ಮೈಸೂರು: ಮೈಸೂರು ಧರ್ಮಕ್ಷೇತ್ರದ 7ನೇ ಬಿಷಪ್ ಆಗಿ ನಿಯೋಜನೆಗೊಂಡಿರುವ ಕೆ.ಎ. ವಿಲಿಯಂ ಅವರ ಧರ್ಮಾಧ್ಯಕ್ಷ ದೀಕ್ಷೆ ಸಮಾರಂಭ ಸೋಮವಾರ ನಡೆಯಲಿದೆ ಎಂದು ಫಾದರ್ ಲೆಸ್ಲಿ ಮೋರೆಸ್ ತಿಳಿಸಿದರು.
ನಗರದ ಸಂತ ಫಿಲೋಮಿನಾ ಚರ್ಚ್ ಆವರಣ ದಲ್ಲಿರುವ ಸಂತ ಜೋಸೆಫರ ಪ್ರಧಾನಾಲಯದಲ್ಲಿ ಸೋಮವಾರ ಸಂಜೆ 4.30ಕ್ಕೆ ದೀಕ್ಷೆ ಸಮಾರಂಭ ನಡೆಯಲಿದೆ. ಸಮಾರಂಭದ ಪ್ರಧಾನ ಪ್ರತಿಷ್ಠಾಪಕರಾಗಿ ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಬಿಷಪ್ ಡಾ. ಥಾಮಸ್ ಆಂಟನಿ ವಾಳಪಿಳ್ಳಿ ಹಾಗೂ ಸಹ ಪ್ರತಿಷ್ಠಾಪಕರಾಗಿ ಬೆಂಗಳೂರು ಮಹಾಧರ್ಮ ಕ್ಷೇತ್ರದ ಡಾ. ಬರ್ನಾಡ್ ಮೊರಾಸ್,
ಚಿಕ್ಕಮಗಳೂರು ಧರ್ಮ ಕ್ಷೇತ್ರದ ಡಾ. ಟಿ. ಅಂತೋಣಿಸ್ವಾಮಿ ಅವರ ಸಮ್ಮುಖದಲ್ಲಿ ನೂತನ ಅಧ್ಯಕ್ಷರ ಧರ್ಮಾಧೀಕ್ಷೆ ಮತ್ತು ಪೀಠಾರೋಹಣ ನಡೆಯಲಿದ್ದು, ಈ ವೇಳೆ 25 ಧರ್ಮಾಧ್ಯಕ್ಷರು, 500 ಗುರುಗಳು ಭಾಗ ವಹಿಸಲಿದ್ದಾರೆ. ಇವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ .ಮಹದೇವಪ್ಪ, ಸಚಿವರಾದ ತನ್ವೀರ್, ಕೆ.ಜೆ. ಜಾರ್ಜ್, ಮೇಯರ್ ಎಂ.ಜೆ. ರವಿಕುಮಾರ್, ಸಂಸದ ಪ್ರತಾಪ್ ಸಿಂಹ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಭಾಗವಹಿಸಲಿದ್ದಾರೆ ಎಂದರು.
ನೂತನ ಬಿಷಪ್ ಕೆ.ಎ. ವಿಲಿಯಂ ಮಾತನಾಡಿ ಮೈಸೂರು ಧರ್ಮಕ್ಷೇತ್ರದ ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಸೇವೆ ಮಾಡುವುದಾಗಿ ಆಗಿ ನೇಮಕಗೊಂಡಿರುವ ಕೆ.ಎ.ವಿಲಿಯಂ ಹೇಳಿದರು. ಮೈಸೂರು ಧರ್ಮಕ್ಷೇತ್ರ ಹಳೆಯ ಧರ್ಮಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ಸೇವೆ ಮಾಡಲು ಪತ್ರದ ಮೂಲಕ ಪೋಪ್‌ರವರನ್ನು ಒಪ್ಪಿಗೆ ಕೇಳಿದಾಗ ಅತ್ಯಂತ ಗೌರವದಿಂದ ಒಪ್ಪಿದ್ದಾರೆ. ಅದರಂತೆ ಮೈಸೂರು ಧರ್ಮಕ್ಷೇತ್ರದಲ್ಲಿ ಅನೇಕ ಹಿರಿಯ ಗುರುಗಳಿದ್ದು, ಅವರ ಮಾರ್ಗದರ್ಶನದಲ್ಲಿ ಸೇವೆ ಮಾಡಲಾಗುವುದು.
ಅಲ್ಲದೆ ಮೈಸೂರು ಧರ್ಮಕ್ಷೇತ್ರದಲ್ಲಿ 136 ಶಿಕ್ಷಣ ಸಂಸ್ಥೆಗಳಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ಕೇಂದ್ರ ತೆರೆಲಾಗಿತ್ತು. ಇದೀಗ ಸಂಶೋಧನ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇವೆಲ್ಲದರೊಂದಿಗೆ ಮೈಸೂರು ಧರ್ಮಕ್ಷೇತ್ರದ ಆಸ್ತಿ ವಿವಾದದ ಬಗ್ಗೆಯೂ ಗಮನಹರಿಸುವುದಾಗಿ ತಿಳಿಸಿದರು. ಧರ್ಮಾಧ್ಯಕ್ಷರಾದ ಡಾ.ಥಾಮಸ್ ಆಂಟನಿ ವಾಳಪಿಳ್ಳಿ, ಫಾದರ್ ಮರಿ ಜೋಸಫ್, ಫಾದರ್ ವಿಜಯಕುಮಾರ್ ಹಾಜರಿದ್ದರು.