Advertisement

ಹೊರಾಂಗಣ ಜಾಹೀರಾತು ಮತ್ತೆ ಮುನ್ನೆಲೆಗೆ

11:56 AM Sep 06, 2020 | Suhan S |

ಬೆಂಗಳೂರು: ಹಿಂಬಾಗಿಲಿನ ಮೂಲಕ ನಗರದಲ್ಲಿ ಹೋರ್ಡಿಂಗ್ಸ್‌ ಅಳವಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಖುದ್ದು ಮೇಯರ್‌ ಎಂ. ಗೌತಮ್‌ ಕುಮಾರ್‌ ಅವರು ಆರೋಪಿಸಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ.

Advertisement

ಪಾಲಿಕೆ 2018ರಲ್ಲಿ “ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018′ ಈಗಾಗಲೇ ಜಾರಿಯಲ್ಲಿದ್ದು, ಇದರಿಂದ ನಗರದಲ್ಲಿ ಅನಧಿಕೃತ ಫ್ಲೆಕ್ಸ್‌, ಬ್ಯಾನರ್ಗಳಿಲ್ಲದೆ ನಗರ ಸುಂದರವಾಗಿದೆ. ಅಲ್ಲದೆ, ನಗರದ ಸೌಂದರ್ಯ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಹೋರ್ಡಿಂಗ್ಸ್‌ ನಿಷೇಧಿಸಲು ಪಾಲಿಕೆ ನಿರ್ಣಯ ತೆಗೆದುಕೊಂಡಿದೆ. ರಾಜ್ಯ ಸರ್ಕಾರಕ್ಕೆ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಇರುವುದಿಲ್ಲ. ಅದರಂತೆ ಬಿಬಿಎಂಪಿಯ ಬೈಲಾ-2018′ ಜಾಹೀರಾತಿಗೆ ವ್ಯತಿರಿಕ್ತವಾದ ಯಾವುದೇ ನಿಯಮಗಳನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದರೂ, ಅದು ಪಾಲಿಕೆ ಸಂವಿಧಾನದತ್ತ ಅಧಿಕಾರ ಉಲ್ಲಂಘನೆ ಆಗುತ್ತದೆ ಎಂದು ಮೇಯರ್‌ ಪತ್ರದಲ್ಲಿ ವಿವರಿಸಿದ್ದಾರೆ.

ಈ ಮಧ್ಯೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಅಳವಡಿಸಿಕೊಳ್ಳಲು ಜಾಹೀರಾತು ಅಸೋಸಿಯೇಷನ್‌ ಪ್ರತಿನಿಧಿಗಳು ತಮಗೆಅನುಕೂಲವಾಗುವಂತೆ ಮತ್ತು ಕೆಎಂಸಿ ಕಾಯ್ದೆಗೆ ವಿರುದ್ಧವಾಗಿ ಸರ್ಕಾರದ ಮೂಲಕ ಲಾಬಿ ನಡೆಸಿ, ಬಿಬಿಎಂಪಿ “ಜಾಹೀರಾತು ನಿಯಮ2019’ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಹಿಂಬಾಗಿಲಿನಿಂದ ಹೋರ್ಡಿಂಗ್ಸ್‌ ಪ್ರದರ್ಶಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ ಎಂದು ದೂರಿದ್ದಾರೆ.

ಹಿಂಬಾಗಿಲಿನಿಂದ ಹೋರ್ಡಿಂಗ್ಸ್‌: ನಗರದಲ್ಲಿ ಈಗ ಜಾರಿ ಮಾಡಲು ಪ್ರಯತ್ನಿಸುತ್ತಿರುವ ಜಾಹೀರಾತು ನಿಯಮಗಳಲ್ಲಿ ಪುನಃ ಹೋರ್ಡಿಂಗ್ಸ್‌ಗಳಿಗೆ ಅವಕಾಶ ಮಾಡಿಕೊಡಲು ಪ್ರಯತ್ನ ನಡೆದಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಹೋರ್ಡಿಂಗ್ಸ್‌ಗಳು ಯಥೇತ್ಛವಾಗಿ ಅಳವಡಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ. ಅಲ್ಲದೆ, ಹೋರ್ಡಿಂಗ್ಸ್‌ಗಳನ್ನು ಅಳವಡಿಕೆಗೆ ಸಾರ್ವಜನಿಕರಿಂದಲೂ ಆಕ್ಷೇಪವಿದೆ. ಹೋರ್ಡಿಂಗ್ಸ್‌ ಅಳವಡಿಕೆ ವಿಚಾರವಾಗಿ ಪರಿಶೀಲನೆ ಮಾಡಲು ರಚನೆ ಮಾಡಿದ್ದ ಸಮಿತಿಯ ಸದಸ್ಯರೇ ಹೋರ್ಡಿಂಗ್ಸ್‌ ನಿಷೇಧಿಸುವಂತೆ ಶಿಫಾರಸು ಮಾಡಿದ್ದಾರೆ.ಆದರೆ, ಮೆಟ್ರೋ (ಬಿಎಂಆರ್‌ ಸಿಎಲ್‌) ಸಂಸ್ಥೆ ಜಾಹೀರಾತು ಬೈಲಾಗಳಿಗೆ ಕೋರಿರುವ ಬದಲಾವಣೆಗಳನ್ನು ಅಳವಡಿಸಿಕೊಳ್ಳವ ನೆಪವನ್ನು ಮರೆಮಾಚಿ, ಕೆಎಂಸಿ ಕಾಯ್ದೆ ಹಾಗೂ ಬಿಬಿಎಂಪಿ ಅಧಿಕಾರಕ್ಕೆ ವಿರುದ್ಧವಾಗಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕಡತ ಮಂಡನೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018′ ಜಾಹೀರಾತಿಗೆ ವ್ಯತಿರಿಕ್ತವಾದ ಯಾವುದೇ ನಿಯಮಗಳನ್ನು ರೂಪಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಸರ್ಕಾರಕ್ಕಿದೆ ಅಧಿಕಾರ :  ಕರ್ನಾಟಕ ಪೌರ ಆಡಳಿತ ಕಾಯ್ದೆ-1976ರ ಕಲಂ 425 ಪ್ರಕಾರ ಬಿಬಿಎಂಪಿ ಬೈಲಾ ರಚಿಸಬಹುದು. ಇದರಲ್ಲಿ ಲೋಪವಾದರೆ ಅಥವಾ ಬೈಲಾ ರೂಪಿಸುವಲ್ಲಿ ವಿಫ‌ಲವಾದರೆ ಸರ್ಕಾರ ಕೆಎಂಸಿ ಕಾಯ್ದೆಯ ಕಲಂ 427ರ ಪ್ರಕಾರ ಮಧ್ಯ ಪ್ರವೇಶಿಸಿ, ಹೊಸ ನೀತಿಯನ್ನು ಜಾರಿ ಮಾಡುವುದಕ್ಕೆ ಅವಕಾಶವಿದೆ. ಆದರೆ, ಬಿಬಿಎಂಪಿ ರೂಪಿಸಿರುವ “ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018′ ಕರಡಿನ ಬಗ್ಗೆ ಸರ್ಕಾರಕ್ಕೆ ಎಲ್ಲ ವರದಿಗಳನ್ನು ಬಿಬಿಎಂಪಿ ನೀಡಿದೆ. ಇದೀಗ ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next