ ಪರಾರಿಯಾಗಿರುವ ಮಾಹಿತಿ ಇದ್ದು, ಆತನ ಮೊಬೈಲ್‌ ನೆಟ್‌ವರ್ಕ್‌, ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಕಾರ್ಯಾಚರಣೆ ನಡೆಯುತ್ತಿದೆ. ಆರೋಪಿ, ಹೋಟೆಲ್‌ನಿಂದ ಸುಮಾರು ದೂರ ಹೋಗುತ್ತಿದ್ದಂತೆ ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿಕೊಂಡು ಕ್ಯಾಬ್‌ನಲ್ಲಿ ಪರಾರಿಯಾಗಿದ್ದಾನೆ. ಹೀಗಾಗಿ ಆ ಕ್ಯಾಬ್‌ ಸಂಚರಿಸಿರುವ ಮಾರ್ಗದಲ್ಲಿನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ. ‌

ಕ್ಯಾಬ್‌ ಚಾಲಕನ ವಿಚಾರಣೆ: ಕ್ಯಾಬ್‌ನ ನೋಂದಣಿ ಸಂಖ್ಯೆ ಆಧರಿಸಿ ಚಾಲಕನನ್ನು ಪತ್ತೆ ಮಾಡಿ ವಿಚಾರಣೆ ನಡೆಸಲಾಗಿದೆ. ಕ್ಯಾಬ್‌ ಚಾಲಕನ ಹೇಳಿಕೆ ಹಾಗೂ ಆರವ್‌ನ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ತನಿಖೆ ಮಾಡಿದಾಗ ಆರೋಪಿಯು ಕೇರಳಕ್ಕೆ ಪರಾರಿಯಾಗಿರುವ ಸುಳಿವು ಸಿಕ್ಕಿದೆ. ಈ ಸುಳಿವು ಆಧರಿಸಿ ಪೊಲೀಸರ 1 ತಂಡವನ್ನು ಕೇರಳಕ್ಕೆ ಕಳುಹಿಸಲಾಗಿದೆ. ಮತ್ತೂಂದು ತಂಡ ಮಹಾರಾಷ್ಟ್ರಕ್ಕೆ ಹೋಗಿದೆ. ಇನ್ನೊಂದು ತಂಡ ನಗರದಲ್ಲೇ ಕಾರ್ಯಾಚರಣೆ ನಡೆಸುತ್ತಿದೆ. ಆರೋಪಿಯು ಪೂರ್ವಯೋಜಿತ ಸಂಚು ರೂಪಿಸಿ, ಪ್ರೇಯಸಿ ಮಾಯಾ ಗೊಗೋಯಿಳನ್ನು ಕೊಲೆಗೈದಿದ್ದಾನೆ. ಮೊದಲಿಗೆ ನೈಲಾನ್‌ ಹಗ್ಗದಿಂದ ಆಕೆಯ ಕುತ್ತಿಗೆ ಬಿಗಿದು, ಬಳಿಕ ಚಾಕುವಿನಿಂದ ಆಕೆಯ ಎದೆಗೆ ಇರಿದು ಪರಾರಿಯಾಗಿದ್ದಾನೆ.

ಇನ್ನು ಮೃತ ಮಾಯಾ, ನಗರದಲ್ಲೇ ವಾಸವಿರುವ ತನ್ನ ಅಕ್ಕನಿಗೆ ಶನಿವಾರ ಕರೆ ಮಾಡಿ, ಕಚೇರಿಯಲ್ಲಿ ಪಾರ್ಟಿ ಇರುವುದರಿಂದ ರಾತ್ರಿ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾಳೆ. ಮಾರನೇ ದಿನ ಭಾನುವಾರ ಸಹ ಅಕ್ಕನ ಮೊಬೈಲ್‌ಗೆ ಸಂದೇಶ ಕಳುಹಿಸಿ ಪಾರ್ಟಿಯ ಕಾರಣಕ್ಕೆ ಇಂದು ರಾತ್ರಿ ಕೂಡ ರಾತ್ರಿ ಮನೆಗೆ ಬರುವುದಿಲ್ಲ ಎಂದಿದ್ದಳು. ಆ ನಂತರ ಸೋಮವಾರದಿಂದ ಮಾಯಾ, ತನ್ನ ಅಕ್ಕನಿಗೆ ಕರೆ ಮಾಡಿಲ್ಲ ಮತ್ತು ಸಂದೇಶ ಸಹ ಕಳುಹಿಸಿರಲಿಲ್ಲ. ಈ ಅಂಶವನ್ನು ಗಮನಿಸಿದರೆ ಭಾನುವಾರ ರಾತ್ರಿಯೇ ಅವರ ಕೊಲೆಯಾಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next