Advertisement

Gulf ಕುಂದಗನ್ನಡ ಉತ್ಸವಕ್ಕೆ ಮೆರುಗು ತಂದ “ಪಾಪಣ್ಣ ವಿಜಯ ಗುಣ ಸುಂದರಿ’

07:55 PM Nov 25, 2023 | Team Udayavani |

ಯುಎಇ: ಸಂಯುಕ್ತ ಅರಬ್‌ ದೇಶದ ಅಜ್ಮಾನ್‌ನ ಹ್ಯಾಬಿಟ್ಯಾಟ್‌ ಶಾಲೆಯ ತುಂಬಿ ತುಳುಕಿದ ಸಭಾಂಗಣವು ಇತ್ತೀಚೆಗೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಕರಾವಳಿಯ ಸುಪ್ರಸಿದ್ಧ ಕಾರ್ಣಿಕದ ದೇವಳವಾದ ಶ್ರೀ ಕ್ಷೇತ್ರ ಮಂದಾರ್ತಿ ದುರ್ಗಾ ಪರಮೇಶ್ವರಿ ಅಮ್ಮನವರ ದಶಾವತಾರ ಯಕ್ಷಗಾನ ಮೇಳವು ಇದೇ ಮೊಟ್ಟ ಮೊದಲ ಬಾರಿಗೆ ಸಾಗರೋಲ್ಲಂಘನ ಮಾಡಿ ಯುಎಇಯಲ್ಲಿ ಯಕ್ಷಗಾನ ಪ್ರದರ್ಶನ ನೀಡಿದರು.

Advertisement

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ನವರು ಪ್ರಸ್ತುತ ಪಡಿಸಿದ ಕುಂದಗನ್ನಡ ಉತ್ಸವ -2023ರಲ್ಲಿ ಮಂದಾರ್ತಿ ಮೇಳದ ಕಲಾವಿದರು ಸ್ಥಳೀಯ ಕಲಾವಿದರನ್ನು ಕೂಡಿಕೊಂಡು 5 ಗಂಟೆಗಳ ಕಾಲ “ಪಾಪಣ್ಣ ವಿಜಯ ಗುಣ ಸುಂದರಿ’ ಎಂಬ ಪ್ರಸಂಗವನ್ನು ಆಡಿ ತೋರಿಸಿ, ಅಕ್ಷರ ಸಹ ಈ ಮರುಭೂಮಿ ದೇಶದಲ್ಲಿ ಗಂಧರ್ವ ಲೋಕವನ್ನು ಸೃಷ್ಟಿಸಿದರು.

ಹಿಮ್ಮೇಳದಲ್ಲಿ ಭಾಗವತರಾದ ನಾಗೇಶ್‌ ಕುಲಾಲ್, ಚೆಂಡೆಯಲ್ಲಿ ಶ್ರೀಕಾಂತ್‌ ಶೆಟ್ಟಿ , ಮದ್ದಳೆಯಲ್ಲಿ ಶ್ರೀಧರ ಭಂಡಾರಿ ಮುಮ್ಮೇಳದಲ್ಲಿ ಅಜ್ರಿ ಗೋಪಾಲ ಗಾಣಿಗ , ಅಕ್ಷಯ ಕುಮಾರ್‌, ಗೋವಿಂದ ವಂಡಾರು, ಪೂವಪ್ಪ ಕಡಬ ತಂಬ್ರಿ ಭಾಸ್ಕರ ಬಿಲ್ಲವ, ಗುಂಡಿಬೈಲ್‌ ಗಣಪತಿ ಭಟ್‌, ಕಿರಾಡಿ ಪ್ರಕಾಶ್‌, ಇವರ ಜತೆ ಯುಎಇ ಸ್ಥಳೀಯ ಯಕ್ಷ ಕಲಾವಿದರಾದ ವಿಶ್ವೇಶ್ವರ ಅಡಿಗ , ಕಿಶೋರ್‌ ಗಟ್ಟಿ ಹಾಗೂ ವಿನಾಯಕ ಹೆಗ್ಡೆ ಭಾಗವಹಿಸಿದ್ದರು. ಸಾಧನ್‌ ದಾಸ್‌ ಅವರ ಅಧ್ಯಕ್ಷತೆಯಲ್ಲಿ ಪದ್ಮರಾಜ್‌ ಎಕ್ಕಾರ್‌ ಅವರ ಸಹಕಾರದೊಂದಿಗೆ ಮತ್ತು ಮಂದಾರ್ತಿ ದುರ್ಗಾ ಪರಮೇಶ್ವರಿಯಮ್ಮನವರ ಆಶೀರ್ವಾದದೊಂದಿಗೆ ಗಲ್ಫ್ ರಾಷ್ಟ್ರ ದ ಯಕ್ಷ ರಂಗಕ್ಕೊಂದು ಅಜರಾಮರ ಗರಿಯೊಂದು ಮೂಡಿಸುವಲ್ಲಿ ಕಲಾವಿದರು ಯಶಸ್ವಿಯಾದರು.

ವರದಿ: ಆರತಿ ಅಡಿಗ, ದುಬೈ

Advertisement

Udayavani is now on Telegram. Click here to join our channel and stay updated with the latest news.

Next