Advertisement

ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌; ಮಳೆ ಸಾಧ್ಯತೆ

11:51 PM May 17, 2022 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಮಂಗಳವಾರ ಮಳೆಯಾಗಿದೆ. ಮಂಗಳೂರು ನಗರದ ಸೇರಿದಂತೆ ಜಿಲ್ಲೆಯಲ್ಲಿ ಹಗುರದಿಂದ ಕೂಡಿದ ಮಳೆಯಾಗಿತ್ತು.

Advertisement

ಗುರುಪುರ ಕೈಕಂಬದ ಸುರಲ್ಪಾಡಿ ಬಳಿ ಸೋಮವಾರದಂದು ಅಸ್ಲಾಂ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಮನೆಯ ವಿದ್ಯುತ್‌ ಮೀಟರ್‌, ಸಹಿತ ಹಲವು ಉಪಕರಣಗಳು ಸುಟ್ಟು ಹೋಗಿ ಅಪಾರ ನಷ್ಟ ಉಂಟಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನುಷ್ಯರಿಗೆ ಯಾವುದೇ ಅನಾಹುತ ಉಂಟಾಗಲಿಲ್ಲ.

ಉಡುಪಿ: ಬೆಳೆಗಳಿಗೆ ಹಾನಿ
ಉಡುಪಿ: ಉಡುಪಿ ತಾಲೂಕಿನಾದ್ಯಂತ ಸೋಮವಾರ ತಡರಾತ್ರಿ ನಿರಂತರ ಮಳೆಯಾಗಿದ್ದು, ಮಂಗಳವಾರವೂ ಮೋಡ ಕವಿದ ವಾತಾವರಣದೊಂದಿಗೆ ಸಣ್ಣದಾಗಿ ಅಲ್ಲಲ್ಲಿ ಮಳೆಯಾಗಿದೆ.

ಜಿಲ್ಲೆಯಾದ್ಯಂತ ಸುರಿದ ಗಾಳಿ ಮಳೆಗೆ 10ಕ್ಕೂ ಅಧಿಕ ಮನೆಗಳಿಗೆ, ಕುಂದಾಪುರ ತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿದೆ. ಕೆಲವು ಮನೆಗಳಿಗೆ ಸಿಡಿಲು ಬಡಿದು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ರಾತ್ರಿ ವೇಳೆ ಸುರಿದ ಮಳೆಗೆ ಹಲವೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಿದ್ದು, ನಗರದ ಗುಂಡಿಬೈಲು ಸಹಿತ ಕೆಲವು ಪ್ರದೇಶಗಳಲ್ಲಿ ರಾತ್ರಿಪೂರ್ತಿ ವಿದ್ಯುತ್‌ ಪೂರೈಕೆ ಸ್ಥಗಿತವಾಗಿತ್ತು. ಕಾಪು ತಾಲೂಕಿನ ಕೋಟೆ ಗ್ರಾಮದ ಸರೋಜಾ ಅವರ ಮನೆಗೆ ಸಿಡಿಲು ಬಡಿದು ಮನೆ ಗೋಡೆ ಮತ್ತು ವಿದ್ಯುತ್‌ ವೈರಿಂಗ್‌ಗೆ ಹಾನಿ ಸಂಭವಿಸಿದೆ. ಆತ್ರಾಡಿ ಗ್ರಾಮದ ಮಹಾದೇವ ಕಾಮತ್‌ ಅವರ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ. ಬ್ರಹ್ಮಾವರದ ಚೇರ್ಕಾಡಿ ಗ್ರಾಮದ ಶೀನ ನಾಯ್ಕ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ.ಅಚ್ಲಾಡಿ ಗ್ರಾಮದ ಗೋಪಾಲ ಗಾಣಿಗ ಅವರ ಮನೆಯ ಮೇಲೆ ಮರಬಿದ್ದು ಹಾನಿಯಾಗಿದೆ.

Advertisement

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ 2 ದಿನಗಳ ಕಾಲಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಈ ವೇಳೆ ಭಾರೀ ಮಳೆಯ ಜತೆ ಗಾಳಿ, ಸಿಡಿಲು ಕೂಡ ಇರಲಿದೆ. ಐಎಂಡಿ ಮಾಹಿತಿಯಂತೆ ಗರಿಷ್ಠ ಉಷ್ಣಾಂಶ ಇಳಿಕೆಯಾಗಿದ್ದು, ಮಂಗಳೂರಿನಲ್ಲಿ 28.5 ಡಿ.ಸೆ. ಗರಿಷ್ಠ ಮತ್ತು 22.6 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದೆ.

ಉಕ್ಕಿ ಹರಿದ ನೀರು: ಕಿಂಡಿ ಅಣೆಕಟ್ಟು ಭರ್ತಿ
ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಹಾಗೂ ಸೋಮವಾರ ಸುರಿದ ಮಳೆಯಿಂದ ನೇತ್ರಾವತಿ ಸಹಿತ ಮೃತ್ಯುಂಜಯ ನದಿ ನೀರಿನ ಹರಿವು ಹೆಚ್ಚಳಗೊಂಡಿದ್ದರಿಂದ ಬೇಸಗೆಗೆ ಹಲಗೆ ಜೋಡಣೆ ಮಾಡಿರುವ ಕಿಂಡಿ ಅಣೆಕಟ್ಟುಗಳು ಭರ್ತಿಯಾಗಿ ಕೃತಕ ನೆರೆ ಉಂಟಾಗಿದೆ.

ಲಾೖಲ ಪುತ್ರಬೈಲು ಸಮೀಪ ಕಳೆದ ಕೆಲವು ದಿನಗಳ ಹಿಂದಷ್ಟೆ ಪೂರ್ಣಗೊಂಡ ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಣೆ ಮಾಡಿ ನೀರು ಸಂಗ್ರಹಿಸಲಾಗಿತ್ತು. ಆದರೆ ಸೋಮವಾರ ಸಂಜೆ ಸುರಿದ ಮಳೆಗೆ ಕಿಂಡಿ ಅಣೆಕಟ್ಟು ಭರ್ತಿಯಾಗಿ ನದಿ ಬಳಿ ಇರುವ ಮನೆಗಳ ಸಮೀಪ ನೀರು ನುಗ್ಗಿದೆ. ಬೃಹದಾಕಾರದ ಮರವೊಂದು ನದಿಗೆ ಬಿದ್ದಿದೆ. ಮಂಗಳವಾರ ಹಲಗೆ ತೆರವುಗೊಳಿಸಿ ನೀರು ಹೊರಬಿಡಲಾಯಿತು.

ಮೇ ತಿಂಗಳಲ್ಲಿ ಬರಿದಾಗುವ ನೇತ್ರಾವತಿ ಈ ಬಾರಿ ಒಂದೇ ಮಳೆಗೆ ನೀರು ಏರಿಕೆಯಾಗಿದೆ. ಇದರ ಉಪನದಿಗಳ, ಸಂಪರ್ಕ ಹಳ್ಳಗಳ ಕಿಂಡಿ ಅಣೆಕಟ್ಟುಗಳ ಹಲಗೆ ತೆರವು ಕೂಡ ಹರಿವು ಹೆಚ್ಚಳಕ್ಕೆ ಕಾರಣವಾಗಿದೆ.

ಇಂದಬೆಟ್ಟಿ ಗ್ರಾಮದ ಫಯಾಜ್‌ ಅವರ ಮನೆಗೆ ಸೋಮವಾರ ರಾತ್ರಿ ಸಿಡಿಲು ಬಡಿದ ಪರಿಣಾಮ ವಿದ್ಯುತ್‌ ಸಂಪರ್ಕ ಸಹಿತ ಮೀಟರ್‌ ಬೋರ್ಡ್‌ಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next