ಪಣಜಿ: ಗೋವಾದಲ್ಲಿ ಮೇ 11 ರಿಂದ 14ರ ನಡುವೆ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಲ್ಲದೆ ಮೇ 9 ರಂದು ವಾತಾವರಣ ಬಿಸಿ ಮತ್ತು ಆರ್ದ್ರತೆ ಇರುವ ಸಾಧ್ಯತೆ ಇದೆ. ಮುಂದಿನ ಏಳು ದಿನಗಳವರೆಗೆ ಗರಿಷ್ಠ ತಾಪಮಾನವು 34 ರಿಂದ 36 ಡಿಗ್ರಿ ಸೆಲ್ಸಿಯಸ್ ನಡುವೆ ಉಳಿಯುವ ಸಾಧ್ಯತೆಯಿದೆ. ಮೇ 8ರಿಂದ 10 ರವರೆಗೆ ವಾತಾವರಣ ಶುಷ್ಕವಾಗಿರುತ್ತದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಮುಂದಿನ ಐದು ದಿನಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆ ಇಲ್ಲ. ಮಂಗಳವಾರ ರಾಜ್ಯದ ವಿವಿಧೆಡೆ ಗರಿಷ್ಠ ತಾಪಮಾನ 33ರಿಂದ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಪಣಜಿಯಲ್ಲಿ ಬುಧವಾರ ಗರಿಷ್ಠ ತಾಪಮಾನ 34.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 25.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಡಗಾಂವ್ ನಲ್ಲಿ ಗರಿಷ್ಠ ತಾಪಮಾನ 33.8 ಡಿಗ್ರಿ ಮತ್ತು ಕನಿಷ್ಠ ತಾಪಮಾನ 26.6 ಡಿಗ್ರಿ ಸೆಲ್ಸಿಯಸ್‍ನಷ್ಟಿದೆ.
ಪಣಜಿಯಲ್ಲಿ ಆರ್ದ್ರತೆಯು ಶೇ. 75 ರಷ್ಟಿದ್ದರೆ ಮಡಗಾಂವ್ ನಲ್ಲಿ ಶೇ. 77 ರಷ್ಟಿತ್ತು. ಮುಂದಿನ ಏಳು ದಿನಗಳವರೆಗೆ ಆರ್ದ್ರತೆಯು ಶೇ.80 ರಿಂದ 90 ರ ನಡುವೆ ಇರುತ್ತದೆ. ಈ ಏಳು ದಿನಗಳಲ್ಲಿ ಶಾಖ ಸೂಚ್ಯಂಕ ಅಂದರೆ ಗ್ರಹಿಸಿದ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆಯಿರುವ ಸಾಧ್ಯತೆಯನ್ನು ಇಲಾಖೆ ವ್ಯಕ್ತಪಡಿಸಿದೆ.