Advertisement

ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿ ಮಾದರಿಯಾದ ಇನ್ನಾ ಗ್ರಾ.ಪಂ.

07:05 AM Aug 10, 2017 | |

ಬೆಳ್ಮಣ್‌: ಗ್ರಾಮದಲ್ಲಿ ಯಾವುದೇ ರಸ್ತೆ ಹದಗೆಟ್ಟರೆ ಅಥವಾ ಚರಂಡಿ ವ್ಯವಸ್ಥೆಗಳು ಸರಿಯಿಲ್ಲದಿದ್ದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್‌ ಅಥವಾ ಸರಕಾರದ ಅನುದಾನವನ್ನು ಕಾಯುವ ಕಾಲದಲ್ಲಿ ಇನ್ನಾ ಗ್ರಾಮ ಪಂಚಾಯತ್‌ ಸದಸ್ಯ ಅಲೆನ್‌ ಲೂವಿಸ್‌ ಡಿ’ಸೋಜಾ ತನ್ನ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ  ನಡೆಸಿ ಇತರರಿಗೆ ಮಾದರಿಯೆನಿಸಿದ್ದಾರೆ.

Advertisement

ಪಂಚಾಯತ್‌ ಸದಸ್ಯನಾಗಿ ತನ್ನ   ಕರ್ತವ್ಯ ಹಾಗೂ ಜವಾಬ್ದಾರಿಯನ್ನು  ತೋರಿಸಿದ ಪಂ. ಸದಸ್ಯರ ಈ ಪರಿಕಲ್ಪನೆ ಗ್ರಾಮಸ್ಥರ ಶ್ಲಾಘನೆಗೆ ಪಾತ್ರವಾಗಿದೆ.

ಇನ್ನಾ ಗ್ರಾಮ ಪಂಚಾಯತ್‌ನ ಮಠದ ಕೆರೆ ಕೊಯ್ನಾರ್‌ ಸಾಂತೂರು ಕೊಪ್ಲ ರಸ್ತೆ ಹಾಗೂ ಕಾಯ್ನಾಲು ರಸ್ತೆ ಮಳೆಗಾಲದಲ್ಲಿ ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯ ವಾಗಿ ರಸ್ತೆಯುದ್ದಕ್ಕೂ ಬೃಹತ್‌ ಗಾತ್ರದ ಹೊಂಡಗಳು ನಿರ್ಮಾಣಗೊಂಡಿದ್ದು ಮಣ್ಣಿನ ರಸ್ತೆಯಲ್ಲಿ ವಾಹನ ಸಂಚಾರ ನಡೆಸಲಸಾಧ್ಯವಾಗಿತ್ತು. ಹೀಗಾಗಿ ಸ್ಥಳೀಯ ಇನ್ನಾ ಗ್ರಾಮ ಪಂಚಾಯತ್‌ ಸದಸ್ಯ ಅಲೆನ್‌ ಡಿ’ಸೋಜಾ ರವಿವಾರ ಸರಕಾರ ಹಾಗೂ ಇಲಾಖೆಯ ಯಾವುದೇ ಅನುದಾನವನ್ನು ಕಾಯದೆ ತಮ್ಮ ಸ್ವಂತ ಖರ್ಚಿನಲ್ಲಿ ಜಲ್ಲಿ ಹುಡಿ, ಮಣ್ಣು ಹಾಕಿಸಿ ರಸ್ತೆಯನ್ನು ಸಮತಟ್ಟು ಮಾಡಿ ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಿದ್ದಾರೆ.

ಸಹಕರಿಸಿದ ಯುವಕ ಸಂಘ: ಗ್ರಾಮ ಪಂಚಾಯತ್‌ ಸದಸ್ಯ ಅಲೆನ್‌ ಡಿ’ಸೋಜಾರ ಈ ಸಮಾಜಮುಖೀ ಕಾರ್ಯಕ್ಕೆ ಸ್ಥಳಿಯ ಕಾಂಜರಕಟ್ಟೆ ಫ್ರೆಂಡ್ಸ್‌ನ ಯುವಕರು ಸಹಕಾರ ನೀಡಿದರು. ಬೆಳಗ್ಗಿನಿಂದಲೇ ರಸ್ತೆಯ ದುರಸ್ತಿ ಕಾರ್ಯದಲ್ಲಿ ತೊಡಗಿ ಅಲೆನ್‌ ಡಿಸೋಜಾರೊಂದಿಗೆ ಕೈ ಜೋಡಿಸಿದರು. ಅಲೆನ್‌ ಡಿ’ಸೋಜಾ ತಾನೇ ಸ್ವತಃ ಹಾರೆ  ಪಿಕ್ಕಾಸಿ ಹಿಡಿದು ರಸ್ತೆ ದುರಸ್ತಿ ಕಾರ್ಯ ಮಾಡಿ ಕರಸೇವೆಯ ಫೋಸು ಕೊಡುವ ಇತರ ಜನಪ್ರತಿನಿಧಿ ಗಳಿಗೆ ಸವಾಲಾದರು.

ಇನ್ನಾ ಗ್ರಾಮದ ಕಾಯ್ನಾಲು ಹಾಗೂ ಕೊಯ್ನಾರ್‌ ಎರಡು ರಸ್ತೆಯ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಗ್ರಾಮಸ್ಥರಿಗೆ ಬಾರಿ ಹರ್ಷ ವ್ಯಕ್ತವಾಗಿದೆ. ಜನಪ್ರತಿನಿ ಧಿಗಳು ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳ‌ಲು ಅನುದಾನವನ್ನು ಕಾಯುತ್ತಾರೆ. ಅಲ್ಲದೆ ಅದರಲ್ಲಿ ಬರುವ ಕಮಿಷನ್‌ಗೆ ಕೈಯೊಡ್ಡುತ್ತಾರೆ, ಆದರೆ ಇಲ್ಲಿ ಅಲೆನ್‌ ಡಿ’ಸೋಜಾ ಮಾತ್ರ ತಮ್ಮ ಸ್ವಂತ ಖರ್ಚಿನಲ್ಲೇ ಸ್ವತಃ ತಾವೇ ರಸ್ತೆಯ ದುರಸ್ತಿ ಕಾರ್ಯವನ್ನು ಮಾಡಿ ಗಮನ ಸೆಳೆದಿದ್ದಾರೆ ಎನ್ನುವ ಸ್ಥಳೀಯ ಕಾಂಜರಕಟ್ಟೆ ಫ್ರೆಂಡ್ಸ್‌ನ ಸದಸ್ಯರಾದ ಗೋವಿಂದ ರಾಜ್‌, ಸಚಿನ್‌ ಕುಮಾರ್‌, ಯೋಗೀಶ್‌ ಆಚಾರ್ಯ, ಸಂದೀಪ್‌ ಪೂಜಾರಿ, ಪ್ರವೀಣ್‌, ಸುನೀಲ್‌ ಮತ್ತಿತರರು  ಅಲೆನ್‌ಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.

Advertisement

ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ರಸ್ತೆ ದುರಸ್ತಿ ಮಾಡಿದ್ದೇನೆ,   ಈ ಕಾರ್ಯವನ್ನು ಗ್ರಾಮದ ಜನರ ಅನುಕೂಲತೆಗಾಗಿ ಮಾಡಿದ್ದೇನೆ.
-ಅಲೆನ್‌ ಡಿಸೋಜಾ, ಗ್ರಾ.ಪಂ. ಸದಸ್ಯ ಇನ್ನಾ

Advertisement

Udayavani is now on Telegram. Click here to join our channel and stay updated with the latest news.

Next