Advertisement

ಪಡುಬಿದ್ರಿಗೆ ಈಗ ನೀರಿನ ಚಿಂತೆ

06:40 AM Mar 24, 2018 | |

ಪಡುಬಿದ್ರಿ: ಪಡುಬಿದ್ರಿ ಈ ಬಾರಿ ಬೇಸಗೆಯಿಂದ ಬಸವಳಿವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ದಿನದ 24 ತಾಸೂ ಪಡುಬಿದ್ರಿ ಜನತೆಗೆ ನೀರು ಪೂರೈಸುತ್ತಿದ್ದ ಅಬ್ಬೇಡಿಯ ಬೋರ್‌ವೆಲ್‌ನಿಂದ ಬರುವ ಪೈಪ್‌ ಲೈನನ್ನು ಪೇಟೆಯಲ್ಲೆಲ್ಲಾ ನವಯುಗ ಕಂಪೆನಿಯವರು ಹೆದ್ದಾರಿ ಚತುಃಷ್ಪಥ ಕಾಮಗಾರಿ ಭರದಲ್ಲಿ ಒಡೆದು ಹಾಕಿದ್ದಾರೆ. ಇದರೊಂದಿಗೆ ವೆಲ್‌ಕಮ್‌ ಪಂಪ್‌ ಹೌಸ್‌ ಮತ್ತು ಮದ್ಮಲ್‌ ಕೆರೆಗಳು ಬತ್ತುತ್ತಿದ್ದು ಬೇಸಗೆ ಕಷ್ಟಕರವಾಗಿರಲಿದೆ.
 
ನವಯುಗ ನಿರ್ಲಕ್ಷ್ಯ
ಹೆದ್ದಾರಿ ಕಾಮಗಾರಿ ನಡೆಯುತ್ತಿ ರುವ ಅಬ್ಬೇಡಿ – ಪಡುಬಿದ್ರಿ ಪೇಟೆ, ಎಂಬಿಸಿ ರಸ್ತೆಯತ್ತ ಬಂದಿದ್ದ ಪೈಪ್‌ಲೈನ್‌ಗಳು ಸದ್ಯ ಒಡೆದು ಹೋಗಿದೆ. ಇದನ್ನೆಲ್ಲಾ ಸರಿಪಡಿಸಿಕೊಡುವುದಾಗಿ ಹೆದ್ದಾರಿ ನಿರ್ಮಾಣ ಕಾಮಗಾರಿ ಮಾಡುತ್ತಿರುವ ನವಯುಗ ಹೇಳಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ನೀರು ಪೂರೈಕೆಗೆ ಹೊಡೆತ ಬೀಳಲಿದೆ. ಪಡುಬಿದ್ರಿ ಗ್ರಾ. ಪಂ. ನ ನಡಾÕಲು ಗ್ರಾಮದ ಪಡುಬಿದ್ರಿ ಪೇಟೆ, ಬೇಂಗ್ರೆ, ಕಲ್ಲಟ್ಟೆ, ಕಾಡಿಪಟ್ಣ, ನಡಿಪಟ್ಣ, ಪಡುಹಿತ್ಲು, ಬ್ರಹ್ಮಸ್ಥಾನ, ಬೀಡು ಪ್ರದೇಶಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ.  

Advertisement

ಉಪಯೋಗವಾಗದ ಶುದ್ಧ ನೀರಿನ ಘಟಕ 
ಕಂಚಿನಡ್ಕ ಇನ್ಫೋಸಿಸ್‌ ಪ್ರಾಯೋಜಿತ ಶುದ್ಧ ನೀರಿನ ಘಟಕ ಸ್ಮಾರ್ಟ್‌ ಕಾರ್ಡ್‌ ಬಳಸಿ ನೀರು ಪಡೆವ ಪದ್ಧತಿಯದ್ದು. ಇದು ಐದಾರು ತಿಂಗಳ ಹಿಂದೆ ಆರಂಭವಾಗಿದ್ದು, ಕಳೆದ ಒಂದೂವರೆ ತಿಂಗಳಿಂದ ಸ್ಥಗಿತವಾಗಿವೆ. ಇನ್ನು ಬೋರ್ಡ್‌ ಶಾಲೆ ಬಳಿ ಇರುವ ಶುದ್ಧ ನೀರಿನ ಘಟಕವಿದ್ದರೂ, ಅಲ್ಲಿನ ನಿವಾಸಿಗಳಾರೂ ಇದರ ನೀರು ಪಡೆಯುತ್ತಿಲ್ಲ. 

ಕೆಲ ಉದ್ದಿಮೆದಾರರು, ಕಂಪೆನಿ, ಹೊಟೇಲಿಗರು, ಶಾಲೆಗೆ ನೀರು ಪಡೆ ಯುತ್ತಾರೆ. ಇದರಿಂದ ತಿಂಗಳಿಗೆ 500ರಿಂದ 1,000 ರೂ. ವರಮಾನ ಪಂಚಾಯತ್‌ಗೆ ಬರುತ್ತಿದೆ.

ನೀರಿನ ಸಮಸ್ಯೆ: ಸಭೆ
ಪಡುಬಿದ್ರಿ ಗ್ರಾ. ಪಂ. ನಿಂದ ಶಾಸಕರ ಕಾರ್ಯಪಡೆಯ ಮೂಲಕ ಕಾಮಗಾರಿ ನಿರ್ವಹಿಸಲು ಜಿಲ್ಲಾಧಿಕಾರಿಗಳಿಗೆ 5 ಲಕ್ಷ ರೂ. ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಎಪ್ರಿಲ್‌ನಲ್ಲಿ ವಿಶೇಷ ಗ್ರಾಮಸಭೆಯನ್ನು ಕುಡಿಯುವ ನೀರಿನ ಸಮಸ್ಯೆ ಕುರಿತಾಗಿ ಕರೆಯಲಿದ್ದೇವೆ. ಬೇಂಗ್ರೆಯಲ್ಲಿ ಇಲಾಖಾ ವತಿಯಿಂದ ಹೊಸತಾಗಿ ಕುಡಿಯುವ ನೀರಿನ ಘಟಕವೊಂದನ್ನು ಸ್ಥಾಪಿಸಲಾಗಿದ್ದು ತಿಂಗಳೊಳಗಾಗಿ ಪಂ.ಗೆ ಹಸ್ತಾಂತರವಾಗಲಿದೆ. 
-ಪಂಚಾಕ್ಷರಿ ಸ್ವಾಮಿ, 
ಪಡುಬಿದ್ರಿ ಗ್ರಾ.ಪಂ. ಪಿಡಿಒ

ಅನುದಾನಕ್ಕೆ ಪ್ರಸ್ತಾವನೆ ಎಲ್ಲೂರು ಗ್ರಾಮದ ಅಲ್ಲಲ್ಲಿ ಸ್ವಲ್ಪ ಮಟ್ಟಿನ ಸಮಸ್ಯೆಗಳಿವೆ. ಯುಪಿಸಿಎಲ್‌ನ 9 ಲಕ್ಷ ರೂ. ಗಳ ಸಿಎಸ್‌ಆರ್‌ ನಿಧಿ ಬಳಸಿಕೊಂಡು ಮಾಣಿಯೂರು, ಕುಕ್ಕಿಕಟ್ಟೆಗಳಲ್ಲಿ ಮೂರು ಬೋರ್‌ವೆಲ್‌ಗ‌ಳನ್ನು ತೋಡಲಾಗಿದೆ. ಪೆಜತ್ತಕಟ್ಟೆಯಲ್ಲಿಯೂ 900 ಮೀಟರ್‌ ಪೈಪ್‌ಲೈನ್‌ ಆಗಬೇಕಿದೆ. ಮಡಿವಾಳ ತೋಟದ 14 ಮನೆಗಳಿಗೆ ಕಡು ಬೇಸಗೆಯಲ್ಲಿ ನೀರಿಗೆ ಸಮಸ್ಯೆಯಾಗಬಹುದು. ಇದಕ್ಕಾಗಿ ಬೋರ್‌ವೆಲ್‌ ಮತ್ತು ಪೈಪ್‌ಲೈನ್‌ಗೆ ಶಾಸಕರ ಕಾರ್ಯಪಡೆಯ 5 ಲಕ್ಷ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 
– ಮಮತಾ ಶೆಟ್ಟಿ, 
ಎಲ್ಲೂರು ಗ್ರಾ.ಪಂ. ಪ್ರಭಾರ ಪಿಡಿಒ 

Advertisement

ಬೇಸಗೆಯ ಆರಂಭದಲ್ಲಿದ್ದೇವೆ.  ಹಲವು ಊರುಗಳಲ್ಲಿ  ಕುಡಿಯುವ ನೀರಿನ ಕೊರತೆ ಬಾಧಿಸತೊಡಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳಿಗೆ ಪರಿಹಾರ ಕ್ರಮ ಕೈಗೊಳ್ಳಲು ಅನುಕೂಲವಾಗಲೆಂಬುದು ಈ ಸರಣಿಯ ಆಶಯ.  ನಿಮ್ಮ ಭಾಗದಲ್ಲಿ ನೀರಿನ ಸಮಸ್ಯೆ ಇದ್ದರೆ ನಮಗೆ ತಿಳಿಸಬಹುದು.ವಾಟ್ಸಾಪ್‌ ನಂಬರ್‌ 91485 94259

– ಆರಾಮ

Advertisement

Udayavani is now on Telegram. Click here to join our channel and stay updated with the latest news.

Next