ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಚಿತ್ರ “ಮ್ಯಾಕ್ಸ್’ ಇಂದು ತೆರೆ ಕಾಣುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಬಹು ದಿನಗಳ ನಂತರ ಸುದೀಪ್ ಅವರನ್ನು ತೆರೆ ಮೇಲೆ ನೋಡಲು ಅವರ ಅಭಿಮಾನಿಗಳು ಕಾತುರರಾಗಿದ್ದಾರೆ.
ಇಡೀ ಸಿನಿಮಾ ಕತ್ತಲೆಯಲ್ಲೆ ಸಾಗಲಿದ್ದು, ಒಂದೇ ರಾತ್ರಿಯಲ್ಲಿ ನಡೆಯುವ ಘಟನೆಯ ಕಥಾ ಹಂದರ ಹೊಂದಿದೆ. ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳು ಭರ್ಜರಿಯಾಗಿ ಮೂಡಿಬಂದಿವೆ.
“ಮ್ಯಾಕ್ಸ್ ಹತ್ರ ಮಾತಾಡ್ತಾ ಇದೀರಾ, ಮ್ಯಾಕ್ಸಿಮಮ್ ಸೈಲೆನ್ಸ್ ಇರಲಿ’ ಎಂಬ ಸುದೀಪ್ ಅವರ ಸಂಭಾಷಣೆ ಟ್ರೇಲರ್‌ನ ಆಕರ್ಷಣೆಯಲ್ಲೊಂದು. ಅಪ್ಪಟ ಮಾಸ್ ಪ್ರಿಯರಿಗೆ ಇಷ್ಟವಾಗುವ ಸಿನಿಮಾವಿದು ಎಂಬ ನಂಬಿಕೆ ಇದೆ. ಚಿತ್ರದ ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಹೊಂದಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಮಹಾಬಲಿಪುರಂನಲ್ಲಿ ನಡೆದಿದೆ.
ಭಾನುವಾರ ಚಿತ್ರದುರ್ಗದಲ್ಲಿ ಮ್ಯಾಕ್ಸ್ ಚಿತ್ರತಂಡ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಾವಿರಾರು ಸಂಖ್ಯೆಯಲ್ಲಿ ಸುದೀಪ್ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಜೊತೆಗೆ ನಟ ಡಾಲಿ ಧನಂಜಯ್, ವಿನಯ್ ರಾಜ ಕುಮಾರ್, ಯುವ ರಾಜಕುಮಾರ್, ಅನೂಪ್ ಭಂಡಾರಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮ್ಯಾಕ್ಸ್ ಚಿತ್ರಕ್ಕೆ ಶುಭಕೋರಿದರು.
ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರವನ್ನು ಕಲೈಪ್ಪುಲಿ ತನು ನಿರ್ಮಿಸಿದ್ದಾರೆ. ಸಂಯುಕ್ತಾ ಹೊರನಾಡು, ಪ್ರಮೋದ್ ಶೆಟ್ಟಿ, ವರಲಕ್ಷ್ಮೀ ಶರತ್‌ಕುಮಾರ್, ಸುನೀಲ್ ಮುಂತಾದವರು ನಟಿಸಿದ್ದಾರೆ.