ಕಲಬುರಗಿ: ಪ್ರವಾದಿ ಮೊಹ್ಮದ್ ಪೈಗಂಬರ್ ಹಾಗೂ ಕುರಾನ್ ಗ್ರಂಥ ಕುರಿತು ಅವಹೇಳನಕಾರಿ ಪ್ರಚಾರದಲ್ಲಿ ತೊಡಗಿದ್ದಾನೆಂದು ಆರೋಪಿಸಿ ಯುವಕನೊಬ್ಬನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಹೊರವಲಯ ತಾವರಗೇರಾ ಕ್ರಾಸ್‌ನಲ್ಲಿ ನಡೆದಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನ ಜಲಾಲ್ (30) ಕೊಲೆಯಾದ ಧರ್ಮ ಪ್ರಚಾರಕ. ಪ್ರಕರಣ ಸಂಬಂಧ ಸ್ಥಳೀಯರಾದ ಸೈಯ್ಯದ್ ತಬರೇಜ್, ಮಹ್ಮದ್ ಉಮರ್ ಫಾರೂಕ್, ಸೈಯ್ಯದ್ ಅಮ್ಜದ್, ಮಹ್ಮದ್ ಅಜರ್ ತಂದೆ ಅಬ್ದುಲ್, ಅಬ್ದುಲ್ ರಹೀಂ ಖಾಸ್ಕಿ, ಸೈಯ್ಯದ್ ಇಸ್ಮಾಯಿಲ್, ಸೈಯ್ಯದ್ ಹುಸೇನ್, ಮೊಹ್ಮದ್ ಉಮರ್ ಸೊಹೆಲ್, ಗೌಸ್ ಮೈನೂದ್ದಿನ್, ಸೈಯ್ಯದ್ ಮುಕ್ರಂ, ಅಬ್ದುಲ್ ಅಜೀಜ್, ಚಾಂದಪಾಶಾ, ಸೈಯ್ಯದ್ ರಹೀಮ್ ಹಾಗೂ ಮುದ್ದೇಪಿರ್ ಸೇರಿದಂತೆ 14 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಐದಾರು ತಿಂಗಳಿನಿಂದ ಕಲಬುರಗಿ ಮಹಾನಗರದಲ್ಲಿ ಮಹ್ಮದ ಜಲಾಲ್ “ಪಾಕಿಸ್ತಾನದ ಅಹ್ಮದ್ ಇಸಾ’ ಪಂಥದ ಪ್ರಚಾರ ಮಾಡುತ್ತಿದ್ದ. ಅಲ್ಲದೇ ಪ್ರವಾದಿ ಮೊಹ್ಮದ್ ಪೈಗಂಬರ್ ಹಾಗೂ ಕುರಾನ್ ಕುರಿತು ಅವಹೇಳನಕಾರಿ ಪ್ರಚಾರದಲ್ಲಿ ತೊಡಗಿ ಸಾಹಿತ್ಯ, ಸಂದೇಶ ಪ್ರಚುರಪಡಿಸುತ್ತಿದ್ದ. ಇದನ್ನು ಸಹಿಸದ 20ಕ್ಕೂ ಹೆಚ್ಚು ಯುವಕರ ತಂಡ ಮೊದಲು ಬುದ್ಧಿವಾದ ಹೇಳಿದೆ. ಆದರೂ ತಿದ್ದಿಕೊಳ್ಳದ ಕಾರಣ ಕೊಲೆ ಮಾಡಲಾಗಿದೆ ಎಂದು ಎಸ್‌ಪಿ ಎನ್. ಶಶಿಕುಮಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೂರು ನೀಡಿದಾಗ ನಾಪತ್ತೆಯಾಗಿದ್ದ: ಜಲಾಲ್ ಧರ್ಮ ಪ್ರಚಾರ ಸಂಬಂಧ ಕೆಲವು ತಿಂಗಳ ಹಿಂದೆ ದೂರು ನೀಡಲಾಗಿತ್ತು. ಆ ಸಂದರ್ಭದಲ್ಲಿ ಶೋಧ ನಡೆಸಿದಾಗ ಸ್ಥಳೀಯವಾಗಿ ಇರಲಿಲ್ಲ. ಈಗ ಮತ್ತೆ ಬಂದು ಧರ್ಮದ ವಿರುದ್ಧ ಕೆಲಸ ಮಾಡಲು ನಗರದ ಎಂಎಸ್‌ಕೆ ಮಿಲ್ ಬಳಿ ವಸತಿ ಗೃಹದಲ್ಲಿ ತಂಗಿದ್ದ. ಈ ವೇಳೆ ವಿಚಾರಣೆ ನೆಪದಲ್ಲಿ ತಾಜಸುಲ್ತಾನಪುರ ಬಳಿ ಕರೆದೊಯ್ದು ನಂತರ ತಾವರಗೇರಾ ಕ್ರಾಸ್ ಬಳಿ ಕುತ್ತಿಗೆ, ಹೊಟ್ಟೆಗೆ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆ ಮಾಡಿದ ಯುವಕರು ಸುನ್ನಿ ಹಾಗೂ ಶಿಯಾ ಪಂಗಡಕ್ಕೆ ಸೇರಿದವರಾಗಿದ್ದಾರೆ ಎಂದರು.
ಭಾನುವಾರ ಶವ ಪತ್ತೆಯಾದಾಗ ಮೊದಲು ಅಪರಿಚಿತ ಎನ್ನಲಾಗಿತ್ತು. ನಂತರ ವಿಚಾರಿಸಿದಾಗ ಪಾಕಿಸ್ತಾನದ ಇಸಾ ಧರ್ಮದ ಪ್ರಚಾರಕ ಹಾಗೂ ಔರಂಗಾಬಾದ್‌ನ ಗುರುಗಳೊಬ್ಬರ ಹೆಸರು ಪ್ರಸ್ತಾಪಿಸಿ ಧರ್ಮ ಪ್ರಚಾರ ಮಾಡುತ್ತಿದ್ದ ಎಂಬುದು ತಿಳಿಯಿತು. ಕೆಲವರನ್ನು ವಿಚಾರಿಸಿದಾಗ ಜಲಾಲ್ ಇಸ್ಲಾಂ ಧರ್ಮದ ವಿರುದ್ಧ ಪ್ರಚಾರದಲ್ಲಿ ತೊಡಗಿದ್ದ ಎಂಬ ಆರೋಪದ ಮೇರೆಗೆ ಕೊಲೆ ನಡೆದಿರುವುದು ಬಯಲಿಗೆ ಬಂದಿದೆ.
ಘಟನೆ ನಡೆದ 24 ಗಂಟೆಯೊಳಗೆ 14 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲವರನ್ನು ಬಂಧಿಸಬೇಕಾಗಿದೆ. ಬಂಧಿತರಲ್ಲಿ ಕೆಲವರು ಮಸೀದಿಯಲ್ಲಿ ಧರ್ಮ ಪ್ರಚಾರದಲ್ಲಿ ತೊಡಗಿದ್ದವರು ಎನ್ನಲಾಗಿದೆ. ಪರಿಶೀಲನೆ ಬಳಿಕ ಸ್ಪಷ್ಟವಾಗಲಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ 2 ಕಾರು, 3 ಬೈಕ್, ತಲವಾರ್, ಬಡಿಗೆ ಹಾಗೂ ಪೈಪ್‌ಗ್ಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.