ಪ್ಯಾರಡೈಸ್ ರೋಡ್ (1997)
ನಿರ್ದೇಶನ: ಬ್ರೂಸ್ ಬಿರೆಸ್ಫೋರ್ಡ್
ಅವಧಿ: 122 ನಿಮಿಷ
ಬದುಕಿನ ಆಕಸ್ಮಿಕ ಪಯಣಕ್ಕೆ ದಿಕ್ಕುಗಳಿಲ್ಲ ಎನ್ನುವ ಮಾತು “ಪ್ಯಾರಡೈಸ್ ರೋಡ್’ ನೋಡಿದಾಗ ನಿಜವೆನಿಸುತ್ತದೆ. ಅನಿರೀಕ್ಷಿತವಾಗಿ ಎದುರಾದ ಸವಾಲಿಗೆ ಮುಖಾಮುಖೀಯಾದ ದಿಟ್ಟೆಯರು, ತಾವೇ ನಿರ್ಮಿಸಿಕೊಳ್ಳುವ ಸುಂದರ ದಾರಿಯನ್ನು ನಿರ್ದೇಶಕರು ಮನೋಜ್ಞವಾಗಿ
ತೋರಿಸಿದ್ದಾರೆ .
ಅದು ಎರಡನೇ ಮಹಾಯುದ್ಧದ ಕಾಲ. ಸಿಂಗಾಪುರದ ಕ್ರಿಕೆಟ್ ಕ್ಲಬ್‌ನ ಕಪ್ಪು ಸಂಜೆಯಲ್ಲಿ ಒಂದು ಪಾರ್ಟಿ. ಸಂಗೀತದ ಅಬ್ಬರಕ್ಕೆ ಮೈಮರೆಯುತ್ತಿರುವ ಹೊತ್ತಿನಲ್ಲೇ ಹೊರಗೆ ಬಾಂಬ್ ದಾಳಿ ಆಗುತ್ತೆ. ಜಪಾನ್, ಆಗಷ್ಟೇ ಸಿಂಗಾಪುರವನ್ನು ಆಕ್ರಮಿಸಿ, ಅಮಾನವೀಯ ಬೇಟೆಗೆ ಸಜ್ಜಾಗುತ್ತಿರುತ್ತೆ. ಹೋಟೆಲ್‌ನವರು, ಪಾರ್ಟಿಯಲ್ಲಿ ಪಾಲ್ಗೊಂಡ ಸದಸ್ಯರನ್ನು ಬೋಟ್ ಹತ್ತಿಸಿ, ಪಾರು ಮಾಡಲು ಯತ್ನಿಸುತ್ತಾರಾದರೂ, ಜಪಾನ್ ಪಡೆ ಆ ದೋಣಿಯನ್ನೂ ಬಿಡುವುದಿಲ್ಲ. ಬಾಂಬ್‌ನ ಬೆಂಕಿಗೆ, ದೋಣಿ ತನ್ನ ಸಾಕ್ಷ್ಯಗಳನ್ನೇ ಉಳಿಸಿಕೊಳ್ಳುವುದಿಲ್ಲ.
ಆದರೆ, ಮಕ್ಕಳನ್ನು ಕಟ್ಟಿಕೊಂಡು, ಅಲ್ಲಿಂದ ಹೇಗೋ ಜಿಗಿಯುವ ನಾಲ್ಕಾರು ಮಹಿಳೆಯರ ಹೆಜ್ಜೆಗಳೇ ಇಲ್ಲಿ ಕುತೂಹಲದ ಕಥಾಪಯಣ. ಡಚ್, ಇಂಗ್ಲಿಷ್, ಐರಿಶ್, ಪೋರ್ಚ್‌ಗೀಸ್, ಚೈನೀಸ್, ಆಸ್ಟ್ರೇಲಿಯನ್ ಮಹಿಳೆಯರು, ಇಡೀ ಜೈಲಿನಲ್ಲಿನ ಭಯವನ್ನು ಹೋಗಲಾಡಿಸಿ, ತಮ್ಮದೇ ಅಭಿರುಚಿಯಿಂದ ಇತರರನ್ನು ಪ್ರಭಾವಿಸುವ, ಸಾಂತ್ವನಿಸುವ ಅಂಶಗಳು ಇಲ್ಲಿ ಆಪ್ತ.