Advertisement

ಸರ್ಕಾರಿ ಕಾಲೇಜಿಗೆ ಬೀಗ ಜಡಿದು ಆಕ್ರೋಶ: ಫಲಿತಾಂಶ ತರಿಸಿ ಪ್ರತಿಭಟನೆ ಕೈಬಿಟ್ಟರು!

03:48 PM Sep 16, 2022 | Team Udayavani |

ಸೇಡಂ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ ಕೆಮೆಸ್ಟ್ರಿ ವಿಭಾಗದ ಅಂತಿಮ ವರ್ಷದ ನಾಲ್ಕನೆ ಸೆಮೆಸ್ಟರ್‌ನ ವಿದ್ಯಾರ್ಥಿಗಳು ಕಾಲೇಜಿಗೆ ಬೀಗ ಜಡಿದು, ಪ್ರತಿಭಟನೆ ನಡೆಸಿ ಫಲಿತಾಂಶಕ್ಕಾಗಿ ಪಟ್ಟು ಹಿಡಿದು ಯಶಸ್ವಿಯಾದ ಘಟನೆ ಗುರುವಾರ ನಡೆಯಿತು.

Advertisement

ಕಳೆದ ನಾಲ್ಕೈದು ತಿಂಗಳಿಂದ ಫಲಿತಾಂಶ ಬಾರದೇ ಇರುವ ಬಗ್ಗೆ ಕಾಲೇಜಿನ ಪ್ರಾಧ್ಯಾಪಕರಿಗೆ ತಿಳಿಸಲಾಗಿದೆ. ಆದರೆ ಯಾರೂ ಸ್ಪಂದಿಸುವ ಗೋಜಿಗೆ ಹೋಗಿಲ್ಲ. ವಿಭಾಗದ ಮುಖ್ಯಸ್ಥರನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಪ್ರಾಂಶುಪಾಲರು ಕೇವಲ ಸಮಾಜಾಯಿಷಿ ನೀಡುತ್ತಿದ್ದಾರೆ. ಆದರೆ ಇದೀಗ ಮತ್ತೂಂದು ಸೆಮೆಸ್ಟರ್‌ನ ಪರೀಕ್ಷೆಗಾಗಿ ಶುಲ್ಕ ಭರಿಸಿಕೊಳ್ಳಲು ಆರಂಭಿಸಿದ್ದಾರೆ. ಇದೀಗ ನಾವುಗಳು ಅಂತಿಮ ವರ್ಷದ ಅಧ್ಯಯನದಲ್ಲಿದ್ದೇವೆ. ಮುಂದೆ ನಾವುಗಳು ಗೊಂದಲದಲ್ಲಿಯೇ ಪರೀಕ್ಷೆ ಎದುರಿಸಬೇಕಾಗುತ್ತದೆ. ಹೀಗಾಗಿ ನಮಗೆ ಕಳೆದ ಸೆಮೆಸ್ಟರ್‌ ಪಲಿತಾಂಶ ನೀಡಬೇಕು ಎಂದು ಸ್ಥಳಕ್ಕೆ ಆಗಮಿಸಿದ ಪ್ರಾಂಶುಪಾಲ ಅಣ್ಣಾಸಾಗರ, ಪಿಎಸ್‌ಐ ಸೋಮಲಿಂಗ ಒಡೆಯರ ಅವರಿಗೆ ಒತ್ತಾಯಿಸಿದರು.

ಪ್ರಾಂಶುಪಾಲ ಅಣ್ಣಾಸಾಗರ, ಪಿಎಸ್‌ಐ ಸೋಮಲಿಂಗ ಹಾಗೂ ಕಾರ್ಯನಿಮಿತ್ತ ಕಾಲೇಜಿಗೆ ಆಗಮಿಸಿದ್ದ ಹಿರಿಯ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರೂ ವಿದ್ಯಾರ್ಥಿಗಳು ಕೇಳಲಿಲ್ಲ. ಬೇರೆಲ್ಲ ಕಾಲೇಜುಗಳ ವಿದ್ಯಾರ್ಥಿಗಳ ಪಲಿತಾಂಶ ನೀಡಲಾಗಿದೆ. ಆದರೆ ನಮ್ಮ ಕಾಲೇಜಿನ ಕೆಮೆಸ್ಟ್ರಿ ವಿಭಾಗದ್ದೇ ಸಮಸ್ಯೆಯಾಗಿದೆ. ಎಲ್ಲಿಯ ವರೆಗೂ ಪಲಿತಾಂಶ ತಿಳಿಸುವುದಿಲ್ಲವೋ ಅಲ್ಲಿವರೆಗೂ ನಾವು ಪ್ರತಿಭಟನೆ ಕೈಬಿಡುವದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದರು. ಕೊನೆಗೆ ಮಧ್ಯಾಹ್ನ 3ಗಂಟೆಗೆ ಸುಮಾರಿಗೆ ವಿಶ್ವವಿದ್ಯಾಲಯದಿಂದ ಫಲಿತಾಂಶ ಪಟ್ಟಿ ತರಿಸಿದ ಮೇಲೆ ಪ್ರತಿಭಟನೆ ಕೈಬಿಡಲಾಯಿತು.

ವಿದ್ಯಾರ್ಥಿ ಮುಖಂಡರಾದ ಷಣ್ಮುಖ, ಪ್ರಸನ್ನಕುಮಾರ, ಸಚಿನ, ರಮೇಶ, ಮುಖೇಶ, ನಾಗರಾಜ, ಮಲ್ಲಿಕಾರ್ಜುನ, ಪ್ರಶಾಂತ, ಮಹಾದೇವರೆಡ್ಡಿ, ಅಬ್ದುಲ್‌, ಇಬ್ರಾಹಿಂ, ಅಭಿಷೇಕ, ಪ್ರಿಯಾಂಕಾ, ಶಿಲ್ಪಾ, ಗಂಗಮ್ಮ, ವೀರಮಣಿ, ಕಿರಣ, ಸುಮನ್‌ ಹಾಗೂ ನೂರಾರು ವಿದ್ಯಾರ್ಥಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next