ನವದೆಹಲಿ: ಪಾಕಿಸ್ತಾನದಲ್ಲಿ ಚೀನದ ಸೇನಾನೆಲೆ ಸ್ಥಾಪನೆಯಾಗಲಿದೆಯೇ? ಈ ಬಗ್ಗೆ ಸದ್ದಿಲ್ಲದೆ ಮಾತುಕತೆ ನಡೆದಿದೆ. ಚೀನದ ಹಿರಿಯ ರಾಜತಾಂತ್ರಿಕ ಅಧಿಕಾರಿ ಯಾಂಗ್ ಜೇಚಿ ನೇತೃತ್ವದ ನಿಯೋಗ ಇಸ್ಲಾಮಾಬಾದ್‌ಗೆ ಪ್ರವಾಸ ಕೈಗೊಂಡಿದ್ದ ವೇಳೆ, ಪಾಕಿಸ್ತಾನ ಸೇನಾ ಮುಖ್ಯಸ್ಥ ಜ.ಖಮರ್ ಜಾವೇದ್ ಬಾಜ್ವಾ ಜತೆಗೆ ಮಾತುಕತೆಯನ್ನೂ ನಡೆಸಿದೆ.
ಚೀನದ ಮಹತ್ವಾಕಾಂಕ್ಷೆಯ ಚೀನ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಅನ್ವಯ ಕೈಗೆತ್ತಿಕೊಳ್ಳಲಾಗಿರುವ ಯೋಜನೆಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಚೀನ ಸೇನೆಯ ನೆಲೆಯನ್ನು ಸ್ಥಾಪಿಸುವ ಬಗ್ಗೆ ಯಾಂಗ್ ಜೇಚಿ ಮಾತುಕತೆ ನಡೆಸಿದ್ದಾರೆ.
ವಿಶೇಷವಾಗಿ ಬಲೂಚಿಸ್ತಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳನ್ನು ರಕ್ಷಿಸಲು ಚೀನ ತನ್ನ ಯೋಧರನ್ನು ನಿಯೋಜಿಸಲು ಚಿಂತನೆ ಮಾಡಿದೆ. ಕಾರಿಡಾರ್ ಕಾಮಗಾರಿ ಗುರಿಯಾಗಿಸಿಕೊಂಡು ಉಗ್ರರು ನಡೆಸಲು ಉದ್ದೇಶಿಸಿದ್ದ ಸ್ಫೋಟವನ್ನು ಮೇನಲ್ಲಿ ಪಾಕಿಸ್ತಾನದ ಪೊಲೀಸರು ತಡೆದಿದ್ದರು ಮತ್ತು ಆತ್ಮಾಹುತಿ ಬಾಂಬರ್‌ವೊಬ್ಬನನ್ನು ಬಂಧಿಸಿದ್ದರು.
ಅದಕ್ಕಿಂತ ಮೊದಲು ಕರಾಚಿಯಲ್ಲಿ ಶಿಕ್ಷಣ ಸಂಸ್ಥೆಯೊಂದರ ಕ್ಯಾಂಪಸ್‌ನಲ್ಲಿ ನಡೆದಿದ್ದ ದಾಳಿಯಲ್ಲಿ ಮೂವರು ಚೀನ ನಾಗರಿಕರು ಮತ್ತು ಪಾಕಿಸ್ತಾನದ ನಾಗರಿಕ ಹತರಾಗಿದ್ದರು.
ಮೇಲ್ನೋಟಕ್ಕೆ ಕಾರಿಡಾರ್ ಕಾಮಗಾರಿಗಳ ರಕ್ಷಣೆಯಾಗಿ ಸೇನಾ ನೆಲೆ ಸ್ಥಾಪನೆ ಎಂದರೂ, ಪರೋಕ್ಷದಲ್ಲಿ ಅದು ಭಾರತದ ಸುರಕ್ಷತೆಗೆ ಧಕ್ಕೆಯಾಗಿಯೇ ಪರಿಣಮಿಸಲಿದೆ.
ಏಕೆಂದರೆ, ಚೀನ ಯಾವತ್ತೂ ಪಾಕಿಸ್ತಾನದ ಹಿತಕ್ಕಾಗಿಯೇ ಕೆಲಸ ಮಾಡುತ್ತದೆ ಎನ್ನುವುದು ಹಲವು ಉದಾಹರಣೆ ಗಳಿಂದ ಖಚಿತವಾಗಿದೆ. ಸೇನಾ ನೆಲೆ ಅಥವಾ ಹೊರ ಠಾಣೆಗಳ ಸ್ಥಾಪನೆ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ 40ರಿಂದ 50 ಬಿಲಿಯನ್ ಡಾಲರ್ ಮೊತ್ತದ ಹೆಚ್ಚುವರಿ ನೆರವನ್ನೂ ನೀಡಲು ಚೀನ ನಿಯೋಗ ವಾಗ್ಧಾನ ಮಾಡಿದೆ.