Advertisement

Guarantee: ರಾಜ್ಯದಲ್ಲಿ ಗ್ಯಾರಂಟಿಗೆ ಶೇ.47 ಖರ್ಚು, ಮೋದಿ ಮಾಡಿದ್ದೇನು?: ಖರ್ಗೆ ಪ್ರಶ್ನೆ

12:30 AM Nov 10, 2024 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ 5 ಗ್ಯಾರಂಟಿಗಳ ಅನುಷ್ಠಾನಕ್ಕೆ 52 ಸಾವಿರ ಕೋಟಿ ರೂ. ಮೀಸಲಿಟ್ಟು ಶೇ. 47ರಷ್ಟು ಹಣ ಖರ್ಚು ಮಾಡಲಾಗಿದೆ. ಪ್ರಧಾನಿ ಮೋದಿ ಸರಕಾರ ಏನು ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

Advertisement

ಕರ್ನಾಟಕದಲ್ಲಿ ಗ್ಯಾರಂಟಿ ವೈಫ‌ಲ್ಯ ಎಂದು ಮಹಾರಾಷ್ಟ್ರ, ಝಾರ್ಖಂಡ್‌ನ‌ಲ್ಲಿ ಪಿಎಂ ಮೋದಿ ಪ್ರಚಾರ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಶನಿವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಕನಿಷ್ಠ ನಾವು ಹೇಳಿದ್ದನ್ನು ಅನುಷ್ಠಾನಕ್ಕಾದರೂ ತಂದಿದ್ದೇವೆ. ಮೋದಿಯವರು ಯಾವ ಗ್ಯಾರಂಟಿಯನ್ನೂ ಅನುಷ್ಠಾನಕ್ಕೆ ತರಲಿಲ್ಲ. ದೇಶದ ಜನ ಬ್ಯಾಂಕ್‌ ಖಾತೆಗಳಿಗೆ ತಲಾ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. 2 ಕೋಟಿ ಉದ್ಯೋಗ ಸೃಷ್ಟಿಸುವ ಘೋಷಣೆ ಮಾಡಿದ್ದರು. ನೋಟ್‌ಬಂದಿ ವಿಫ‌ಲವಾದರೆ ಶೂಲಕ್ಕೇರಿಸಿ ಎಂದಿದ್ದರು, 2 ವರ್ಷದಲ್ಲಿ ಬುಲೆಟ್‌ ರೈಲು ತರುವುದಾಗಿ ಹೇಳಿದ್ದರು. ಇವೆಲ್ಲ ಚುನಾವಣೆ ಕಾರಣಕ್ಕಾಗಿ ಅವರು ಹೇಳಿದ ಸುಳ್ಳುಗಳು. ನಾವು ಜನ ಕಲ್ಯಾಣಕ್ಕಾಗಿ ಮಾಡುತ್ತಿದ್ದೇವೆ. ಕರ್ನಾಟಕಕ್ಕೆ ಕೆಟ್ಟ ಹೆಸರು ತರಲು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ನಾವು 5 ಗ್ಯಾರಂಟಿ ಘೋಷಿಸಿದ ಅನಂತರ ಅವರು ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನದಲ್ಲಿ ಬಜೆಟ್‌ನಲ್ಲಿ ಹಣ ಇಡದೆ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ನಮ್ಮ ಗ್ಯಾರಂಟಿಗಳನ್ನೇ ನಕಲು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಕ್ಫ್ ಮಂಡಳಿ ನೋಟಿಸ್‌ ವಿಚಾರವಾಗಿ ಸದ್ಯಕ್ಕೆ ನಾನೇನೂ ಮಾತನಾಡುವುದಿಲ್ಲ. ವಕ್ಫ್ ಕಾಯ್ದೆ ತಿದ್ದುಪಡಿ ಸಂಬಂಧ ಸಂಸತ್ತಿನಲ್ಲಿ ಚರ್ಚೆ ನಡೆದು ಜಂಟಿ ಸದನ ಸಮಿತಿ ರಚನೆಯಾಗಿದೆ. ಸಂಸತ್ತಿನಲ್ಲಿ ವರದಿ ಸಲ್ಲಿಕೆಯಾದ ಬಳಿಕ ಮಾತನಾಡುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next