Advertisement

ಕರಾವಳಿಯಲ್ಲಿ ಜಾನುವಾರುಗಳಿಗೆ ಬೈಹುಲ್ಲು ಕೊರತೆ

05:49 PM Jan 26, 2022 | Team Udayavani |

ಕುಂದಾಪುರ: ಭತ್ತ ಬೆಳೆದರೂ ಕೈಗೆಟುಕದ ಬೈಹುಲ್ಲು ಎಂಬಂತಾಗಿದೆ ಕರಾವಳಿಯ ರೈತರ ಸ್ಥಿತಿ. ಜಾನುವಾರು ಗಳಿಗೆ ಮೇವಿನ ಕೊರತೆ ಉಂಟಾಗಿ ಕೆಎಂಎಫ್ ನಿಂದ ಸರಬರಾಜು ಆಗುವ ಆಹಾರದ ಸರಬರಾಜಿನಲ್ಲಿ ವ್ಯತ್ಯಯ ಆಗಿತ್ತು. ಇದು ಕೂಡ ಭತ್ತದ ಹೊಟ್ಟಿನ ಕೊರತೆಯ ಸಮಸ್ಯೆಯಿಂದ ಸೃಷ್ಟಿಯಾದುದು. ಈಗ ನೇರವಾಗಿ ಬೈಹುಲ್ಲಿನ ಕೊರತೆ ಉಂಟಾಗಿದೆ. ಪರಿಣಾಮ ಬೈಹುಲ್ಲಿನ ದರ ಗಗನಕ್ಕೇರಿದೆ.

Advertisement

ಅಕಾಲಿಕ ಮಳೆ
ಮಲೆನಾಡು, ಕರಾವಳಿ ಸೇರಿದಂತೆ ಎಲ್ಲೆಡೆ ನವೆಂಬರ್‌, ಡಿಸೆಂಬರ್‌ನಲ್ಲೂ ಅಕಾಲಿಕ ಮಳೆಯಾಗಿದೆ. ಚಂಡಮಾರುತದ ಪರಿಣಾಮ ಉಂಟಾಗಿದೆ. ಇದರಿಂದಾಗಿ ದ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಅಷ್ಟೇ ಅಲ್ಲದೆ ಭತ್ತದ ನಾಡೆಂದೇ ಗುರುತಿಸಲ್ಪಟ್ಟ ದಾವಣಗೆರೆ ಕೂಡ ಬೆಳೆನಾಶಕ್ಕೆ ಒಳಗಾಗಿದೆ. ಗದ್ದೆಯಲ್ಲೇ ಪೈರು ಕೊಳೆಯುವ ಸ್ಥಿತಿಗೆ ಬಂದು ತಲುಪಿತ್ತು.

ಬೈಹುಲ್ಲು ನಾಶ
ಒಂದು ಅಂದಾಜಿನ ಪ್ರಕಾರ ಶೇ.65ರಷ್ಟು ಬೆಳೆ ನಾಶವಾಗಿದೆ. ಇದೇ ಉತ್ಪಾತ ಬೈಹುಲ್ಲಿನ ಮೇಲೂ ಆಗಿದೆ. ಅಷ್ಟೂ ಜಿಲ್ಲೆಗಳಲ್ಲಿ ಶೇ.65ರಷ್ಟು ಬೈಹುಲ್ಲು ಮಳೆಯಿಂದಾಗಿ ಗದ್ದೆಯಲ್ಲೇ ಕೊಳೆತು ಉಪಯೋಗರಾಹಿತ್ಯವಾಗಿದೆ. ಈ ಕಾರಣದಿಂದ ಅಳಿದುಳಿದ ಬೈಹುಲ್ಲಿಗೆ ಹೇಳಿದ್ದೇ ದರ ಎಂದಾಗಿದೆ. ಸಾಮಾನ್ಯದವರಿಗೆ ಖರೀದಿ ಗಗನಕುಸುಮವಾಗಿದೆ.

ಹೈನುಗಾರರಿಗೆ ಸಮಸ್ಯೆ
ಒಂದೆಡೆ ಕೆಎಂಎಫ್ ಪೂರೈಕೆಯ ಪಶು ಆಹಾರದ ಕೊರತೆ ಇನ್ನೊಂದೆಡೆ ಬೈಹುಲ್ಲಿನ ಕೊರತೆ. ಇದು ಪಶುಸಾಕಾಣಿಕೆಯ ಹೈನುಗಾರರ ಮೇಲೆ ತೀವ್ರ ಪರಿಣಾಮ ಉಂಟು ಮಾಡಲಿದೆ ಎನ್ನುತ್ತಾರೆ ಪ್ರಗತಿಪರ ಹೈನುಗಾರ ಆಸೋಡು ರವಿರಾಜ ಶೆಟ್ಟಿ. ಇನ್ನೂ ಎರಡು ಮೂರು ತಿಂಗಳು ಹೀಗೆ ಪಶು ಆಹಾರ ಅಥವಾ ಬೈಹುಲ್ಲಿನ ಕೊರತೆ ಉಂಟಾದರೆ ಪರಿಸ್ಥಿತಿ ಗಂಭೀರ ಆಗಲಿದೆ. ಪಶು ಆಹಾರ ಘಟಕ ಈ ಜಿಲ್ಲೆಗಳಲ್ಲಿ ಸ್ಥಾಪಿಸಿ ಎನ್ನುವ ಕೂಗಿಗೆ ಬೆಲೆ ದೊರೆತಿಲ್ಲ. ಈಗ ರಾಸುಗಳಿಗೆ ಆಹಾರದ ಕೊರತೆ ಉಂಟಾದಾಗ ಸ್ಪಂದಿಸುವವರೂ ಇಲ್ಲ ಎಂದಾಗಿದೆ ಎನ್ನುತ್ತಾರೆ ವಿಕಾಸ ಹೆಗ್ಡೆ ಅವರು.

ಸರಕಾರಕ್ಕೆ ಬೇಡಿಕೆ
ಜಿಲ್ಲೆಯಲ್ಲಿ ಅತಿವೃಷ್ಟಿ ಉಂಟಾಗುತ್ತಿದ್ದಂತೆಯೇ, ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟ ಸಂಭವಿ ಸುತ್ತಿದ್ದಂತೆಯೇ ಸರಕಾರಕ್ಕೆ ಮೇವು ಸರಬರಾಜಿಗೆ ಜಿಲ್ಲಾಡಳಿತ ಮನವಿ ಮಾಡಿದೆ. ಉಡುಪಿ ಜಿಲ್ಲಾಡಳಿತ ನವೆಂಬರ್‌ ತಿಂಗಳಿನಲ್ಲಿ ಮೇವು ಒದಗಿಸಬೇಕೆಂದು ಮನವಿ ಕಳುಹಿಸಿದೆ. 5 ಕೆಜಿಯ ಮಿನಿಕಿಟ್‌ಗಳನ್ನು ಒದಗಿಸಬೇಕು. 5 ಕೆಜಿಯ ಒಂದು ಬ್ಯಾಗ್‌ನಿಂದ ಸುಮಾರು 25 ಸೆಂಟ್ಸ್‌ನಷ್ಟು ಪ್ರದೇಶದಲ್ಲಿ ಹುಲ್ಲು ಬೆಳೆಯಬಹುದು. ಇಂತಹ ಮಿನಿಕಿಟ್‌ಗಳನ್ನು ರೈತರಿಗೆ ವಿತರಿಸಿದಾಗ ಮೇವಿಗೆ ಹಸುರು ಹುಲ್ಲಿನ ಸಮಸ್ಯೆ ಉಂಟಾಗುವುದಿಲ್ಲ ಎನ್ನುವುದು ಜಿಲ್ಲಾಡಳಿತದ ಆಶಯ. ಈಗ ಗದ್ದೆಯಲ್ಲಿ ಒಂದಷ್ಟು ತೇವಾಂಶ ಇದ್ದು ಸಕಾಲದಲ್ಲಿ ದೊರೆತರೆ ಹುಲ್ಲು ಬೆಳೆಯಬಹುದು. ಬಿಸಿಲಿನ ಝಳ ಜಾಸ್ತಿಯಾದರೆ ತೇವಾಂಶ ಒಣಗಿದರೆ ಅದನ್ನು ಬೆಳೆಸುವುದು ಕಷ್ಟ. ಬೇಸಗೆ ಕಾಲದಲ್ಲಿ ಕೊಟ್ಟಿದ್ದೇವೆ ಎಂದಾಗುವ ಬದಲು ಈಗಲೇ ವಿತರಿಸಿದರೆ ರೈತರಿಗೂ ಅನುಕೂಲ. ಏಕೆಂದರೆ ಮೇಯಲು ಬಿಟ್ಟು ಹೊಟ್ಟೆ ತುಂಬಿಸಿಕೊಳ್ಳುವ ಜಾನುವಾರುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಟ್ಟಿ ಹಾಕಿ ತಿನಿಸು ಕೊಡುವ ಜಾನುವಾರುಗಳಿವೆ.

Advertisement

ದರ ಏರಿಕೆ
ಮೊದಲೆಲ್ಲ ಹೆಚ್ಚೆಂದರೆ ಒಂದು ಸೂಡಿ ಕಟ್ಟು ಬೈಹುಲ್ಲಿಗೆ 40 ರೂ.ಗಳಾದರೆ ಈಗಲೇ 60 ರೂ.ವರೆಗೆ ದರ ಏರಿಕೆ ಸಾಗಿದೆ. ಹೊರಜಿಲ್ಲೆಗಳಿಂದ ಬರುವ ಹುಲ್ಲಿಗೆ ಮೊದಲು ಲೋಡಿಗೆ 20 ಸಾವಿರ ರೂ.ವರೆಗೆ ದರ ಹೇಳುತ್ತಿದ್ದರೆ ಈಗ 30ರಿಂದ 35 ಸಾವಿರ ರೂ.ವರೆಗೆ ಹೇಳುತ್ತಿದ್ದು ದುಪ್ಪಟ್ಟು ಆಗುವ ಎಲ್ಲ ಲಕ್ಷಣಗಳೂ ಇವೆ. ಕಳೆದ ಬಾರಿ ಶಿವಮೊಗ್ಗದ ಬೈಹುಲ್ಲಿಗೆ ಸೂಡಿಗೆ 20 ರೂ. ದರ ಇತ್ತು. ಆಗ ಕರಾವಳಿಯ ರೈತ ಕುಟುಂಬಗಳು ಈ ಬಾರಿ ಮಳೆಯಿಂದ ತೊಂದರೆಯಾಗದು, ಬೆಳೆ ಉತ್ತಮವಾಗಿ ಬೆಳೆಯುವುದು, ಫ‌ಸಲಿಗೆ ಕೊರತೆಯಾಗದು ಎಂದು ನಂಬಿದ್ದರು. ಅದರಂತೆ ಮಳೆಯಿಂದ ತೊಂದರೆಯಾಗದೇ ಉತ್ತಮ ಫ‌ಸಲು ಬಂದಿದ್ದರೂ ಕೈಗೆ ಸಿಗುವ ಮುನ್ನ ಮಳೆ ನಿರಂತರ ಸುರಿದು ಫ‌ಸಲಿಗೆ ಕೊಡಲಿ ಇಟ್ಟಿತ್ತು.

ಪ್ರಸ್ತಾವನೆ ಹೋಗಿದೆ
ಮೇವಿನ ಕೊರತೆ ನೀಗಿಸಲು ಮಿನಿಕಿಟ್‌ಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ನಿರ್ಣಯಿಸಿ ಸರಕಾರಕ್ಕೆ ಕಳುಹಿಸಲಾಗಿದೆ.
-ಡಾ| ಸೂರ್ಯನಾರಾಯಣ ಉಪಾಧ್ಯ, ಸಹಾಯಕ ನಿರ್ದೇಶಕರು,
ಪಶು ಸಂಗೋಪನ ಇಲಾಖೆ

– ಲಕ್ಷ್ಮೀ ಮಚ್ಚಿನ

 

Advertisement

Udayavani is now on Telegram. Click here to join our channel and stay updated with the latest news.

Next