ಬೆಳಗಾವಿ: ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿರುವ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯಲ್ಲಿ ಸುಮಾರು 60 ವಿದ್ಯಾರ್ಥಿನಿಯರು ಸೇರಿ 70ಕ್ಕೂ ಹೆಚ್ಚು ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಎಲ್ಲರನ್ನೂ ಐಸೋಲೇಷನ್ ಗೆ ಒಳಪಡಿಸಲಾಗಿದೆ.
ಕಿತ್ತೂರಿನ ವಸತಿ ಸೈನಿಕ ಶಾಲೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ರ‍್ಯಾಪಿಡ್ ಟೆಸ್ಟ್ ಮಾಡಿದಾಗ ಅದರಲ್ಲಿ 12 ವಿದ್ಯಾರ್ಥಿನಿಯರಿಗೆ ಸೋಂಕು ದೃಢಪಟ್ಟಿತ್ತು. ಈಗ ಮತ್ತೆ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮತ್ತು 10ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಪಾಸಿಟಿವ್ ಬಂದಿದ್ದರಿಂದ ಆತಂಕಕ್ಕೀಡು ಮಾಡಿದೆ.
600ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪಾಸಿಟಿವ್ ಬಂದಿದ್ದರಿಂದ ಈ ಶಾಲೆಯಲ್ಲಿಯೇ ಇರುವ ಆಸ್ಪತ್ರೆಯಲ್ಲಿಯೇ ಎಲ್ಲ ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಆರೋಗ್ಯವಾಗಿದ್ದು, ಒಬ್ಬರಿಗೂ ರೋಗ ಲಕ್ಷಣಗಳು ಇಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಮೂರನೇ ಅಲೆ ಹಿನ್ನೆಲೆಯಲ್ಲಿ ಕೋವಿಡ್ ತಪಾಸಣೆ ಮಾಡಿದ್ದರಿಂದ ಸೋಂಕು ದೃಢಪಟ್ಟಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿಕಾಂತ ಮುನ್ಯಾಳ ‘ಉದಯವಾಣಿ’ಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಜಿಲ್ಲೆಗೆ ಕೋವಿಡ್ ಮೂರನೇ ಅಲೆ ಆಘಾತ : ಶೂನ್ಯದಿಂದ ಎರಡಂಕಿಗೆ ಏರುತ್ತಿದೆ ಸೋಂಕು
ಈ ಒಂದೇ ಶಾಲೆಯಲ್ಲಿ ಇಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಪಾಸಿಟಿವ್ ಬಂದಿದ್ದರಿಂದ ಆತಂಕಗೊಂಡಿರುವ ಪಾಲಕರು ಶಾಲೆಯತ್ತ ದೌಡಾಯಿಸಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಹೀಗಾಗಿ ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ವಾಹನಗಳನ್ನು ತೆಗೆದುಕೊಂಡು ಬಂದಿದ್ದಾರೆ. ಶಾಲೆಯತ್ತ ಸೋಮವಾರ ಇಡೀ ದಿನ ಜನಜಂಗುಳಿ ಕೂಡಿತ್ತು. ಹೆಚ್ಚಿನ ಮಾಹಿತಿಗಾಗಿ ಶಾಲಾ ಆಡಳಿತ ಮಂಡಳಿಯವರು ಸಂಪರ್ಕಕ್ಕೆ ಸಿಗಲಿಲ್ಲ.