Advertisement

Padil: ಕಾಂಕ್ರೀಟ್‌ ರಸ್ತೆ ಅಂಚಿನಲ್ಲಿ ಅಪಾಯ!

02:20 PM Dec 09, 2024 | Team Udayavani |

ಪಡೀಲ್‌: ಪಡೀಲ್‌ನ ಕೊಡಕ್ಕಲ್‌ ಜನಪ್ರಿಯ ಆಸ್ಪತ್ರೆಯ ಪಕ್ಕದ ವೈದ್ಯನಾಥ ನಗರ ದೇವಸ್ಥಾನ ರಸ್ತೆಗೆ ಕಾಂಕ್ರೀಟ್‌ ಹಾಕಿ ಸುಮಾರು ನಾಲ್ಕು ತಿಂಗಳುಗಳು ಕಳೆದಿವೆ. ಆದರೆ, ಸರಿಯಾಗಿ ಫಿನಿಶಿಂಗ್‌ ವರ್ಕ್‌ ಮಾಡದ ಕಾರಣ ಸ್ಥಳೀಯ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ.

Advertisement

ಅಳಪೆ ಉತ್ತರ ವಾರ್ಡ್‌ ವ್ಯಾಪ್ತಿಗೆ ಸೇರಿದ ಈ ಪ್ರದೇಶದಲ್ಲಿ ಹಿಂದೆ ಇದ್ದ ಡಾಮರು ರಸ್ತೆಯ ಮೇಲೆಯೇ ಕಾಂಕ್ರೀಟ್‌ ರಸ್ತೆ ಕಾಮಗಾರಿ ನಡೆಸಲಾಗಿದೆ. ಇದರಿಂದ ರಸ್ತೆಯೇನೋ ಚೆನ್ನಾಗಿದೆ. ಆದರೆ, ರಸ್ತೆಯನ್ನು ಅತಿಯಾಗಿ ಎತ್ತರಿಸಿದ್ದು ಮತ್ತು ಅಂಚುಗಳನ್ನು ಸರಿಪಡಿಸದೆ ಇರುವುದರಿಂದ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ರಸ್ತೆ ಎತ್ತರವಾಗಿದೆ. ಅದರ ಅಂಚು ತಗ್ಗಿನಲ್ಲಿದ್ದು, ನಡೆದುಕೊಂಡು ಹೋಗುವವರಿಗೆ ಮತ್ತು ದ್ವಿಚಕ್ರ ವಾಹನ, ಸೈಕಲ್‌ನಲ್ಲಿ ಹೋಗುವವರಿಗೆ ಉರುಳಿ ಬೀಳುವ ಆತಂಕ ಕಾಡುತ್ತಿದೆ. ಪಕ್ಕದ ಮನೆಗಳು ರಸ್ತೆಗಿಂತ ತಗ್ಗಿನಲ್ಲಿ ಇರುವುದರಿಂದ ಮಳೆಯ ನೀರೆಲ್ಲ ಹರಿದು ಬಂದು ಮನೆಗಳ ಅಂಗಳದಲ್ಲಿ ಸಂಗ್ರಹಗೊಂಡು ಸಮಸ್ಯೆಯಾಗುತ್ತಿದೆ.

ಕಾಲುವೆಗೆ ಬೀಳುವ ಆತಂಕ
ಈ ರಸ್ತೆಯ ಒಂದು ಬದಿಯಲ್ಲಿ ಮಳೆ ನೀರು ಹರಿದು ಹೋಗುವ ಸಣ್ಣ ಕಾಲುವೆ ಇದೆ. ರಸ್ತೆ, ಕಾಲುವೆ ನಡುವೆ ತಡೆಗೋಡೆ ಇಲ್ಲದ ಕಾರಣ, ವಾಹನ ಚಲಾಯಿಸುವ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಭಾರೀ ಅಪಾಯ ಉಂಟಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಾಸಕರು, ಕಾರ್ಪೋರೆಟರ್‌ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅವರು.

Advertisement

ಕಾಮಗಾರಿ ಬಳಿಕ ಅಗಲ ಕಿರಿದು
ಈ ರಸ್ತೆಯಲ್ಲಿ ಹಿಂದೆ ಎರಡು ವಾಹನಗಳು ಸರಾಗವಾಗಿ ಹೋಗುತ್ತಿದ್ದವು. ಕಾಮಗಾರಿ ಬಳಿಕ ರಸ್ತೆ ಅಗಲ ಕಿರಿದಾಗಿದೆ. ಹೀಗಾಗಿ ಎರಡು ವಾಹನಗಳು ಹೋಗುವುದು ಕಷ್ಟವಾಗಿದೆ. ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿ ನಾಲ್ಕು ತಿಂಗಳಾದರೂ ಇದನ್ನು ಸರಿಪಡಿಸುವ ಯಾವ ಪ್ರಯತ್ನವೂ ನಡೆದಿಲ್ಲ. ಒಂದು ಭಾಗದಲ್ಲಿ 10 ಮೀ.ಗಳಷ್ಟು ದೂರವನ್ನು ಕಾಂಕ್ರೀಟ್‌ ಕಾಮಗಾರಿ ನಡೆಸದೆ ಹಾಗೇ ಬಿಟ್ಟಿದ್ದಾರೆ. ಇದರಿಂದಲೂ ಸಂಚಾರಕ್ಕೆ ಅನಾನುಕೂಲವಾಗಿದೆ. ಇನ್ನದರೂ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ, ರಸ್ತೆಯನ್ನು ಸಂಚಾರ ಯೋಗ್ಯವನ್ನಾಗಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಏನೇನು ಸಮಸ್ಯೆ?
1. ಹಿಂದಿನ ರಸ್ತೆಯ ಮೇಲೆಯೇ ಕಾಂಕ್ರೀಟ್‌ ಹಾಕಿರುವುದರಿಂದ ತುಂಬಾ ಎತ್ತರವಾಗಿದೆ.
2.ಮಧ್ಯಭಾಗದಲ್ಲಿ ಮಾತ್ರ ರಸ್ತೆ ನಿರ್ಮಿಸಿದ್ದರಿಂದ ಅಂಚುಗಳು ಹಾಗೇ ಉಳಿದಿವೆ.
3. ದೊಡ್ಡ ವಾಹನಗಳು ಎದುರಾದಾಗ ಕೆಳಗೆ ಇಳಿಸಲೂ ಆಗದೆ ಮುಂದೆ ಹೋಗಲೂ ಆಗದೆ ಸಮಸ್ಯೆ
4. ದ್ವಿಚಕ್ರ ವಾಹನ ಸವಾರರಿಗೆ ರಸ್ತೆಯಿಂದ ಕೆಳಗೆ ಇಳಿಸಲು ಸಾಧ್ಯವಿಲ್ಲ , ಉರುಳಿಬೀಳುವ ಭಯ.
5. ರಸ್ತೆ, ಮನೆಗಳ ಅಂಗಳದ ಮಧ್ಯೆ ತುಂಬಾ ವ್ಯತ್ಯಾಸವಿದೆ. ಹೀಗಾಗಿ ಸ್ಥಳೀಯರಿಗೆ ತಮ್ಮ ದ್ವಿಚಕ್ರ ವಾಹನ, ಕಾರು ಮೊದಲಾದವುಗಳನ್ನು ಮನೆ ಕಾಂಪೌಂಡ್‌ ಒಳಗೆ ತೆಗೆದುಕೊಂಡು ಹೋಗಲೂ ಸಾಧ್ಯವಾಗುತ್ತಿಲ್ಲ.
6. ರಸ್ತೆಗಾಗಿ ಕೆಲವು ಮನೆಯವರು ರಸ್ತೆಗಾಗಿ ಜಾಗ ಬಿಟ್ಟುಕೊಟ್ಟಿದ್ದಾರೆ. ಕೆಲವರ ಮನೆಯ ಅವರಣ ಗೋಡೆಯನ್ನು ಕೆಡವಿ ಹಾಕಲಾಗಿದೆ.
7. ಇಲ್ಲಿ ಕೆಲವು ಕಡೆ ರಸ್ತೆಯ ಅಂಚಿನಲ್ಲೇ ಚರಂಡಿಯೂ ಇದೆ. ಇಳಿಜಾರಿಗೆ ಕಾಲಿಟ್ಟು ಜಾರಿದರೆ ಚರಂಡಿಗೆ !

ಏನು ಮಾಡಬೇಕು?
-ಕಾಂಕ್ರೀಟ್‌ ರಸ್ತೆಯ ಬದಿಗೆ ಕನಿಷ್ಠ ಮಣ್ಣು ಹಾಕಿ ಸಮತಟ್ಟು ಮಾಡುವ ಕೆಲಸವಾದರೂ ಮಾಡಿದರೆ, ವಾಹನಗಳನ್ನು ಚಲಾಯಿಸಲು ಅನುಕೂಲ. ನಡೆದುಕೊಂಡು ಹೋಗುವವರಿಗೂ ಸ್ವಲ್ಪ ನಿರಾಳತೆ.
-ರಸ್ತೆ ಸಮತಟ್ಟುಗೊಳಿಸಿದರೆ ರಸ್ತೆಯಿಂದ ಮನೆಯ ಆವರಣದೊಳಗೆ ವಾಹನ ತೆಗೆದುಕೊಂಡು ಹೋಗಲು ಅನುಕೂಲ.
-ರಸ್ತೆಯ ಪಕ್ಕದಲ್ಲಿ ಮುರಿದು ಹಾಕಿರುವ ಆವರಣಗೋಡೆಗಳನ್ನು ಮರು ನಿರ್ಮಾಣ ಮಾಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next