ಚಿಕ್ಕಮಗಳೂರು: ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಸೋಮವಾರ ನಿಧನರಾಗಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಗಂಭೀರ ಆರೋಗ್ಯ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸಂಚಾರಿ ವಿಜಯ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಈ ಜಗದ ಸಂಚಾರವನ್ನು ಅಂತ್ಯಗೊಳಿಸಿದ್ದಾರೆ.
ಸಂಚಾರಿ ವಿಜಯ್ ಚಿಕ್ಕಮಗಳೂರು ಮೂಲದವರು. 1983ರ ಜುಲೈ 17ರಂದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ವಿಜಯ್ ಜನಿಸಿದ್ದರು. ವಿಜಯ್ ಅವರ ತಂದೆ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ಪಂಚನಗಳ್ಳಿಯಲ್ಲಿ ನರ್ಸ್ ಕೆಲಸ ಮಾಡುತ್ತಿದ್ದರು. ವಿಜಯ್ ತಂದೆ- ತಾಯಿ ಇಬ್ಬರೂ ಜಾನಪದ ಕಲಾವಿದರಾಗಿದ್ದರು.
ಇದನ್ನೂ ಓದಿ:ಜಗದ ಸಂಚಾರ ಮುಗಿಸಿದ ಸಂಚಾರಿ ವಿಜಯ್: ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ
ಪಂಚನಹಳ್ಳಿ ಗ್ರಾಮದಲ್ಲಿ ಪ್ರಾರ್ಥಮಿಕ ಶಿಕ್ಷಣ ಮುಗಿಸಿದ್ದ ವಿಜಯ್, ಪಕ್ಕದ ಗ್ರಾಮ ಆಣೆಗೆರೆಯಲ್ಲಿ ಪ್ರೌಢಶಿಕ್ಷಣ ಮಾಡಿದ್ದರು. ಪಿಯುಸಿ ವಿದ್ಯಾಭ್ಯಾಸಕ್ಕಾಗಿ ತುಮಕೂರು ಜಿಲ್ಲೆ ಟಿಪಟೂರಿನ ಕಲ್ಪತರು ಕಾಲೇಜಿಗೆ ತೆರಳಿದ್ದ ವಿಜಯ್, ನಂತರ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರ್ ಪದವಿ ಪಡೆದಿದ್ದರು.
ಸಂಚಾರಿ ನಾಟಕ ತಂಡದಲ್ಲಿದ್ದ ವಿಜಯ್ ಕುಮಾರ್ ಬಳಿಕ ಸಂಚಾರಿ ವಿಜಯ್ ಎಂದೇ ಹೆಸರಾದರು. ನಾನು ಅವನಲ್ಲ ಅವಳು, ಒಗ್ಗರಣೆ, ಕೃಷ್ಣ ತುಳಸಿ, ಆಟಕ್ಕುಂಟು ಲೆಕ್ಕಕ್ಕಿಲ್ಲ, ವಿಲನ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿಲ್ಲಿಂಗ್ ವೀರಪ್ಪನ್, ಅಲ್ಲಮ, ನಾತಿಚರಾಮಿ ಸೇರಿದಂತೆ ಮುಂತಾದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಶ್ರುತಿ ಹರಿಹರನ್ ಜೊತೆ ನಟಿಸಿದ್ದ ಅಭಿನಯಿಸಿದ್ದ ನಾತಿಚರಾಮಿ ಸಿನಿಮಾಗೂ ಅತ್ಯುತ್ತಮ ಸಿನಿಮಾ ಎಂದು ರಾಷ್ಟ್ರ ಪ್ರಶಸ್ತಿ ಬಂದಿತ್ತು. ರಾಷ್ಟ್ರ ಪ್ರಶಸ್ತಿ ಪಡೆದ ಹರಿವು ಸಿನಿಮಾದಲ್ಲೂ ಸಂಚಾರಿ ವಿಜಯ್ ಮುಖ್ಯ ಪಾತ್ರ ನಿರ್ವಹಿಸಿದ್ದರು.
ಇದನ್ನೂ ಓದಿ: ಇಹಲೋಕದ ಸಂಚಾರ ಮುಗಿಸಿದ ‘ವಿಜಯ್’