Advertisement

“ಗ್ರಾಹಕರ ಸಂತೃಪ್ತಿಯೇ ನಮ್ಮ ಮುಖ್ಯ ಉದ್ದೇಶ”

08:20 PM Feb 26, 2021 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಪ್ರಾಯೋಜಿತ ಭಾರತ್‌ ಕೋ. ಆಪರೇಟಿವ್‌ ಬ್ಯಾಂಕಿನ ಪೊವಾಯಿ ಶಾಖೆಯು ಪೊವಾಯಿ ಐಐಟಿ ಮುಖ್ಯದ್ವಾರ, ಫುಲೋರಾ ಸಿಎಚ್‌ಎಸ್‌ ಲಿಮಿಟೆಡ್‌ ಇದರ ತಳಮಹಡಿಗೆ ಸ್ಥಳಾಂತರಗೊಂಡಿದ್ದು ಇದರ ಉದ್ಘಾಟನಾ ಸಮಾರಂಭವು ಫೆ. 25ರಂದು ನಡೆಯಿತು.

Advertisement

ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಯು. ಶಿವಾಜಿ ಪೂಜಾರಿ ಅವರು ರಿಬ್ಬನ್‌ ಕತ್ತರಿಸಿ ದೀಪಪ್ರಜ್ವಲಿಸುವುದರೊಂದಿಗೆ ಸ್ಥಳಾಂತರಿತ ಶಾಖೆಯನ್ನು ಲೋಕಾರ್ಪ ಣೆಗೊಳಿಸಿದರು. ಬ್ಯಾಂಕಿನ ಎಟಿಎಂ ಸೌಲಭ್ಯ ಹಾಗೂ ಭದ್ರತಾ ಕೊಠಡಿಗೆ ಬ್ಯಾಂಕಿನ ಉಪಕಾರ್ಯಾಧ್ಯಕ್ಷೆ ರೋಹಿಣಿ ಜೆ. ಸಾಲ್ಯಾನ್‌ ಚಾಲನೆ ನೀಡಿದರು.

ಸ್ಥಳಾಂತರಿತ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಕಾರ್ಯಾ ಧ್ಯಕ್ಷರಾದ ಯು. ಶಿವಾಜಿ ಪೂಜಾರಿ ಅವರು, ಭಾರತ್‌ ಬ್ಯಾಂಕಿನ ಗ್ರಾಹಕರ ಅನುಕೂಲದ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದು, ಗ್ರಾಹಕರ ಸಂತೃಪ್ತಿಯೇ ನಮ್ಮ ಮುಖ್ಯ ಉದ್ದೇಶವಾಗಿದೆ. ಆಧುನಿಕ ತಂತ್ರಜ್ಞಾನಗಳೊಂದಿಗೆ ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭ ಉಪಸ್ಥಿತರಿದ್ದ ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಅವರು ಮಾತನಾಡಿ, ಬಿಲ್ಲವರ ಅಸೋಸಿಯೇಶನ್‌ನ ಪ್ರತಿಷ್ಠಿತ ಭಾರತ್‌ ಬ್ಯಾಂಕ್‌ ಇಂದು ದೇಶದಲ್ಲಿ ಪ್ರತಿಷ್ಠೆಯನ್ನು ಹೊಂದಿದಂತಹ ಬ್ಯಾಂಕ್‌ ಆಗಿದ್ದು ನಮಗೆಲ್ಲರಿಗೂ ಗೌರವವನ್ನು ತಂದುಕೊಟ್ಟಿದೆ. ಇನ್ನು ಮುಂದೆಯೂ ಗ್ರಾಹಕರ ಸಂಪೂರ್ಣ ಸಹಕಾರ ಬೇಕಾಗಿದೆ. ಗ್ರಾಹಕರಿಗೆ ಎಲ್ಲ ರೀತಿಯ ಆಧುನಿಕ ಸೌಲಭ್ಯ ಗಳನ್ನು ಈ ಬ್ಯಾಂಕ್‌ ಕೊಡುತ್ತಾ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ ಅವರು ಮಾತನಾಡಿ, ನನ್ನ ಅತ್ಯಂತ ಪ್ರೀತಿಯ ಬ್ಯಾಂಕುಗಳಲ್ಲಿ ಭಾರತ್‌ ಬ್ಯಾಂಕ್‌ ಒಂದಾಗಿದೆ. ಭಾರತ್‌ ಬ್ಯಾಂಕಿನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು ಎಲ್ಲ ರೀತಿಯ ಸಹಕಾರವನ್ನು ಬ್ಯಾಂಕ್‌ ನೀಡುತ್ತಾ ಬಂದಿದೆ. ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬಂದಿ ವರ್ಗದ ಕಾರ್ಯ ಅಭಿನಂದನೀಯವಾಗಿದೆ ಎಂದರು.

Advertisement

ಬ್ಯಾಂಕಿನ ಸ್ಥಾಪಕ ಕಾರ್ಯಾಧ್ಯಕ್ಷ ವರದ ಉಳ್ಳಾಲ್‌, ಭಾರತ್‌ ಬ್ಯಾಂಕಿನ ನಿರ್ದೇಶಕರಾದ ಜ್ಯೋತಿ ಕೆ. ಸುವರ್ಣ, ಎಸ್‌. ಬಿ. ಅಮೀನ್‌, ಗಂಗಾಧರ ಜೆ. ಪೂಜಾರಿ, ಸೂರ್ಯಕಾಂತ ಜೆ. ಸುವರ್ಣ, ಪುರುಷೋತ್ತಮ ಎಸ್‌. ಕೋಟ್ಯಾನ್‌, ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಒ ವಿದ್ಯಾನಂದ ಎಸ್‌. ಕರ್ಕೇರ, ಆಡಳಿತ ಮಂಡಳಿಯ ಜತೆ ನಿರ್ದೇಶಕ ದಿನೇಶ್‌ ಬಿ. ಸಾಲ್ಯಾನ್‌, ಉಪ ಮಹಾ ಪ್ರಬಂಧಕರಾದ ಪ್ರಭಾಕರ ಜಿ. ಪೂಜಾರಿ, ಸತೀಶ್‌ ಎಂ. ಬಂಗೇರ, ಪ್ರಬಂಧಕರಾದ ಮೋಹನ್‌ ಕರ್ಕೇರ, ಸಂತೋಷ್‌ ಬಿ. ಕೋಟ್ಯಾನ್‌, ಶಾಖೆಯ ಪ್ರಬಂಧಕ ಪ್ರಕಾಶ್‌ ಆರ್‌. ಅಮೀನ್‌, ಸಹಾಯಕ ಪ್ರಬಂಧಕಿ ದಿವ್ಯಾ ವಿ. ಶೆಟ್ಟಿ, ಅಧಿಕಾರಿಗಳಾದ ಅಕ್ಷತಾ ಎಂ. ಪೂಜಾರಿ, ಪದ್ಮ, ಪ್ರತಿಮಾ ಎ. ಪೂಜಾರಿ, ಪ್ರತಿಮಾ ಆರ್‌. ಪೂಜಾರಿ, ಬಿಲ್ಲವರ ಅಸೋಸಿಯೇಶನ್‌ ಯುವ ವಿಭಾಗದ ಕಾರ್ಯಾಧ್ಯಕ್ಷ ನಾಗೇಶ್‌ ಕೋಟ್ಯಾನ್‌, ಸ್ಥಳೀಯ ಉದ್ಯಮಿಗಳಾದ ಸುರೇಶ್‌ ಶೆಟ್ಟಿ, ವೇಣುಗೋಪಾಲ್‌ ಪಿಳ್ಳೈ, ಸಿಎ ಕೃಷ್ಣ ಸುವರ್ಣ, ರಾಹುಲ್‌ ಜಗದೀಶ್‌ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು. ಉಳೂ¤ರು ಶೇಖರ್‌ ಶಾಂತಿ ಹಾಗೂ ಗಂಗಾಧರ ಕಲ್ಲಾಡಿ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಭಾರತಿ ಚಂದ್ರಹಾಸ್‌ ಅಮೀನ್‌ದಂಪತಿ ಸಹಕರಿಸಿದರು. ಸ್ಥಳೀಯ ಗ್ರಾಹಕರು, ಹಿತೈಷಿಗಳು, ಸಮಾಜ ಬಾಂಧವರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಉದ್ಯಮಿಗಳು ಪಾಲ್ಗೊಂಡು ಶುಭಹಾರೈಸಿದರು.

ಚಿತ್ರ-ವರದಿ: ಸುಭಾಶ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next