ಇರುವೆ ಸಹಬಾಳ್ವೆಯ ವಿಸ್ಮಯ ಮೂಡಿಸುವ ಕೀಟವಾಗಿದೆ. ಇವುಗಳ ಒಗ್ಗಟ್ಟಿನ ಜೀವನ ಕೌಶಲ ನಿಜಕ್ಕೂ ಹುಬ್ಬೇರಿಸುವಂತಹದ್ದು. ಇರುವೆಗಳಲ್ಲಿ ಅಂದಾಜು 15 ಸಾವಿರ ಪ್ರಭೇದಗಳಿದ್ದು, ಇವು ಸಂಘಜೀವಿ ಎನ್ನುವುದೇ ಮಹತ್ವದ ಅಂಶ. ಇರುವೆ ಅದ್ಭುತವಾದ ಟೀಮ್ ವರ್ಕ್ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಕ್ಕೆ ಹೆಸರಾದ ಪುಟ್ಟ ಜೀವಿಯಾಗಿದೆ. ಇದೀಗ ಇರುವೆಗಳ ಕೌಶಲ್ಯದ ಕರಾಮತ್ತಿನ ಬಗ್ಗೆ ಮತ್ತೊಮ್ಮೆ ಇಂಟರ್ನೆಟ್ ನಲ್ಲಿ ಸದ್ದು ಮಾಡಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಹರಿಯುತ್ತಿರುವ ನೀರನ್ನು ದಾಟಲು ನಿರ್ಮಿಸಿರುವ ಇರುವೆಗಳ ವಿಶಿಷ್ಟ ಸಾಮರ್ಥ್ಯದ ಕೌಶಲ ವೈರಲ್ ಆಗಿದ್ದು, ಇದು ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ…
ಇರುವೆಗಳ ಚತುರ ಎಂಜಿನಿಯರಿಂಗ್ ಕೌಶಲ್ಯ!
Nature is Amazing ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ ವಿಡಿಯೋದಲ್ಲಿ, ಇರುವೆಗಳ ಎಂಜಿನಿಯರಿಂಗ್ ಪ್ರತಿಭೆ ಪ್ರದರ್ಶನ ಬೆರಗು ಮೂಡಿಸುತ್ತದೆ. ನೀರಿನ ಮೇಲೆ ಇರುವೆಗಳ ಉದ್ದನೆಯ ಸಾಲು ಇದ್ದು, ಸೇತುವೆ ನಿರ್ಮಿಸಿದ್ದನ್ನು ಕಾಣಬಹುದಾಗಿದ್ದು, ಇದು ಇರುವೆಗಳು ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗಲು ಅನುಕೂಲ ಕಲ್ಪಿಸಲಿದ್ದು, ಇದು ಇರುವೆಗಳ ಟೀಮ್ ವರ್ಕ್ ಸಾಮರ್ಥ್ಯ ತೋರಿಸುವುದರ ಜತೆಗೆ ಅವುಗಳ ಅದ್ಭುತ ಎಂಜಿನಿಯರಿಂಗ್ ಕೌಶಲದ ವಿರಾಟ್ ರೂಪ ಪ್ರದರ್ಶಿಸಿದಂತಾಗಿದೆ.
ಎಕ್ಸ್ ಖಾತೆಯಲ್ಲಿನ ಈ ವಿಡಿಯೋವನ್ನು ಆರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇರುವೆಗಳ ಎಂಜಿನಿಯರಿಂಗ್ ಕೌಶಲ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಕುತೂಹಲ ಹುಟ್ಟಿಸಲು ಕಾರಣವಾಗಿದೆ. ಇರುವೆಗಳ ದಣಿವರಿಯದ ಕಾರ್ಯಕ್ಷಮತೆಗೆ ಹಲವು ಬಳಕೆದಾರರು ಬಹುಪರಾಕ್ ಹೇಳಿದ್ದಾರೆ.
ನೆಟ್ಟಿಗರ ಅಚ್ಚರಿಯ ಪ್ರತಿಕ್ರಿಯೆ:
ಇರುವೆಗಳ ಸೇತುವೆ ಕಟ್ಟುವಿಕೆಯ ವಿಡಿಯೋಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರತಿಕ್ರಿಯೆ ಹರಿದು ಬಂದಿದೆ. ಇದೊಂದು ಅದ್ಭುತ! ಪ್ರಕೃತಿ ಎಂದಿಗೂ ವಿಸ್ಮಯಗೊಳಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇರುವೆಗಳು ನಿಜಕ್ಕೂ ಒಗ್ಗಟ್ಟಿನ ಕಾರ್ಯದ ಮತ್ತು ತಂತ್ರದ ಮಾಸ್ಟರ್ಸ್ ಗಳಾಗಿದ್ದಾರೆ ಎಂದು ಮತ್ತೊಬ್ಬ ಬಳಕೆದಾರರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
“ಇದು ಮನುಷ್ಯನ ಎಂಜಿನಿಯರಿಂಗ್ ಕೆಲಸಕ್ಕಿಂತ ಅದ್ಭುತವಾಗಿದೆ ಎಂದು” ಮೂರನೇ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. “ ಅಬ್ಬಾ ಇರುವೆಗಳು ಹೇಗೆ ಕರಾರುವಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತವೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇದು ನಿಜಕ್ಕೂ ಪ್ರೇರಣದಾಯಕ ಎಂದು ಮತ್ತೊಬ್ಬ ಬಳಕೆದಾರರು ತಿಳಿಸಿದ್ದಾರೆ.