Advertisement

ಪಾಕ್‌ ಉಗ್ರಗಾಮಿಗೆ 7ವರ್ಷ ಕಠಿಣ ಜೈಲು ಶಿಕ್ಷೆ

11:52 AM Jul 26, 2017 | Team Udayavani |

ಬೆಂಗಳೂರು: 2006ರಲ್ಲಿ ಮೈಸೂರಿನಲ್ಲಿ ಸಿಕ್ಕಿಬಿದ್ದಿದ್ದ ಪಾಕ್‌ ಮೂಲದ ಉಗ್ರನೊಬ್ಬನಿಗೆ ಹಣ ದುರ್ಬಳಕೆ ತಡೆ ಕಾಯಿದೆ (ಪಿಎಂಎಲ್‌ಎ) ಪ್ರಕರಣದಲ್ಲಿ 7 ವರ್ಷ ಕಠಿಣ ಜೈಲು  ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಸಿಟಿಸಿವಿಲ್‌ ನ್ಯಾಯಾಲಯ ತೀರ್ಪು ನೀಡಿದೆ. ಒಂದು ವೇಳೆ ಅಪರಾಧಿ ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ 6 ತಿಂಗಳ ಕಾಲ ಜೈಲು ಶಿಕ್ಷೆ ಪೂರೈಸಬೇಕು.

Advertisement

ಜೊತೆಗೆ ಜಾರಿ ನಿರ್ದೇಶನಾಲಯ ಉಲ್ಲೇಖೀಸಿದ್ದ 44,174 ಅಕ್ರಮ ಹಣಕ್ಕೆ ಬಡ್ಡಿ ಸೇರಿ ಒಟ್ಟು 90.470 ರೂಪಾಯಿ ದಂಡ ಪಾವತಿಸಬೇಕು ಎಂದು ಸಿಟಿಸಿವಿಲ್‌ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಸವರಾಜ್‌ ಎಸ್‌ ಸಪ್ಪಣ್ಣನವರ್‌ ತೀರ್ಪು ನೀಡಿದ್ದಾರೆ. ಮೈಸೂರಿನಲ್ಲಿ ಉಗ್ರರು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಸುಳಿವು ಆಧರಿಸಿ 2006 ನವೆಂಬರ್‌ 26ರ ರಾತ್ರಿ ಆರೋಪಿಗಳ ಪತ್ತೆಗೆ ಪೊಲೀಸರು ಮೈಸೂರಿನ ವಿಜಯನಗರದ ರಿಂಗ್‌ ರೋಡ್‌ನ‌ಲ್ಲಿ ಹೊಂಚು ಹಾಕಿದ್ದರು.

ಈ ವೇಳೆ ಅದೇ ಮಾರ್ಗವಾಗಿ ಬೈಕ್‌ನಲ್ಲಿ ಬಂದ ಫ‌ಹಾದ್‌ ಹೈ ಹಾಗೂ ಆತನ ಸ್ನೇಹಿತ ಮೊಹಮದ್‌ ಅಲಿ ಹುಸೇನ್‌ ಎಂಬುವವರನ್ನು ತಡೆಗಟ್ಟಿ ವಿಚಾರಣೆಗೊಳಪಡಿಸಿ ಐಡಿ ಕಾರ್ಡ್‌ ತೋರಿಸುವಂತೆ ಪೊಲೀಸರು ತಾಕೀತು ಮಾಡಿದಾಗ ಅಲಿಹುಸೇನ್‌ ತನ್ನ ಬ್ಯಾಗ್‌ನಲ್ಲಿದ್ದ ಗನ್‌ ತೆಗೆದು ಪೊಲೀಸರತ್ತ ಗುಂಡು ಹಾರಿಸಲು ಮುಂದಾಗಿದ್ದ. ಈ ವೇಳೆ ಪೊಲೀಸರು ಪ್ರತಿದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ವಿಚಾರಣೆ ವೇಳೆ ಬಯಲಾಗಿತ್ತು ಸ್ಫೋಟಕ ಮಾಹಿತಿ!: ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಸ್ಫೋಟಕ ಮಾಹಿತಿ ಲಭ್ಯವಾಗಿತ್ತು. ಪಾಕ್‌ ಮೂಲದ ನಿಷೇಧಿತ ಉಗ್ರ ಸಂಘಟನೆ ಆಲ್‌ ಬಾದ್ರಾ ಸದಸ್ಯರಾಗಿದ್ದ ಇಬ್ಬರೂ, ಉಗ್ರ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ಭಾರತ ಪ್ರವೇಶಿಸಿ ಮೈಸೂರಿನ ಉದಯಗಿರಿ ಸಮೀಪ ರಾಜೀವ್‌ನಗರದಲ್ಲಿ ವಾಸಿಸುತ್ತಿದ್ದರು ಎಂಬ ಸಂಗತಿ ಹೊರಬಿದ್ದಿತ್ತು. ಅಲ್ಲದೆ ಬಂಧಿತರಿಂದ ಎಕೆ.47 ರೈಫ‌ಲ್‌, ಪಿಸ್ತೂಲ್‌. ಜೀವಂತ ಗುಂಡುಗಳು ಹಾಗೂ ಸ್ಯಾಟ್‌ಲೆçಟ್‌ ಫೋನ್‌ಗಳನ್ನು ಪೊಲೀಸರು ಜಫ್ತಿ ಮಾಡಿಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next