ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ಮರು ಸ್ಥಾಪಿಸುವ ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಪ್ರಣಾಳಿಕೆ ಭರವಸೆಗೆ ನೆರೆಯ ಪಾಕಿಸ್ಥಾನ ಸಂಭ್ರಮ ಆಚರಿಸುತ್ತಿದೆ ಎಂದು ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮ್ಮು-ಕಾಶ್ಮೀರ ಚುನಾವಣೆ ಹಿನ್ನೆಲೆಯಲ್ಲಿ ಕಟ್ರಾ ಮತ್ತು ಶ್ರೀನಗರದಲ್ಲಿ ಗುರುವಾರ ಮಾತನಾಡಿದ ಅವರು 2 ಪಕ್ಷಗಳ ಪ್ರಣಾಳಿಕೆಗೆ ಪಾಕ್ನ ರಕ್ಷಣ ಸಚಿವರು ಬಹಿರಂಗ ವಾಗಿಯೇ ಬೆಂಬಲ ಸೂಚಿಸಿದ್ದಾರೆ. ಕಣಿವೆ ಯಲ್ಲಿ ಮತ್ತೆ ರಕ್ತಪಾತ ನೋಡಬೇಕೆಂಬುದೇ ಇವರೆಲ್ಲರ ಉದ್ದೇಶ ಎಂದರು.
370ನೇ ವಿಧಿ ಮರುಸ್ಥಾಪನೆ ಬಗ್ಗೆ ಕಾಂಗ್ರೆಸ್-ಎನ್ಸಿ ಉದ್ದೇಶ ಮತ್ತು ನಮ್ಮ ಉದ್ದೇಶ ಎರಡೂ ಒಂದೇ ಎಂದು ಪಾಕಿ ಸ್ಥಾನ ರಕ್ಷಣ ಸಚಿವ ಖ್ವಾಜಾ ಆಸೀಫ್ ಹೇಳಿಕೆ ಹಿನ್ನೆಲೆಯಲ್ಲಿ ಪ್ರಧಾನಿ ಈ ರೀತಿ ಚಾಟಿ ಬೀಸಿದ್ದಾರೆ. ಜತೆಗೆ ಕಾಂಗ್ರೆಸ್ ಮತ್ತು ಪಾಕಿಸ್ಥಾನದ ಅಜೆಂಡಾ ಒಂದೇ ಆಗಿದೆ. ಆದರೆ ನಾವು ಎಂದಿಗೂ ಪಾಕಿಸ್ಥಾನದ ಅಜೆಂಡಾ ಈಡೇರಲು ಬಿಡುವುದಿಲ್ಲ. ವಿಶ್ವ ಯಾವ ಶಕ್ತಿಗೂ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯ ನ್ನು ಮತ್ತೆ ಸ್ಥಾಪಿಸಲು ಸಾಧ್ಯ ವಿಲ್ಲ ಎಂದೂ ಪ್ರಧಾನಿ ಪ್ರತಿಪಾದಿಸಿದ್ದಾರೆ.
“ನೀವು ಕಾಂಗ್ರೆಸ್ಗೆ ನೀಡುವ ಪ್ರತೀ ಮತವೂ ಪಿಡಿಪಿ ಮತ್ತು ಎನ್ಸಿ ಪ್ರಣಾಳಿಕೆ ಅಂಶಗಳ ಜಾರಿಗೆ ಕಾರಣವಾಗುತ್ತದೆ. ಕಾಂಗ್ರೆಸ್ ಮತ್ತು ಎನ್ಸಿ ಮೈತ್ರಿ ಬಗ್ಗೆ ಅವರಿಗೇ ಖುಷಿ ಇದೆಯೋ ಇಲ್ಲವೋ, ಆದರೆ ಪಾಕಿಸ್ಥಾನ ಮಾತ್ರ ಭಲ್ಲೆ ಭಲ್ಲೆ ಎನ್ನುವಷ್ಟು ಸಂತಸದಲ್ಲಿದೆ ಎಂದಿದ್ದಾರೆ.
3 ಪಕ್ಷಗಳ ಸೂರ್ಯಾಸ್ತ ಖಾತರಿ
ಪಿಡಿಪಿ, ಕಾಂಗ್ರೆಸ್, ಎನ್ಸಿ ಪಕ್ಷಗಳು ಹಲವು ವರ್ಷಗಳಿಂದ ಕಣಿವೆಯನ್ನು ಗಾಯಗೊಳಿಸಿವೆ. ಈ ಬಾರಿಯ ಚುನಾವಣೆ ಆ ಗಾಯಗಳನ್ನು ಮಾಡಿದ ಪಕ್ಷಗಳ ರಾಜಕೀಯ ಸೂರ್ಯಾಸ್ತಕ್ಕೆ ಕಾರಣವಾಗಬೇಕು. ಜತೆಗೆ ಜಮ್ಮು-ಕಾಶ್ಮೀರದ ಭವಿಷ್ಯ ಈ ಚುನಾವಣೆಯಲ್ಲಿದೆ. ಹಾಗಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಪ್ರಧಾನಿ ಮನವಿ ಮಾಡಿದ್ದಾರೆ.