ಮಣಿಪಾಲ: ಕೇವಲ ಸಾಮಾಜಿಕ ಅಂತರ ಮಾತ್ರವಲ್ಲ; ಕೋವಿಡ್ 19 ದೇಶ, ರಾಜ್ಯ ಹಾಗೂ ಜಿಲ್ಲೆಗಳ ನಡುವೆ ಅಂತರ ಕಾಪಾಡಿದೆ. ಬಹುತೇಕ ಗಡಿಗಳು ಮುಚ್ಚಲ್ಪಟ್ಟಿವೆ. ಇಂಥದ್ದೇ ಕ್ರಮವನ್ನು ಸ್ವಿಜರ್ಲೆಂಡ್ ಮಾಡಿದ್ದು, ಅದು ಸುಮಾರು 56,000 ಜನರನ್ನು ಸ್ವಿಸ್ ಗಡಿ ದಾಟದಂತೆ ತಡೆಯುವಲ್ಲಿ ಸಫಲವಾಗಿದೆ. ಆದೇಶ ಉಲ್ಲಂಘನೆಗೆ ಸಂಬಂಧಿಸಿ ಸುಮಾರು 50ರಷ್ಟು ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ.
ಸ್ವಿಜರ್ಲೆಂಡ್ ಮಾರ್ಚ್ 25ರಂದು ತನ್ನ ಗಡಿಗಳನ್ನು ಮುಚ್ಚಿದ್ದು, ಕೆಲವರಿಗೆ ನಿರ್ದಿಷ್ಟ ಅನುಮತಿ ಮುಖೇನ ಗಡಿ ದಾಟಲು ಅವಕಾಶ ನೀಡಿದೆ. ತನ್ನ ಗಡಿಗಳನ್ನು ಮುಚ್ಚಿರುವ ಈ ದೇಶವು ಕೆಲವು ಅಗತ್ಯ ಸೇವೆಗಳಿಗೆ ಹಾಗೂ ಸರಕಾರ ಅನುಮತಿ ನೀಡಿರುವ ವರ್ಗದವರಿಗೆ ಇದರಿಂದ ವಿನಾಯಿತಿ ನೀಡಿದೆ. ಇದನ್ನು ಮೀರಿ ಗಡಿ ದಾಟಲು ಶ್ರಮಿಸಿದವರನ್ನು ವಾಪಸ್ ಕಳುಹಿಸುವ ಕೆಲಸವನ್ನು ಸರಕಾರ ಚಾಚೂ ತಪ್ಪದೇ ಮಾಡುತ್ತಿದೆ. ಆದರೂ ಗಡಿ ದಾಟಲು ಪ್ರಯತ್ನಿಸಿ ನಿಯಮ ಉಲ್ಲಂ ಸುವವರನ್ನು ಸರಕಾರ ಸುಮ್ಮನೆ ಬಿಟ್ಟಿಲ್ಲ. ಅಂಥವರಿಗೆ 100 ಸಿಎಚ್‌ಎಫ್ದಂಡವನ್ನು ವಿಧಿಸಲಾಗುತ್ತಿದೆ ಎನ್ನುತ್ತಾರೆ ಪೊಲೀಸರು.
ಸ್ವಿಟ್ಜರ್ಲೆಂಡ್‌ನ ಅಧಿಕೃತ ಸಂಚಾರದ ಗಡಿಗಳ ಸಂಖ್ಯೆಯೂ ಈಗ ಸೀಮಿತವಾಗಿದೆ.
ಆದರೆ ಕೆಲವರು ಅನಧಿಕೃತ ಸ್ಥಳಗಳಲ್ಲಿ ಗಡಿ ದಾಟುತ್ತಿದ್ದಾರೆ. ಶಾಪಿಂಗ್ ಸಹಿತ ಇತರ ಉದ್ದೇಶಗಳಿಗಾಗಿ ಅವರು ಬರುತ್ತಿದ್ದು, ಅಂಥವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ.
ಎ. 16ರಂದು ಸ್ವಿಜರ್ಲೆಂಡ್‌ನಲ್ಲಿ ಗಡಿಯಾಚೆಗಿನ ಶಾಪಿಂಗ್ ಅನ್ನೂ ನಿಷೇಧಿಸಿ ಸರಕಾರ ಆದೇಶಿಸಿತ್ತು. ಆದರೆ ಸೂಕ್ತ ಪರವಾನಿಗೆ ಹೊಂದಿರುವವರಿಗೆ, ಪ್ರವಾಸೋದ್ಯಮ ಹಾಗೂ ವಿಶ್ರಾಂತಿಗಾಗಿ ಗಡಿ ನಿರ್ಬಂಧ ಹೇರಿಲ್ಲ. ಈ ನೀತಿ ಬಗ್ಗೆಯೂ ಟೀಕೆ ಕೇಳಿ ಬರುತ್ತಿದೆ. ಕೆಲವು ಅಧಿಕಾರಿಗಳೇ ಇದು ಸರಿಯಾದ ಕ್ರಮವಲ್ಲ. ಇಂಥ ಸಂಚಾರಗಳನ್ನೂ ನಿರ್ಬಂಧಿಸುವುದು ಅಗತ್ಯ ಎಂದು ಆಗ್ರಹಿಸುತ್ತಿದ್ದಾರೆ.
ದೇಶದ ಗಡಿಯಲ್ಲಿರುವ ಮುಕ್ತ ಸಂಚಾರ ಅವಕಾಶವೇ ಸೋಂಕು ಹರಡಲು ಕಾರಣ ಎಂಬ ಅಭಿಪ್ರಾಯ ಬಲವಾಗಿ ಕೇಳಿ ಬಂದ ಬಳಿಕ ಸ್ವಿಟ್ಜರ್ಲೆಂಡ್ ತನ್ನ ಎಲ್ಲ ಗಡಿಗಳನ್ನೂ ಭಾಗಶಃ ಮುಚ್ಚಿದೆ.