ಭಾರತದೊಂದಿಗೆ ಗಡಿ ವಿಷಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತಂಟೆ ತೆಗೆಯದಿದ್ದರೆ ಪಾಕಿಸ್ಥಾನದ ಮನಸ್ಸಿಗೆ ನೆಮ್ಮದಿಯೇ ಇರದೇನೋ. ಈಗ ಇಮ್ರಾನ್ ಸರಕಾರ ಕಾಶ್ಮೀರದ ಸಿಯಾಚಿನ್‌ನಿಂದ ಹಿಡಿದು, ಗುಜರಾತ್‌ನ ಜುನಾಗಢದವರೆಗಿನ ಪ್ರದೇಶ ತನ್ನದೆಂದು ಹೇಳುತ್ತಿದೆ. ಪಾಕಿಸ್ಥಾನದ ಸಚಿವ ಸಂಪುಟವು ಮಂಗಳವಾರ ಹೊಸ ನಕ್ಷೆ ಬಿಡುಗಡೆ ಮಾಡಿದ್ದು, ಭಾರತದ ಈ ಭೂಪ್ರದೇಶಗಳೆಲ್ಲ ತನ್ನವು ಎಂದು ಹೇಳುತ್ತಿದೆ ಪಾಕಿಸ್ಥಾನ. ಈಗ ಈ ನಕ್ಷೆಯನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಲು ಪಾಕ್ ನಿರ್ಧರಿಸಿದೆಯಂತೆ.
ಗಮನಿಸಬೇಕಾದ ಅಂಶವೆಂದರೆ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದತಿಯ ವಿಷಯ ಪಾಕಿಸ್ಥಾನಕ್ಕೆ ಬಹಳವೇ ಯಾತನೆ ನೀಡುತ್ತಿದೆ. ಹೀಗಾಗಿ, ಅವಕಾಶ ಸಿಕ್ಕಾಗಲೆಲ್ಲ ಈ ವಿಷಯವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವಿವಾದ ಮಾಡಲು ಇಮ್ರಾನ್ ಸರಕಾರ ಪ್ರಯತ್ನಿಸುತ್ತಲೇ ಇದೆಯಾದರೂ, ಅದರ ಮಾತನ್ನು ಕೇಳಿಸಿಕೊಳ್ಳುವವರು ಯಾರೂ ಇಲ್ಲ. ಪಾಕಿಸ್ಥಾನ ತನ್ನ ನಕ್ಷೆಯಲ್ಲಿ ಹಠಾತ್ತನೆ ಬದಲಾವಣೆ ಮಾಡಿರುವುದೂ ಸಹ, ಈ ಹಿನ್ನೆಲೆಯಲ್ಲಿಯೇ ಎಂಬುದು ಸ್ಪಷ್ಟ.
ಕೆಲವು ಸಮಯದ ಹಿಂದೆ ನೇಪಾಲ ಸಹ ಇದೇ ರೀತಿಯಲ್ಲೇ ಹೊಸ ನಕ್ಷೆಯೊಂದನ್ನು ಬಿಡುಗಡೆ ಮಾಡಿ, ಭಾರತಕ್ಕೆ ಸೇರಿದ ಕಾಲಾಪಾನಿ, ಲಿಪುಲೇಖ ಹಾಗೂ ಲಿಂಪಿಯಾಧುರಾ ಪ್ರದೇಶಗಳನ್ನು ತನ್ನದೆಂದು ಹೇಳಿತು. ಇನ್ನೊಂದೆಡೆ ಚೀನ ಸಹ ಭಾರತದೊಂದಿಗೆ ಗಡಿ ವಿಚಾರದಲ್ಲಿ ಬಿಕ್ಕಟ್ಟು ಸೃಷ್ಟಿಸಿದೆ. ಇವನ್ನೆಲ್ಲ ಗಮನಿಸಿದಾಗ ಇದು ಭಾರತಕ್ಕೆ ತೊಂದರೆ ಕೊಡುವ ಉದ್ದೇಶದಿಂದ ಚೀನದ ಜತೆ ಕೈಜೋಡಿಸಿ ಇವೆರಡೂ ರಾಷ್ಟ್ರಗಳು ಮಾಡುತ್ತಿರುವ ಕುತಂತ್ರ ಎಂದೂ ಅನಿಸುತ್ತದೆ. ಆದರೆ ಗಮನಾರ್ಹ ಸಂಗತಿಯೆಂದರೆ, ಈಗಾಗಲೇ ನೇಪಾಲದ ಪ್ರಧಾನಿ ಕೆ.ಪಿ. ಓಲಿ ತಮ್ಮ ಭಾರತ ವಿರೋಧಿ ನೀತಿಯಿಂದಾಗಿ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾರೆ.
ಈ ಕಾರಣದಿಂದಾಗಿಯೇ ಕೆಲವು ಸಮಯದಿಂದ ಅವರು ಭಾರತದ ವಿಷಯದಲ್ಲಿ ಸುಮ್ಮನಾಗಿಬಿಟ್ಟಿದ್ದಾರೆ. ಇತ್ತ ಈಗ ಪಾಕಿಸ್ಥಾನವೂ ಸಹ ಚೀನವನ್ನು ಮೆಚ್ಚಿಸುವುದಕ್ಕಾಗಿ ಅಥವಾ ಅದರ ಕುಮ್ಮಕ್ಕಿನಿಂದಲೇ ಹೊಸ ನಕ್ಷೆಯ ಆಟ ಆಡುತ್ತಿರಬಹುದು. ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದಾಗ ತಾವು ಪಾಕಿಸ್ಥಾನವನ್ನು ಹೊಸ ದಿಕ್ಕಿಗೆ ಕರೆದೊಯ್ಯುವ ಬಗ್ಗೆ ಭಾಷಣ ಮಾಡುತ್ತಲೇ ಇದ್ದರು. ಅವರೂ ಸಹ ಉಗ್ರಪರ ಧೋರಣೆಯನ್ನು, ಭಾರತ ವಿರೋಧಿ ಮನಃಸ್ಥಿತಿಯನ್ನು ಢಾಳಾಗಿಯೇ ಪ್ರದರ್ಶಿಸುತ್ತಿದ್ದಾರೆ. ಪಾಕಿಸ್ಥಾನದ ಈ ಹುಚ್ಚಾಟಕ್ಕೆ ಮಣೆ ಹಾಕುವ ಮನಃಸ್ಥಿತಿ ಈಗ ಎಲ್ಲೂ ಉಳಿದಿಲ್ಲ.