ಮುಂಬಯಿ: ಕರ್ಣಿ ಸೇನಾ ಸೇರಿದಂತೆ ರಜಪೂತ ಸಂಘಟನೆಗಳ ಪ್ರತಿಭಟನೆಗೆ ಕೊನೆಗೂ ಮಣಿದಿರುವ ಚಿತ್ರ ನಿರ್ಮಾಣ ಸಂಸ್ಥೆ ವಿಯಾಕಾಮ್ 18 ಮೋಷನ್ ಪಿಕ್ಚರ್ಸ್ ತಮ್ಮ ಸಿನಿಮಾ “ಪದ್ಮಾವತಿ’ಯ ಬಿಡುಗಡೆಯನ್ನು ಮುಂದೂ ಡಿದೆ. ರವಿವಾರ ನಿರ್ಮಾಣ ಸಂಸ್ಥೆಯು ಈ ಕುರಿತು ಪ್ರಕಟಣೆ ಹೊರಡಿ ಸಿದ್ದು, ಚಿತ್ರದ ಬಿಡುಗಡೆ ದಿನಾಂಕ ವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ರುವು ದಾಗಿ ಹೇಳಿದೆ. ಈ ಹಿಂದೆ ನಿರ್ಧರಿಸಿದಂತೆ, ಡಿ. 1 ರಂದು ಚಿತ್ರ ತೆರೆ ಕಾಣಬೇಕಿತ್ತು.
ಇದೇ ವೇಳೆ, ತಾನು ಯಾವುದೇ ಒತ್ತಡಕ್ಕೆ ಮಣಿದಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆಯಲ್ಲದೆ, ಈ ನೆಲದ ಕಾನೂ ನನ್ನು ಗೌರವಿಸುವ ಜವಾಬ್ದಾರಿಯುತ ಕಾರ್ಪೊರೇಟ್ ಸಂಸ್ಥೆಯಾಗಿ ಚಿತ್ರ ಬಿಡುಗಡೆ ಮುಂದೂಡಲು ನಿರ್ಧರಿಸಿ ದ್ದೇವೆ. ಸಿಬಿಎಫ್ಸಿ ಪ್ರಮಾಣಪತ್ರ ದೊರೆತ ಬಳಿಕ ಬಿಡುಗಡೆ ದಿನಾಂಕವನ್ನು ಘೋಷಿಸುತ್ತೇವೆ ಎಂದು ಸ್ಪಷ್ಟಪಡಿಸಿದೆ.
ಚಿತ್ರದಲ್ಲಿ ಐತಿಹಾಸಿಕ ರಾಣಿ ಪದ್ಮಾವತಿಯ ಬಗ್ಗೆ ಅವ ಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ರಾಜಸ್ಥಾನದ ಕರ್ಣಿ ಸೇನೆ ಸೇರಿದಂತೆ ಹಲವಾರು ಸಂಘಟನೆಗಳು ಆರೋಪಿಸಿದ್ದು, ಚಿತ್ರದ ನಿಷೇಧಕ್ಕೆ ಒತ್ತಾಯಿಸಿದ್ದವು. ಜೈಪುರ, ಮುಂಬಯಿ, ಬೆಂಗಳೂರು ಮುಂತಾದೆಡೆ ಚಿತ್ರದ ಬಿಡುಗಡೆ ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು. ಇನ್ನೊಂದೆಡೆ, ಚಿತ್ರದಲ್ಲಿ ಆಕ್ಷೇಪಾರ್ಹ ಸಂಗತಿಗಳಿಲ್ಲ ಎಂಬುದನ್ನು ಮನ ವರಿಕೆ ಮಾಡಲು ಕೆಲವು ರಾಷ್ಟ್ರೀಯ ಮಾಧ್ಯಮಗಳಿಗೆ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿದ್ದಕ್ಕೆ ಚಿತ್ರ ತಂಡದ ವಿರುದ್ಧ ಕೇಂದ್ರೀಯ ಸೆನ್ಸಾರ್ ಮಂಡಳಿಯೂ ವಾಗ್ಧಾಳಿ ನಡೆಸಿತ್ತು. ಪ್ರಮಾಣ ಪತ್ರ ಪಡೆಯದೇ ಚಿತ್ರವನ್ನು ಪ್ರದರ್ಶಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.
ಶಬಾನಾ ಕಿಡಿ: ಪದ್ಮಾವತಿ ಚಿತ್ರ ತಂಡದ ಬೆಂಬಲಕ್ಕೆ ಬಂದಿ ರುವ ಹಿರಿಯ ನಟಿ ಶಬಾನಾ ಆಜ್ಮಿ, “”ಪದ್ಮಾವತಿ ಚಿತ್ರ ತಂಡಕ್ಕೆ ಸರಕಾರ, ಸರಕಾರಿ ಸಂಸ್ಥೆಗಳಿಂದಲೇ ಕಿರುಕುಳ ನೀಡ ಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ಹೊಸದಿಲ್ಲಿಯಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು, “”ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್ ಸರಕಾರಗಳು ಚಿತ್ರದ ಬಿಡುಗಡೆ ಮುಂದೂಡುವಂತೆ ಉದ್ದೇಶಪೂರ್ವಕವಾಗಿ ಕೇಂದ್ರ ಸರಕಾರವನ್ನು ಆಗ್ರಹಿಸಿವೆ. ಚಿತ್ರೀಕರಣದ ವೇಳೆ ಚಿತ್ರತಂಡವನ್ನು ಬೆದರಿಸಲು ಕೆಲ ದುಷ್ಕರ್ಮಿಗಳು ಗಾಳಿ ಯಲ್ಲಿ ಗುಂಡು ಹಾರಿಸಿದ್ದರು. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ರಾಜಸ್ಥಾನ ಸಿಎಂ ವಸುಂಧರಾ ರಾಜೇ, “ಜಾಣತನ’ದಿಂದ ವರ್ತಿಸುತ್ತಿದ್ದಾರೆ. ಇನ್ನು, ಸೆನ್ಸಾರ್ ಮಂಡಳಿ ಚಿತ್ರದ ಸೆನ್ಸಾರ್ ಮಾಡಲು ಇಲ್ಲಸಲ್ಲದ ಕುಂಟು ನೆಪ ಹೇಳುತ್ತಿದೆ” ಎಂದು ಆಕ್ಷೇಪಿಸಿದರು.
ತಲೆ ಕಡಿದ್ರೆ 10 ಕೋಟಿ, ಸಜೀವ ದಹನಕ್ಕೆ 1 ಕೋಟಿ!
“ಪದ್ಮಾವತಿ ಚಿತ್ರದ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಬನ್ಸಾಲಿ ಅವರ ತಲೆ ಕತ್ತರಿಸಿದರೆ 10 ಕೋಟಿ ರೂ. ಬಹುಮಾನ ನೀಡುತ್ತೇನೆ’ ಎಂದು ಹರ್ಯಾಣದ ಬಿಜೆಪಿ ನಾಯಕರೊಬ್ಬರು ಘೋಷಿಸಿದ್ದಾರೆ. ದೀಪಿಕಾ ಪಡುಕೋಣೆ ಅವರ ಮೂಗು ಕತ್ತರಿಸುವುದಾಗಿ ಕರ್ಣಿ ಸೇನಾ ಬೆದರಿಕೆ ಹಾಕಿದ ಬೆನ್ನಲ್ಲೇ ಬಿಜೆಪಿಯ ಮುಖ್ಯ ಮಾಧ್ಯಮ ಸಂಚಾಲಕ ಸೂರಜ್‌ಪಾಲ್ ಅಮು ಎಂಬವರು ಈ ಘೋಷಣೆ ಮಾಡಿದ್ದಾರೆ. ಇನ್ನೊಂದೆಡೆ, ದೀಪಿಕಾರನ್ನು ಸಜೀವ ದಹನ ಮಾಡಿದರೆ, ಅಂಥವರಿಗೆ 1 ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ಉತ್ತರಪ್ರದೇಶದ ಅಖೀಲ ಭಾರತೀಯ ಕ್ಷತ್ರಿಯ ಮಹಾಸಭಾ (ಎಬಿಕೆಎಂ) ಸದಸ್ಯರು ಘೋಷಿಸಿದ್ದಾರೆ. ಅಲ್ಲದೆ ನಟಿಯ ನೂರಾರು ಪ್ರತಿಕೃತಿಯನ್ನು ದಹಿಸಿ ಪ್ರತಿಭಟಿಸಿದ್ದಾರೆ.
ಪದ್ಮಾವತಿ ಚಿತ್ರದಲ್ಲಿನ ವಿವಾದಾತ್ಮಕ ಅಂಶಗಳನ್ನುತೆಗೆದುಹಾಕುವವರೆಗೂ ನಮ್ಮ ಸರಕಾರವು ಉತ್ತರಪ್ರದೇಶದಲ್ಲಿ ಆ ಚಿತ್ರದ ಬಿಡುಗಡೆಗೆ ಅವಕಾಶವನ್ನೇ ನೀಡುವುದಿಲ್ಲ.
ಕೇಶವ್ ಪ್ರಸಾದ್ ಮೌರ್ಯ, ಉ.ಪ್ರದೇಶ ಡಿಸಿಎಂ