Advertisement

ಸದನದ ಹೊರಗೆ, ಒಳಗೆ ಹೋರಾಟಕ್ಕೆ ಬಿಜೆಪಿ ಸನ್ನದ್ಧ

08:37 AM Oct 28, 2017 | |

ಬೆಂಗಳೂರು: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್ಐಆರ್‌ ದಾಖಲಿಸಿದರೂ ಕೆ.ಜೆ. ಜಾರ್ಜ್‌ ಅವರನ್ನು ಸಂಪುಟದಿಂದ ಕೈಬಿಡಲು ನಿರಾಕರಿಸಿರುವ ಸಿಎಂ ಸಿದ್ದರಾಮಯ್ಯ ಸರ್ಕಾರದ ಕ್ರಮದ ಸಂಪೂರ್ಣ ರಾಜಕೀಯ ಲಾಭ ಪಡೆಯಲು ಬಿಜೆಪಿ ತೀರ್ಮಾನಿಸಿದೆ.

Advertisement

ಬೆಳಗಾವಿ ವಿಧಾನಸಭೆ ಅಧಿವೇಶನ ಆರಂಭವಾಗುವುದರೊಳಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದಲ್ಲಿ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ ಗದ್ದಲ ಎಬ್ಬಿಸಲು ಮುಂದಾಗಿದೆ. ಅಲ್ಲದೆ, ಪಕ್ಷ ನ. 2ರಿಂದ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯಲ್ಲಿ ಎಲ್ಲಾ ಕಡೆ ಈ ವಿಚಾರವನ್ನು ಪ್ರಸ್ತಾಪಿಸುವುದರ ಜತೆಗೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಇದಲ್ಲದೆ, ಸುಪ್ರೀಂಕೋರ್ಟ್‌ ಆದೇಶದಂತೆ ಸಚಿವ ಜಾರ್ಜ್‌ ವಿರುದ್ಧ ಸಿಬಿಐ ಎಫ್ಐಆರ್‌ ದಾಖಲಿಸಿದ್ದರೂ, ಇದನ್ನು ರಾಜಕೀಯ ದುರುದ್ದೇಶದ ಕ್ರಮ ಎಂದು ಟೀಕಿಸಿರುವ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಮತ್ತು ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ನ್ಯಾಯಾಲಯದ ತೀರ್ಪಿಗೆ ಅಗೌರವ ತೋರಿಸಿದ್ದಾರೆಂದು ಆರೋಪಿಸಿ ಸುಪ್ರೀಂಕೋರ್ಟ್‌ನಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಬಗ್ಗೆಯೂ ಚಿಂತನೆ ನಡೆಸಿದೆ.

ನ್ಯಾಯಾಂಗ ನಿಂದನೆಗೆ ಕ್ರಮ: ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಅರವಿಂದ ಲಿಂಬಾವಳಿ, ಬಿಜೆಪಿ ಅಥವಾ ಇನ್ಯಾವುದೇ ಸಂಸ್ಥೆಯ ಕಾರಣಕ್ಕೆ ಸಚಿವ ಜಾರ್ಜ್‌ ವಿರುದ್ಧ ಸಿಬಿಐ ಎಫ್ಐಆರ್‌ ದಾಖಲಿಸಿಲ್ಲ. ಸುಪ್ರೀಂಕೋರ್ಟ್‌ ಆದೇಶದಂತೆ ದಾಖಲಿಸಿದೆ. ಆದರೆ, ರಮೇಶ್‌ಕುಮಾರ್‌ ಮತ್ತು ಸಿ.ಎಂ. ಇಬ್ರಾಹಿಂ ಅವರು, ಇದೊಂದು ರಾಜಕೀಯ ದುರುದ್ದೇಶದ ಕ್ರಮ ಎಂದು ಹೇಳಿ ಸುಪ್ರೀಂಕೋರ್ಟ್‌ ಆದೇಶವನ್ನು ಟೀಕಿಸಿದ್ದಾರೆ. ಇದು ನ್ಯಾಯಾಂಗ 
ನಿಂದನೆಯಾಗಲಿದ್ದು, ಕಾನೂನು ಘಟಕದೊಂದಿಗೆ ಚರ್ಚಿಸಿ ಈ ವಿಚಾರವನ್ನು ಸುಪ್ರೀಂಕೋರ್ಟ್‌ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಸುಪ್ರೀಂಕೋರ್ಟ್‌ ಆದೇಶದಂತೆ ಸಿಬಿಐ ತನಿಖೆ ಆರಂಭಿಸಿರುವುದರಿಂದ ಭೀತಿಗೊಂಡಿರುವ ಮುಖ್ಯಮಂತ್ರಿ ಮತ್ತು ಸಚಿವರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಎಫ್ಐಆರ್‌ ದಾಖಲಾಗಿದ್ದರೂ ಬಿಜೆಪಿಯವರು ರಾಜೀನಾಮೆ ಕೊಟ್ಟಿದ್ದಾರಾ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಎಫ್ಐಆರ್‌ ದಾಖಲಾದ ಯಾವ ಬಿಜೆಪಿ ನಾಯಕರು ಸಚಿವರಾಗಿದ್ದರು? ಕೂಡಲೇ ಜಾರ್ಜ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
 ●ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಸುಪ್ರೀಂಕೋರ್ಟ್‌ ನಿರ್ದೇಶನದ ಮೇಲೆ ಸಚಿವ ಕೆ.ಜೆ.ಜಾರ್ಜ್‌ ವಿರುದ್ಧ ಸಿಬಿಐ ಎಫ್ಐಆರ್‌ ದಾಖಲಿಸಿರುವುದರಿಂದ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂಬುದು ಬಿಜೆಪಿಯ ಆಗ್ರಹ. ಆದರೆ, ನ್ಯಾಯಾಂಗಕ್ಕೆ ಗೌರವ ಕೊಡುವ ವಿಚಾರವೇ ಗೊತ್ತಿಲ್ಲ. ಸಚಿವರನ್ನು ಉಳಿಸಿಕೊಳ್ಳಲು ಸುಪ್ರೀಂಕೋರ್ಟ್‌ ತೀರ್ಪಿಗೆ ಅಗೌರವ ತೋರುವ ರೀತಿಯಲ್ಲಿ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸುತ್ತಿದ್ದಾರೆ.  ಇದು ಕಾಂಗ್ರೆಸ್‌ ನೈತಿಕತೆ ಉಳಿಸಿಕೊಂಡಿಲ್ಲ ಎಂಬುದಕ್ಕೆ ನಿದರ್ಶನ.
 ●ಮುರಳೀಧರ ರಾವ್‌, ಬಿಜೆಪಿ ಉಸ್ತುವಾರಿ

Advertisement

ತಮ್ಮ ಎಟಿಎಂ ಕಾರ್ಡ್‌ನಂತಿರುವ ಸಚಿವ ಜಾರ್ಜ್‌ ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ತಮ್ಮ ಅಧಿಕಾರ ದುರುಪಯೋಗಪಡಿಸಿ ಕೊಳ್ಳುತ್ತಿದ್ದಾರೆ. ಸಿಐಡಿ ತನಿಖೆ ವೇಳೆ ರಾಜೀನಾಮೆ ನೀಡಿದ್ದ ಜಾರ್ಜ್‌ ಸಿಬಿಐ ತನಿಖೆ ವೇಳೆ ಏಕೆ ರಾಜೀನಾಮೆ ನೀಡುತ್ತಿಲ್ಲ.
 ●ಶೋಭಾ ಕರಂದ್ಲಾಜೆ, ಬಿಜೆಪಿ ಸಂಸದೆ

ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್‌ ಆದೇಶಿಸಿದರೆ, ಸಚಿವ ರಮೇಶ್‌ಕುಮಾರ್‌ ಅವರು, ಕೇಂದ್ರ ಸರ್ಕಾರಕ್ಕೆ ವಿನಾಶಕಾಲೇ ವಿಪರೀತ ಬುದ್ಧಿ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಆಶ್ಚರ್ಯ ತಂದಿದೆ.
 ● ಸಿ.ಟಿ.ರವಿ, ಬಿಜೆಪಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next