Advertisement

ಕುಸಿಯುವ ಹಂತದಲ್ಲಿ ಮರ್ಣೆ ಓವರ್‌ ಹೆಡ್‌ ಟ್ಯಾಂಕ್‌ : ಬಿರುಕುಬಿಟ್ಟ ಕಾಂಕ್ರೀಟ್‌

10:36 PM Feb 21, 2021 | Team Udayavani |

ಅಜೆಕಾರು: ಮರ್ಣೆ ಗ್ರಾಮ ಪಂಚಾಯತ್‌ ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ ಓವರ್‌ ಹೆಡ್‌ ಟ್ಯಾಂಕ್‌ ಸಂಪೂರ್ಣ ಬಿರುಕು ಬಿಟ್ಟಿದ್ದು ಆಧಾರ ಸ್ತಂಭಗಳ ಕಾಂಕ್ರೀಟ್‌ ಬಿರುಕು ಬಿಟ್ಟು ಸಂಪೂರ್ಣವಾಗಿ ಕುಸಿದು ಕೇವಲ ತುಕ್ಕು ಹಿಡಿದ ಕಬ್ಬಿಣದ ರಾಡ್‌ಗಳ ಆಧಾರದಲ್ಲಿ ನಿಂತಿದೆ.

Advertisement

ದಶಕಗಳಿಂದ ಕುಸಿಯುವ ಭೀತಿಯಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ಗೆ ಪರ್ಯಾಯ ಟ್ಯಾಂಕ್‌ ನಿರ್ಮಾಣ ಮಾಡಿ ಅಪಾಯಕಾರಿ ಸ್ಥಿತಿಯಲ್ಲಿರುವ ಈ ಟ್ಯಾಂಕ್‌ ತೆರವು ಮಾಡುವಂತೆ ಸ್ಥಳೀಯರು ನಿರಂತರವಾಗಿ ಮನವಿ ಮಾಡಿದರು ಓವರ್‌ ಹೆಡ್‌ ಟ್ಯಾಂಕ್‌ಗೆ ಮುಕ್ತಿಯಾಗಿಲ್ಲ.

50 ಸಾವಿರ ಲೀಟರ್‌ ನೀರು ಶೇಖರಣೆ ಸಾಮಾರ್ಥ್ಯ
ಟ್ಯಾಂಕ್‌ ಸುಮಾರು 50 ಸಾವಿರ ಲೀಟರ್‌ ನೀರು ಶೇಖರಣೆ ಸಾಮರ್ಥ್ಯ ಹೊಂದಿದ್ದು ಸುಮಾರು 50 ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ. ಈ ಬೃಹತ್‌ ಓವರ್‌ ಹೆಡ್‌ ಟ್ಯಾಂಕ್‌ ಮೂಲಕ ಮರ್ಣೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸುಮಾರು 600ಕ್ಕೂ ಅಧಿಕ ಮನೆಗಳಿಗೆ ನೀರು ಒದಗಿಸಲಾಗುತ್ತದೆ.

ರಾಡ್‌ಗಳಿಗೆ ತುಕ್ಕು
ಈ ಓವರ್‌ ಹೆಡ್‌ ಟ್ಯಾಂಕ್‌ನ ಸ್ಲಾಬ್‌ಗಳು ಹಾಗೂ ಪಿಲ್ಲರ್‌ಗಳು ಬಿರುಕುಬಿಟ್ಟಿದ್ದು ಸಿಮೆಂಟ್‌ ತುಂಡು ತುಂಡಾಗಿ ಬೀಳುತ್ತಿದೆ. ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಸಂದರ್ಭ ಬಳಸಲಾದ ಕಬ್ಬಿಣದ ರಾಡ್‌ ಸಂಪೂರ್ಣವಾಗಿ ತುಕ್ಕು ಹಿಡಿದಿವೆ. ಪಂಚಾಯತ್‌ ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ ಈ ಓವರ್‌ ಹೆಡ್‌ ಟ್ಯಾಂಕ್‌ ಕುಸಿತಗೊಂಡಲ್ಲಿ ಅಪಾರ ಪ್ರಮಾಣದ ಹಾನಿಯಾಗುವ ಜತೆಗೆ ಜೀವ ಹಾನಿಯೂ ಸಂಭವಿಸಬಹುದಾಗಿದೆ. ಅಲ್ಲದೆ ಪಂಚಾಯತ್‌ ವ್ಯಾಪ್ತಿಯ ಅಜೆಕಾರು ಪೇಟೆ, ಕೊಂಬಗುಡ್ಡೆ, ಕೈಕಂಬ, ನೂಜಿ ವಠಾರ, ಕುರ್ಪಾಡಿ ಪ್ರದೇಶ, ಪ.ಜಾತಿ, ಪ.ಪಂಗಡದ ಹಲವು ಕಾಲನಿಗಳ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಸಂಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ.

ಇನ್ನೊಂದು ಟ್ಯಾಂಕ್‌ಗೂ ಹಾನಿ
ಸುಮಾರು 50 ಅಡಿ ಎತ್ತರದಲ್ಲಿರುವ ಈ ಓವರ್‌ ಹೆಡ್‌ ಟ್ಯಾಂಕ್‌ ಕುಸಿತಗೊಂಡರೆ ಸಮೀಪದಲ್ಲಿರುವ ಸುಮಾರು 30,000 ಲೀಟರ್‌ ಸಾಮರ್ಥ್ಯದ ಇನ್ನೊಂದು ಓವರ್‌ ಹೆಡ್‌ ಟ್ಯಾಂಕ್‌ಗೂ ಹಾನಿಯಾಗುವ ಜತೆಗೆ ಪಂಚಾಯತ್‌ ಕಟ್ಟಡ, ಪಂಚಾಯತ್‌ ವಾಣಿಜ್ಯ ಮಳಿಗೆಗಳು, ಗ್ರಾಮ ಕರಣಿಕರ ಕಚೇರಿ ಕಟ್ಟಡಗಳಿಗೆ ಭಾರೀ ಪ್ರಮಾಣದ ಹಾನಿ ಭೀತಿಯಿದೆ.

Advertisement

ಶೀಘ್ರ ಬದಲಿ ವ್ಯವಸ್ಥೆ ಅಗತ್ಯ
ಮರ್ಣೆ ಪಂಚಾಯತ್‌ ವ್ಯಾಪ್ತಿಯ ಬಹುತೇಕ ಪ್ರದೇಶಕ್ಕೆ ಈ ಓವರ್‌ ಹೆಡ್‌ ಟ್ಯಾಂಕ್‌ ಮೂಲಕವೇ ನೀರು ಒದಗಿಸಲಾಗುತ್ತಿದ್ದು ಈ ಟ್ಯಾಂಕ್‌ ಬದಲಿಗೆ ಹೊಸ ಬೃಹತ್‌ ಟ್ಯಾಂಕ್‌ ನಿರ್ಮಾಣ ಮಾಡಿ ಕುಸಿಯುವ ಹಂತದಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ ತೆರವುಗೊಳಿಸಬೇಕಿದೆ.

ಗ್ರಾಮ ಸಭೆಯಲ್ಲಿ ನಿರ್ಣಯ
ಗ್ರಾಮ ಸಭೆಯಲ್ಲಿ ಈ ಓವರ್‌ ಹೆಡ್‌ ಟ್ಯಾಂಕ್‌ ದುರಸ್ತಿ ಅಥವಾ ತೆರವು ಮಾಡುವಂತೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದು ಪಂಚಾಯತ್‌ ಆಡಳಿತ ನಿರ್ಣಯ ಮಾಡಿ ಸಂಬಂಧ ಪಟ್ಟ ಇಲಾಖೆಗೆ ಕಳುಹಿಸಿತ್ತು. ಆದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ.

ಟ್ಯಾಂಕ್‌ ತೆರವಿಗೆ ಸೂಕ್ತ ಕ್ರಮ
ಪಂಚಾಯತ್‌ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಪಂಚಾಯತ್‌ ವ್ಯಾಪ್ತಿಯ ಕೈಕಂಬದಲ್ಲಿ ನಿರ್ಮಾಣವಾದ ಓವರ್‌ ಹೆಡ್‌ ಟ್ಯಾಂಕ್‌ ಹಾಗೂ ಇತರೆ ಟ್ಯಾಂಕ್‌ ಮೂಲಕ ನೀರು ಒದಗಿಸಲಾಗುವುದು. ಕುಸಿಯುವ ಹಂತದಲ್ಲಿರುವ ಟ್ಯಾಂಕ್‌ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಜ್ಯೋತಿ ಪೂಜಾರಿ, ಅಧ್ಯಕ್ಷರು, ಮರ್ಣೆ ಗ್ರಾಮ ಪಂಚಾಯತ್‌

ಇಲಾಖೆಗೆ ಮನವಿ
ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ ತೆರವು ಶೀಘ್ರವಾಗಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಡಿ ಹೊಸ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಮಾಡಿ ಪ್ರಸ್ತುತ ಇರುವ ಟ್ಯಾಂಕ್‌ ತೆರವಿಗೆ ಸಂಬಂಧಪಟ್ಟ ಇಲಾಖೆಗೆ ಪುನಃ ಮನವಿ ಮಾಡಲಾಗುವುದು.
-ತಿಲಕ್‌ರಾಜ್‌, ಪಿಡಿಒ ಮರ್ಣೆ ಗ್ರಾಮ ಪಂಚಾಯತ್‌

ಸೂಕ್ತ ಕ್ರಮ
ಪಂಚಾಯತ್‌ ಆಡಳಿತ ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಶೀಘ್ರ ಈ ಬಗ್ಗೆ ಪರಿಶೀಲನೆ ನಡೆಸಿ ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ರವಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಕಾರ್ಕಳ

– ಜಗದೀಶ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next