ಪಣಜಿ: ಶ್ರೀ ಸ್ವಾಮಿ ಸಮರ್ಥ ಮಂದಿರದಲ್ಲಿ ಕಾಶಿ ವಿಶ್ವನಾಥ ಲಿಂಗವನ್ನು ಸ್ಥಾಪಿಸುವುದರ ಮುಖಾಂತರ ಇವತ್ತು ಎಲ್ಲರೂ ಬೆರೆತು ಧರ್ಮ ಆಚರಣೆ ಮಾಡಲು ಶ್ರೀ ಸ್ವಾಮಿ ಸಮರ್ಥ ಮಂದಿರದ ಧರ್ಮದರ್ಶಿಗಳಾದ ಶ್ರೀ ಜಯೇಶ್ ನಾಯ್ಕ್ ಅವರು ಸ್ಥಳಾವಕಾಶವನ್ನು ಮಾಡಿಕೊಡುವುದರ ಮುಖಾಂತರ ಶಿವಧಾರ ಮತ್ತು ಜನವಾರ ಒಂದೆಡೆ ಸೇರಿ ಜನರ ಶ್ರೇಯಸ್ಸಿಗೆ ಶ್ರಮಿಸಲು ಪ್ರೇರಕ ಶಕ್ತಿಯಾಗಿ ನಿಂತಿರುವುದು ಅಭಿಮಾನದ ಸಂಗತಿ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಗೋವಾ ರಾಜ್ಯದ ಮಡಗಾಂವ ಹೌಸಿಂಗ್ ಬೋರ್ಡನಲ್ಲಿ ಇರುವ ಶ್ರೀ ಸ್ವಾಮಿ ಸಮರ್ಥ ಮಂದಿರದಲ್ಲಿ ಕಾಶಿ ವಿಶ್ವನಾಥ ಲಿಂಗ ಸ್ಥಾಪನೆ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಭಾನುವಾರ ಜರುಗಿತು.
ಕಾಶಿ ವಿಶ್ವನಾಥ ಲಿಂಗವನ್ನು ಸ್ಥಾಪಿಸಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರು_ ಅಖಿಲ ಗೋವಾ ವೀರಶೈವ ಸಮಾಜ ಶ್ರೀ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಆಜ್ಞೆಯಂತೆ ಅಪರೂಪದ ಕಾರ್ಯ ನೆರವೇರಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶ್ರೀ ಸ್ವಾಮಿ ಸಮರ್ಥ ಮಂದಿರದ ಧರ್ಮದರ್ಶಿಗಳಾದ ಜಯೇಶ್ ನಾಯಕ ಮಾತನಾಡಿ- ಹುಕ್ಕೇರಿ ಶ್ರೀಗಳು ಶ್ರೀ ಸ್ವಾಮಿ ಸಮರ್ಥ ಮಂದಿರಕ್ಕೆ ಆಗಮಿಸಿರುವುದು ಕಾಶಿ ವಿಶ್ವನಾಥನೇ ಇಲ್ಲಿಗೆ ಬಂದಿದ್ದಾನೆ ಎಂಬ ಭಾವನೆ ನಮಗಾಗಿದೆ. ಭಾರತ ದೇಶದಲ್ಲಿ ನಾವೆಲ್ಲರೂ ಕೂಡ ಜಾತಿ ಮತ ಪಂಥ ಇವುಗಳನ್ನು ಮೀರಿ ನಾವೆಲ್ಲರೂ ಭಾರತೀಯರು ಎಂಬ ಸಮತಾ ಭಾವದಿಂದ ನಡೆದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.