Advertisement

ಫ‌ಲಪುಷ್ಪ ಪ್ರದರ್ಶನಕ್ಕೆ ಒಂದೇ ದಿನ ಲಕ್ಷಕ್ಕೂ ಹೆಚ್ಚು ಜನರ ಭೇಟಿ

12:04 PM Aug 14, 2017 | |

ಬೆಂಗಳೂರು: ರಜಾ ದಿನವಾಗಿದ್ದ ಭಾನುವಾರ ಲಾಲ್‌ಬಾಗ್‌ ಪುಷ್ಪ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬಂದಿದ್ದು, 1.08 ಲಕ್ಷಕ್ಕೂ ಅಧಿಕ ಜನ ಪ್ರದರ್ಶನ ವೀಕ್ಷಿಸಿದರು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಜಗದೀಶ್‌ ತಿಳಿಸಿದ್ದಾರೆ.

Advertisement

ಫ‌ಲಪುಷ್ಪ ಪ್ರದರ್ಶನದ ಸಾಕ್ಷ್ಯಾಚಿತ್ರ ತಯಾರಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಡ್ರೋಣ್‌ ಕ್ಯಾಮೆರಾ ಬಳಸಿ ಫೋಟೋ ಶೂಟ್‌ ಮಾಡಿಸಿದ್ದು, ವಿಶೇಷ. ಜತೆಗೆ ಹಿರಿಯ ಹವ್ಯಾಸಿ ಅಂಚೆ ಚೀಟಿ ಸಂಗ್ರಹಕಾರ ಎಂ.ಆರ್‌.ಪ್ರಭಾಕರ್‌ ಅವರು, ವಿಶ್ವದ ವಿವಿಧ ದೇಶಗಳ ಹೂವು, ಹಕ್ಕಿ ಮತ್ತು ಮಹಾನ್‌ ಸಾಧಕರ ಸ್ಟಾಂಪ್‌ಗ್ಳನ್ನು ಬಳಸಿ ವಿಶ್ವಮಾನವ ಕುವೆಂಪು ಅವರ ಮುಖದ ಕಲಾಕೃತಿ ರಚಿಸಿ ಪ್ರದರ್ಶಿಸಿ ಗಮನ ಸೆಳೆದರು. 

ವಾಟಾಳ್‌ ಭೇಟಿ: ಭಾನುವಾರ ಬೆಳಿಗ್ಗೆ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖಂಡ ವಾಟಾಳ್‌ ನಾಗರಾಜ… ಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ, ಕುವೆಂಪು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ರಾಷ್ಟ್ರಕವಿ ಕುವೆಂಪು ಅವರೊಂದಿಗೆ ತೆಗೆಸಿಕೊಂಡಿದ್ದ ಫೋಟೋದೊಂದಿಗೆ ಬಂದಿದ್ದ ಅವರು, “ಲಾಲ್‌ಬಾಗ್‌ನಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ದರ್ಶನ ಅದ್ಭುತವಾಗಿದೆ. ಇದನ್ನೆಲ್ಲಾ ನೋಡಿದರೆ ನನ್ನ ಜನ್ಮ ಸಾರ್ಥಕ ಎನ್ನಿಸುತ್ತಿದೆ,’ ಎಂದು ನುಡಿದರು. ಸಂಜೆ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್‌ ಹೆಗಡೆ ಭೇಟಿ ನೀಡಿ ಕುವೆಂಪು ಅವರ ಜೀವನ ದರ್ಶನ ಮಾಡಿದರು. ತೋಟಗಾರಿಕೆ ಇಲಾಖೆ ಮತ್ತು ಕುವೆಂಪು ಪ್ರತಿಷ್ಠಾನಗಳು ಸಾರ್ಥಕ ಕೆಲಸ ಮಾಡಿವೆ ಎಂದು ಶ್ಲಾ ಸಿದರು. 

ವಿಶ್ವಮಾನವ ಗೀತೆ
ಕಲಾವಿದ ಜಾನ್‌ ದೇವರಾಜ್‌ ಅವರು, ಸ್ಥಳೀಯ ಕಲಾವಿದರು ಮತ್ತು ಜಪಾನ್‌ ಕಲಾವಿದರಿಂದ ದಿನವಿಡೀ ವಿಶ್ವಮಾನ ಗೀತೆಯನ್ನು ಕನ್ನಡ, ಇಂಗ್ಲಿಷ್‌ ಮತ್ತು ಜಪಾನ್‌ ಭಾಷೆಗಳಲ್ಲಿ ಪ್ರಸ್ತುತಪಡಿಸಿದ್ದು, ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. 

ಪುಷ್ಪ ಪ್ರದರ್ಶನಕ್ಕೆ ಸಾಗರೋಪಾದಿಯಲ್ಲಿ ಜನ ಆಗಮಿಸಿದ್ದರು. ಸುಮಾರು 77,800 ವಯಸ್ಕರು, 17,050 ಶಾಲಾ ಮಕ್ಕಳು, 7,500 ಪಾಸ್‌ ಹೊಂದಿದ್ದವರು ಮತ್ತು 5,801 ಮಕ್ಕಳು ಭಾನುವಾರ ಪ್ರದರ್ಶನ ವೀಕ್ಷಿಸಿದ್ದಾರೆ. ಟಿಕೇಟ್‌ ಶುಲ್ಕದಿಂದ 47.84 ಲಕ್ಷ ರೂ. ಸಂಗ್ರಹವಾಗಿದೆ. ಒಟ್ಟಾರೆ 8 ದಿನಗಳಲ್ಲಿ 1.34 ಕೋಟಿ ರೂ. ಸಂಗ್ರಹವಾಗಿದ್ದು, 3.20 ಲಕ್ಷ ಜನ ಭೇಟಿ ನೀಡಿದ್ದಾರೆ.
-ಡಾ.ಜಗದೀಶ್‌, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ

Advertisement

ಇಂದಿನ ಆಕರ್ಷಣೆ
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರೆತು 50 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಆ.14ರಂದು ಲಾಲ್‌ಬಾಗ್‌ನಲ್ಲಿ ರಾಷ್ಟ್ರಕವಿ ಕುವೆಂಪು ಸ್ಮರಣಾರ್ಥ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ. ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಗೋಷ್ಠಿ ಉದ್ಘಾಟಿಸುವರು. ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಧ್ಯಕ್ಷತೆ ವಹಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಉಪಸ್ಥಿತರಿರುವರು.

Advertisement

Udayavani is now on Telegram. Click here to join our channel and stay updated with the latest news.

Next