Advertisement

ಪಡೀಲ್‌: ಮತ್ತೊಂದು ಹೊಸ ರೈಲ್ವೆ ಸೇತುವೆ 

11:30 AM Dec 13, 2017 | |

ಮಹಾನಗರ: ರಾ.ಹೆ. 73ರ ಪಡೀಲ್‌ನಲ್ಲಿ ನಿರ್ಮಾಣವಾಗಿರುವ ಹೊಸ ರೈಲ್ವೇ ಕೆಳಸೇತುವೆಯ ಪಕ್ಕದಲ್ಲೇ ಹಳೆ ಕೆಳಸೇತುವೆಗೆ ಪರ್ಯಾಯವಾಗಿ
ಹೊಸ ಸೇತುವೆಯೊಂದು ನಿರ್ಮಾಣವಾಗಲಿದ್ದು, ರೈಲ್ವೇ ಇಲಾಖೆಯು ಮುಂದಿನ ವಾರದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಿದೆ.

Advertisement

ಈ ಹಿನ್ನೆಲೆಯಲ್ಲಿ ಹೊಸ ಸೇತುವೆಯಲ್ಲಿ ಏಕಮುಖ ಸಂಚಾರದ ಬದಲಾಗಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೊಸ ಸೇತುವೆ ನಿರ್ಮಾಣದ ಬಳಿಕ ಸೇತವೆಯ ಸಂಪರ್ಕ ರಸ್ತೆಯ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮಾಡಲಿದ್ದು, ಅಲ್ಲಿಯವರೆಗೆ ದ್ವಿಮುಖ ಸಂಚಾರವೇ ಚಾಲ್ತಿಯಲ್ಲಿರುತ್ತದೆ.

ತೆರೆದ ಹಳೆ ಕೆಳಸೇತುವೆ
ರೈಲು ಸಂಚರಿಸುವ ಸಂದರ್ಭದಲ್ಲಿ ಕೆಳಸೇತುವೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಕೊಳಚೆ ನೀರು ಬೀಳುತ್ತಿದೆ ಎಂಬ ದೂರು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ದ್ವಿಚಕ್ರ ವಾಹನ ಸವಾರರು ತೀವ್ರ ತರದ ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಮಾಹಿತಿ ಇದ್ದವರು ರೈಲು ತೆರಳುವ ಸಂದರ್ಭದಲ್ಲಿ ತಮ್ಮ ಬೈಕ್‌ ನಿಲ್ಲಿಸಿ, ಆಮೇಲೆ ಪ್ರಯಾಣ ಮುಂದುವರಿಸುತ್ತಿದ್ದರು.

ಹೀಗಾಗಿ, ಬಾಕ್ಸ್‌ ಮಾದರಿಯಲ್ಲಿ ಹೊಸ ಸೇತುವೆ ನಿರ್ಮಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದು ತಗ್ಗು ಪ್ರದೇಶವಾದ ಕಾರಣ ಮಳೆಗಾಲದಲ್ಲಿ ಸುತ್ತಲಿನ ನೀರು ಹೆದ್ದಾರಿಗೆ ಇಳಿದು ಬಂದು ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಹೆಚ್ಚು ತೇವಾಂಶದ ಹಿನ್ನೆಲೆಯಲ್ಲಿ ಹೆದ್ದಾರಿಯೂ ಪದೇ ಪದೇ ಹದಗೆಡುತ್ತಿತ್ತು. ಈಗ ಸೇತುವೆ ನಿರ್ಮಾಣದ ಬಳಿಕ ಹೆದ್ದಾರಿಯನ್ನು ಎತ್ತರಿಸಲು ಎನ್‌ಎಚ್‌ಎಐ ನಿರ್ಧರಿಸಿದೆ. 

5.50 ಮೀ. ಎತ್ತರ
ಪಡೀಲಿನಲ್ಲಿ ಪ್ರಸ್ತುತ ನಿರ್ಮಾಣವಾಗಿರುವ ಹೊಸ ಸೇತುವೆಯ ಎತ್ತರದ ಕುರಿತು ಹಲವು ಆರೋಪಗಳು ಕೇಳಿ ಬಂದರೂ, ಪ್ರಸ್ತುತ ಎಲ್ಲ ವಾಹನಗಳೂ ಸರಾಗವಾಗಿ ಸಾಗುತ್ತಿವೆ. ಅಂದರೆ ಇಂಡಿಯನ್‌ ರೋಡ್ಸ್‌ ಕಾಂಗ್ರೆಸ್‌ (ಐಆರ್‌ಸಿ) ನಿಯಮದಂತೆ 5.50 ಮೀ. ಎತ್ತರದಲ್ಲಿ ಹಾಗೂ 12.50 ಮೀ.ಅಗಲದಲ್ಲಿ ನಿರ್ಮಿಸಲಾಗಿದೆ. ರೈಲ್ವೆ ಇಲಾಖೆ ನಿರ್ಮಿಸುವ ಹೊಸ ಕೆಳ ಸೇತುವೆಯೂ ಇಷ್ಟೇ ಎತ್ತರವನ್ನು ಹೊಂದಲಿದೆ. ಆರ್‌ಟಿಒ ನಿಯಮದಂತೆ ಕಂಟೈನರ್‌ ಸಹಿತ ಒಂದು ವಾಹನವು ಗರಿಷ್ಠ 4.8 ಮೀ. ಎತ್ತರವನ್ನು ಮಾತ್ರ ಹೊಂದಿರಬಹುದು. ಹೆದ್ದಾರಿಯ ಎತ್ತರವೂ ಹಾಲಿ 1.5 ಮೀಟರ್‌ನಿಂದ 1.8 ಮೀ.ಗೆ ಹೆಚ್ಚುವ ಸಾಧ್ಯತೆ ಇದೆ.

Advertisement

ಕೋನ್‌ಗಳ ಅಳವಡಿಕೆ
ಹೆದ್ದಾರಿಯ ಹೊಸ ಕೆಳಸೇತುವೆಯಲ್ಲಿ ರಸ್ತೆ ಸುಸಜ್ಜಿತವಾಗಿರುವುದರಿಂದ ವಾಹನಗಳು ಸಹಜವಾಗಿಯೇ ವೇಗದಲ್ಲಿ ಚಲಿಸುತ್ತವೆ. ಪ್ರಸ್ತುತ ದ್ವಿಮುಖ ಸಂಚಾರಕ್ಕೆಅವಕಾಶ ನೀಡಿರುವುದರಿಂದ ಸಂಭಾವ್ಯ ಅಪಘಾತಗಳನ್ನು ತಡೆಗಟ್ಟಲು ಹೆದ್ದಾರಿ ಮಧ್ಯದಲ್ಲಿ ಎನ್‌ಎಚ್‌ಎಐ ಕೋನ್‌  ಗಳನ್ನು ಅಳವಡಿಸಿದೆ. ಸಾಮಾನ್ಯವಾಗಿ ಮೂರು ಮೀ. ಅಂತರದಲ್ಲಿ ಕೋನ್‌ ಗಳನ್ನು ಅಳವಡಿಸಲಾಗುತ್ತದೆ. ಆದರೆ, ಇಲ್ಲಿ ಹೆದ್ದಾರಿ ತಿರುವಿನಿಂದ ಕೂಡಿದ್ದು, ಹೆಚ್ಚಿನ ಸಂಖ್ಯೆಯ ಕೋನ್‌ಗಳನ್ನು ಅಳವಡಿಸಲಾಗಿದೆ. ರಾತ್ರಿ ವಾಹನ ಚಾಲಕರಿಗೆ ರಸ್ತೆಯ ಅಂಚುಗಳನ್ನು ಗುರುತಿಸಲು ಅನುಕೂಲವಾಗುವಂತೆ ರಿಫ್ಲೆಕ್ಟರ್‌ಗಳನ್ನೂ ಅಳವಡಿಸಲಾಗಿದೆ.

ವಾಹನ ಸಂಚಾರ ನಿಷೇಧ
ಪಡೀಲಿನಲ್ಲಿ ಹಳೆ ಕೆಳಸೇತುವೆಗೆ ಪರ್ಯಾಯವಾಗಿ 5 ಕೋಟಿ ರೂ. ಗಳಲ್ಲಿ ಹೊಸ ಸೇತುವೆ ನಿರ್ಮಾಣವಾಗಲಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಕಳೆದ ವಾರದಿಂದ ಸಮತಟ್ಟು ಕೆಲಸವನ್ನು ರೈಲ್ವೇ ಇಲಾಖೆ ಕೈಗೆತ್ತಿಕೊಂಡಿದೆ. ಮುಂದಿನ ವಾರದಿಂದ ಸೇತುವೆಯ
ಕಾಮಗಾರಿ ಆರಂಭಗೊಳ್ಳಲಿದೆ. ಎರಡೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

5 ಕೋಟಿ ರೂ. ವೆಚ್ಚ
ಪ್ರಸ್ತುತ ನಾವು ಲೆವೆಲಿಂಗ್‌ ಕಾಮಗಾರಿ ಆರಂಭಿಸಿದ್ದು, ಮುಂದಿನ ವಾರದಿಂದ ಸೇವೆಯ ಮುಖ್ಯ ಕಾಮಗಾರಿ ಆರಂಭಗೊಳ್ಳಲಿದೆ. 5 ಕೋಟಿ ರೂ.ಗಳಲ್ಲಿ ಕಾಮಗಾರಿ ನಡೆಯಲಿದ್ದು, ಎರಡೂವರೆ ತಿಂಗಳಲ್ಲಿ ಪೂರ್ತಿಗೊಳಿಸಲಿದ್ದೇವೆ. ಬಳಿಕ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಎನ್‌ಎಚ್‌ ಎಐ ನಿರ್ವಹಿಸಲಿದೆ.
ಎಂ. ಪ್ರವೀಣ, ಎಕ್ಸಿಕ್ಯುಟಿವ್‌ ಎಂಜಿನಿಯರ್‌(ಕನ್‌ಸ್ಟ್ರಕ್ಷನ್‌),
   ಸದರ್ನ್ ರೈಲ್ವೇ, ಮಂಗಳೂರು

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next