ಶ್ರೀನಗರ: ನೂತನವಾಗಿ ಚುನಾಯಿತವಾದ ಜಮ್ಮು-ಕಾಶ್ಮೀರ ವಿಧಾನಸಭೆ ಕಲಾಪ ಆರು ವರ್ಷಗಳ ನಂತರ ಸೋಮವಾರ (ನ.04) ನಡೆದಿದ್ದು, ಈ ಸಂದರ್ಭದಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ(PDP)ದ ಶಾಸಕ ವಾಹಿದ್ ಪರ್ರಾ, 2019ರ ಆಗಸ್ಟ್ ನಲ್ಲಿ ರದ್ದುಪಡಿಸಲಾದ ಆರ್ಟಿಕಲ್ 370 ಅನ್ನು ಮರು ಸ್ಥಾಪಿಸುವ ನಿರ್ಣಯ ಮಂಡಿಸಿದರು.
ರದ್ದುಗೊಂಡ ಕಲಂ 370 ಅನ್ನು ಮರು ಸ್ಥಾಪಿಸುವ ನಿರ್ಣಯ ಮಂಡಿಸುತ್ತಿದ್ದಂತೆಯೇ ಪಿಡಿಪಿ, ಬಿಜೆಪಿ ಶಾಸಕರ ನಡುವೆ ವಾಗ್ವಾದ ಆರಂಭಗೊಂಡು, ಕಲಾಪಕ್ಕೆ ಅಡ್ಡಿಪಡಿಸಿದ ಘಟನೆ ನಡೆಯಿತು.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರ ವಿಧಾನಸಭೆಯ ಸ್ಪೀಕರ್ ಆಗಿ ಏಳು ಬಾರಿ ಜಯಗಳಿಸಿದ್ದ ನ್ಯಾಷನಲ್ ಕಾನ್ಫರೆನ್ಸ್ ಶಾಸಕ ಅಬ್ದುಲ್ ರಹೀಮ್ ರಾಥರ್ ಅವರನ್ನು ಆಯ್ಕೆ ಮಾಡಿದ ನಂತರ, ಪುಲ್ವಾಮಾ ಶಾಸಕ ವಾಹೀದ್ ನಿರ್ಣಯ ಮಂಡಿಸಿದ್ದರು ಎಂದು ವರದಿ ತಿಳಿಸಿದೆ.
ಸರ್, ಈ ಸದನದ ಸ್ಪೀಕರ್ ಆಗಿ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಅನುಭವದಿಂದ ನಾವು ತುಂಬಾ ಕಲಿಯಬಹುದಾಗಿದೆ. ಇಂದು ನಾನು ಕಲಾಪದಲ್ಲಿ ನಮ್ಮ ಪಕ್ಷದ ಪರವಾಗಿ ನಿರ್ಣಯವೊಂದನ್ನು ಮಂಡಿಸುತ್ತಿದ್ದು, ರಾಜ್ಯದಲ್ಲಿ ಆರ್ಟಿಕಲ್ 370 ಅನ್ನು ಮರು ಜಾರಿಗೊಳಿಸಬೇಕು ಎಂದು ವಾಹೀದ್ ಸ್ಪೀಕರ್ ಆಯ್ಕೆಯ ಅಭಿನಂದನಾ ಭಾಷಣದಲ್ಲಿ ತಿಳಿಸಿದ್ದರು.
ಈ ನಿರ್ಣಯಕ್ಕೆ ಭಾರತೀಯ ಜನತಾ ಪಕ್ಷದ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿ, ನಿರ್ಣಯವನ್ನು ತಿರಸ್ಕರಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಅಬ್ದುಲ್ ರಹೀಮ್, ಇದು ನನ್ನ ವ್ಯಾಪ್ತಿಗೆ ಸೇರಿದ ವಿಷಯವಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ, ನಿರ್ಣಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.