Advertisement

ಉತ್ತರಾಖಂಡ ಭೂಕುಸಿತಕ್ಕೆ ಸಿಲುಕಿರುವ ಎಲ್ಲಾ ಕನ್ನಡಿಗರು ಸುರಕ್ಷಿತ

03:45 AM May 21, 2017 | |

ಬೆಂಗಳೂರು: ಉತ್ತರಾಖಂಡ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವವರಲ್ಲಿ 120ಕ್ಕೂ ಹೆಚ್ಚು ಜನ ಕನ್ನಡಿಗರೂ ಇದ್ದಾರೆ. ಆದರೆ, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ.ಬೆಂಗಳೂರು, ಉಡುಪಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಕನ್ನಡಿಗರು ಬದರಿನಾಥ ದೇವಾಲಯ ಸೇರಿದಂತೆ ಸುತ್ತಲಿನ ಪ್ರದೇಶಗಳಿಗೆ ಪ್ರವಾಸ ತೆರಳಿದ್ದರು. ಆದರೆ, ಭೂಕುಸಿತದಿಂದಾಗಿ ಬದರಿನಾಥ ಮತ್ತು ಹರಿದ್ವಾರ ನಡುವಿನ ರಸ್ತೆ ಸಂಪರ್ಕವೇ ಕಡಿತಗೊಂಡಿದೆ. ಪರಿಣಾಮ 120ಕ್ಕೂ ಹೆಚ್ಚು ಕನ್ನಡಿಗರು ಅಲ್ಲಿನ ಅನಂತಮಠ ಮತ್ತು ಹೋಟೆಲ್‌ ದ್ವಾರಕಾದಲ್ಲೇ ಉಳಿಯಬೇಕಾಯಿತು.

Advertisement

ಬುಕಿಂಗ್‌ ರದ್ದು ತಲೆನೋವು; ಚಳಿ ಸಮಸ್ಯೆ
ಈ ಮಧ್ಯೆ ಪ್ರವಾಸಿಗರೆಲ್ಲಾ ರೈಲು, ವಿಮಾನ ಟಿಕೆಟ್‌ ಬುಕಿಂಗ್‌ ಮಾಡಿದ್ದಾರೆ. ಭೂಕುಸಿತದಿಂದ ನಿಗದಿತ ಸಮಯಕ್ಕೆ ತಲುಪಲು ಆಗುವುದಿಲ್ಲ. ಟಿಕೆಟ್‌ಗಳೆಲ್ಲಾ ರದ್ದಾಗಿರುತ್ತವೆ. ಇದರಿಂದ ಸ್ವಲ್ಪ ಕಿರಿಕಿರಿ ಆಗಲಿದೆ.

ಅವರೆಲ್ಲರಿಗೂ ಅನಂತಮಠದಲ್ಲಿ ಊಟ-ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಅನ್ನ, ಸಾಂಬಾರು, ಬಿಸಿಬೇಳೆ ಬಾತ್‌ ಮಾಡಲಾಗಿತ್ತು. ಕನ್ನಡಿಗರು ಮಠದಲ್ಲಿಯೇ ಊಟ ಮಾಡಿದರು. ವಿದ್ಯುತ್‌ ಸಂಪರ್ಕ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲವೂ ವ್ಯವಸ್ಥಿತವಾಗಿದೆ. ಆದರೆ, ಚಳಿ ಇರುವುದರಿಂದ ವಯೋವೃದ್ಧರಿಗೆ ತುಸು ಸಮಸ್ಯೆ ಆಗುತ್ತಿದೆ. ಉಳಿದಂತೆ ಯಾವುದೇ ಸಮಸ್ಯೆ ಇಲ್ಲ ಎಂದು ಮಠದ ವ್ಯವಸ್ಥಾಪಕ ವೇಣುಗೋಪಾಲ್‌ “ಉದಯವಾಣಿ’ಗೆ ಮಾಹಿತಿ ನೀಡಿದರು.

“ಶನಿವಾರ ರಾತ್ರಿಯೇ ಬದರಿನಾಥದಿಂದ ಜೋಶಿಮಠದ ನಡುವಿನ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ರಾತ್ರಿ ವಾಹನ ಚಾಲನೆ ಮಾಡಲು ಚಾಲಕರು ಹಿಂದೇಟು ಹಾಕುತ್ತಿರುವುದರಿಂದ ಬೆಳಿಗಿನಜಾವ ಬದರಿನಾಥದಿಂದ ಹರಿದ್ವಾರದತ್ತ ಪ್ರವಾಸ ಬೆಳೆಸಲಿದ್ದಾರೆ’ ಎಂದು ವೇಣುಗೋಪಾಲ್‌ ತಿಳಿಸಿದರು.

“ಶುಕ್ರವಾರ ಬೆಳಿಗ್ಗೆಯೇ ಬಂದಿದ್ದೆವು. ಆದರೆ, ಭೂಕುಸಿತದಿಂದಾಗಿ ಬದರಿನಾಥದಲ್ಲಿಯೇ ಉಳಿದುಕೊಳ್ಳಬೇಕಾಯಿತು. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ’ ಎಂದು ಬೆಂಗಳೂರಿನಿಂದ ತೆರಳಿದ 26 ಜನರ ತಂಡದಲ್ಲಿನ ಸದಸ್ಯ ವಿಷ್ಣು ಸ್ಪಷ್ಟಪಡಿಸಿದರು.

Advertisement

ಎಲ್ಲರೂ ಸೇಫ್; ಕರ್ನಾಟಕ ಭವನ
ಭೂಕುಸಿತದಿಂದ ಬದರಿನಾಥದಲ್ಲಿ ಸಿಲುಕಿರುವ ಬಹುತೇಕ ಎಲ್ಲ ಕನ್ನಡಿಗರು ಸಂಪರ್ಕದಲ್ಲಿದ್ದಾರೆ. ಅದರಲ್ಲಿ ಹೆಚ್ಚಿನವರು ಬೆಂಗಳೂರು ಮೂಲದವರಾಗಿದ್ದಾರೆ. ಈ ಪೈಕಿ ರಾತ್ರಿ 25 ಜನರ ಒಂದು ತಂಡ ಈಗಾಗಲೇ ಬದರಿನಾಥದಿಂದ ಹೊರಟಿದ್ದು, ರಾತ್ರಿ 11.30ಕ್ಕೆ ಹರಿದ್ವಾರದಿಂದ ರೈಲಿನಲ್ಲಿ ದೆಹಲಿ ತಲುಪಲಿದೆ. 41 ಜನರ ಮತ್ತೂಂದು ತಂಡ ಭಾನುವಾರ ಶ್ರೀನಗರಕ್ಕೆ ತೆರಳಿ, ಅಲ್ಲಿಂದ ಎರಡು ದಿನಗಳ ನಂತರ ದೆಹಲಿಗೆ ಆಗಮಿಸಲಿದೆ. ಇನ್ನೂ 6 ಮತ್ತು 10 ಜನರ ಎರಡು ತಂಡಗಳು ಕೂಡ ಬೆಳಿಗ್ಗೆ ಹರಿದ್ವಾರದ ಮೂಲಕ ದೆಹಲಿಗೆ ಬರಲಿವೆ ಎಂದು ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ತಿಳಿಸಿದ್ದಾರೆ.

ಈ ನಡುವೆ ರಾಜ್ಯ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕೂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸಂಜೆಯಿಂದ ಕರೆಗಳು ಬರುತ್ತಿದ್ದು, ಎಲ್ಲರೂ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ಅವರೆಲ್ಲರಿಗೆ ದೆಹಲಿ ಕರ್ನಾಟಕ ಭವನ ಮತ್ತು ಕೇಂದ್ರದ ವಿಪತ್ತು ನಿರ್ವಹಣೆ ತಂಡ ಸಂಪರ್ಕಿಸಲು ಕೋರಲಾಗಿದೆ ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಸಿಬ್ಬಂದಿ ತಿಳಿಸಿದರು. ಸಂಕಷ್ಟದಲ್ಲಿರುವವರು ನಿಯಂತ್ರಣ ಕೊಠಡಿ- 1070/ 080 22340676 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next