ನ್ಯೂಯಾರ್ಕ್: ಅಮೆರಿಕದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಿಸುವ ಕಾರಣದಿಂದ ಐಸಿಸಿ ಈ ಬಾರಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಟಿ20 ವಿಶ್ವಕಪ್ ಆಯೋಜನೆ ಮಾಡಿದೆ. ಪ್ರಮುಖ ನಗರವಾದ ನ್ಯೂಯಾರ್ಕ್ ನಲ್ಲಿ ಹೊಸ ಸ್ಟೇಡಿಯಂ ನಿರ್ಮಿಸಿ ಅಲ್ಲಿ ಪ್ರಮುಖ ಪಂದ್ಯಗಳನ್ನು ಆಡಿಸಲಾಗುತ್ತಿದೆ. ಹೈವೋಲ್ಟೇಜ್ ಭಾರತ ಮತ್ತು ಪಾಕಿಸ್ತಾನ ಪಂದ್ಯವು ಕಳೆದ ಭಾನುವಾರ ಇಲ್ಲಿ ನಡೆದಿತ್ತು.
ಐಸಿಸಿ ಟಿ20 ವಿಶ್ವಕಪ್ ಕೂಟದ ಪ್ರಚಾರಕ್ಕೆ ಹಲವು ಯೂಟ್ಯೂಬರ್ ಗಳು ಅಮೆರಿಕಾಗೆ ತೆರಳಿದ್ದಾರೆ. ಇದೇ ರೀತಿ ನ್ಯೂಯಾರ್ಕ್ ಗೆ ತೆರಳಿದ್ದ ಪಾಕಿಸ್ತಾನದ ಯೂಟ್ಯೂಬರ್ ಒಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಭಾಗವಾಗಿ ಸಾದ್ ಅಹ್ಮದ್ ಎಂಬ ಯೂಟ್ಯೂಬರ್ ನನ್ನು ಭದ್ರತಾ ಸಿಬ್ಬಂದಿಯು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮದ ವರದಿಗಳು ಹೇಳಿವೆ.
ಪಂದ್ಯದ ಬಗ್ಗೆ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲು ಯೂಟ್ಯೂಬರ್ ನ್ಯೂಯಾರ್ಕ್ ನ ಮೊಬೈಲ್ ಮಾರ್ಕೆಟ್ ಗೆ ತೆರಳಿದ್ದ. ಅಲ್ಲಿ ಹಲವರ ಬಳಿ ಅಭಿಪ್ರಾಯ ಸಂಗ್ರಹಿಸಿದ್ದ. ಅಲ್ಲಯೇ ಇದ್ದ ಭದ್ರತಾ ಸಿಬ್ಬಂದಿ ಬಳಿಯು ಮೈಕ್ ಇಟ್ಟಾಗ ಆತ ಪ್ರತಿಭಟಿಸಿದ್ದ. ಅವರ ನಡುವೆ ವಾಗ್ವಾದ ನಡೆದು ಭಧ್ರತಾ ಸಿಬ್ಬಂದಿ ತನ್ನ ಬಳಿಯಿದ್ದ ಗನ್ ನಿಂದ ಶೂಟ್ ಮಾಡಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಸಾದ್ ಅಹ್ಮದ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಆತ ಅಸುನೀಗಿದ್ದಾನೆ ಎಂದು ವರದಿ ತಿಳಿಸಿದೆ.
ಸಾದ್ ತಮ್ಮ ಕುಟುಂಬಕ್ಕೆ ಏಕೈಕ ಆಧಾರವಾಗಿದ್ದರು ಎಂದು ಅವರ ಸ್ನೇಹಿತರೊಬ್ಬರು ಹೇಳಿಕೊಂಡಿದ್ದಾರೆ. ಪಂದ್ಯದ ಬಿಲ್ಡಪ್ ಕವರ್ ಮಾಡಲು ಸಾದ್ ಹೊರಡುವ ಮೊದಲು ಸ್ನೇಹಿತ ಯೂಟ್ಯೂಬರ್‌ನೊಂದಿಗೆ ಮಾತನಾಡಿದ್ದರು.
ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳು ಗುಂಡು ಹಾರಿಸುವ ಮೊದಲು ಯೂಟ್ಯೂಬರ್ ಸೆಕ್ಯೂರಿಟಿಯೊಂದಿಗೆ ಸಂವಹನ ನಡೆಸುತ್ತಿರುವುದನ್ನು ಸೂಚಿಸುತ್ತವೆ. ಈ ಪ್ರಕರಣದಲ್ಲಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.