Advertisement

ಬಿಜೆಪಿ ಸರ್ಕಾರ ರಚನೆಗೆ ವಿರೋಧ

12:00 PM May 19, 2018 | |

ವಿಜಯಪುರ: ಬಿಜೆಪಿಗೆ ಬಹುಮತವಿಲ್ಲದಿದ್ದರೂ ಸರ್ಕಾರ ರಚನೆಗೆ ಅವಕಾಶ ನೀಡಿರುವ ರಾಜ್ಯಪಾಲರ ಕ್ರಮ ವಿರೋಧಿಸಿ ನಗರದಲ್ಲಿ ಎಸ್‌ಯುಸಿಐ ಕಮ್ಯುನಿಷ್ಟ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಶುಕ್ರವಾರ ನಗರದ ಮಹಾತ್ಮ ಗಾಂಧೀಜಿ ವೃತ್ತದ ಬಳಿ ಸಭೆ ಸೇರಿದ ಪಕ್ಷದ ಕಾರ್ಯಕರ್ತರು, ಬಹುಮತವಿಲ್ಲದ ಪಕ್ಷಕ್ಕೆ ಸರಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಿದ್ದಾರೆ.

ಸಂವಿಧಾನಾತ್ಮಕವಾಗಿ ಇದು ಸಮ್ಮತವಲ್ಲದ ಕ್ರಮ. ಮತ್ತೂಂದೆಡೆ ಬಿಜೆಪಿ ಕೂಡ ತನಗೆ ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಹಿಂಬಾಗಿಲಿನಿಂದ ಅಧಿಕಾರಕ್ಕೇರಲು ಹುನ್ನಾರ ನಡೆಸಿದೆ. ಕೇಂದ್ರದ ಬಿಜೆಪಿ ನಾಯಕರ ಅಧಿಕಾರ ದಾಹದ ಸಂಚಿನಿಂದ ರಾಜ್ಯಪಾಲರು ಅಲ್ಪಮತದ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿದ್ದಾರೆ ಎಂದು ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಾರ್ಯದರ್ಶಿ ಭಗವಾನರೆಡ್ಡಿ ಮಾತನಾಡಿ, ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಯಾವ ಪಕ್ಷಕ್ಕೂ ಸರ್ಕಾರ ರಚಿಸುವಷ್ಟು ಅಗತ್ಯವಾದ ಸ್ಪಷ್ಟ ಬಹುಮತ ನೀಡದ ಕಾರಣ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಮೈತ್ರಿ ಪಕ್ಷಗಳ ಬಹುಮತದ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಬೇಕು. ಇದು ಸಂವಿದಾನಾತ್ಮಕ ಕ್ರಮ. ಆದರೆ ರಾಜ್ಯಪಾಲರು ಯಡಿಯೂರಪ್ಪ ಅವರನ್ನು ಸರಕಾರ ರಚಿಸಲು ಆಹ್ವಾನಿಸಿದ್ದು ಖಂಡನಾರ್ಹ ಎಂದರು.

ತರಾತುರಿಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಧಿಕಾರ ಪ್ರಮಾಣ ವಚನ ಸ್ವೀಕರಿಸಿ ಯಾವುದೇ ಶಾಸಕರ ಪ್ರಮಾಣ ವಚನವಿಲ್ಲದೇ ಹಾಗೂ ಸಚಿವ ಸಂಪುಟ ರಚಿಸದೇ ಅಧಿಕಾರಿಗಳೊಂದಿಗೆ ಚರ್ಚಿಸದೇ ಕೆಲವೇ ಘಂಟೆಗಳಲ್ಲಿ ರಾಜ್ಯದ ರೈತರ ಅನುಕಂಪ ಪಡೆಯಲು ರೈತರ ಸಾಲ ಮನ್ನಾ ಕಡತಕ್ಕೆ ಸಹಿ ಹಾಕಿದರು.

Advertisement

ಅಷ್ಟೆ ಅಲ್ಲದೇ ರಾಜ್ಯ ಕೆಲ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿ ಸಂವಿಧಾನ ವಿರೋಧಿ ಆಡಳಿತ ನಡೆಸುತ್ತಿದ್ದಾರೆ.ಇದರ ಹಿಂದೆ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನಾಯಕರು ಈ ರೀತಿ ಪ್ರಜಾತಂತ್ರ ಮೌಲ್ಯ ಗಾಳಿಗೆ ತೂರಿ ಕರ್ನಾಟಕ ರಾಜ್ಯದ ಘನತೆಯನ್ನು ಇಡಿ ದೇಶದಾದ್ಯಂತಹ ಹಾಳು ಮಾಡಲು ಕಾರಣರಾಗಿದ್ದಾರೆ.

ದೇಶದ ಪ್ರಧಾನಿಗಳೂ ರಾಷ್ಟ್ರದ ಹಾಗೂ ಸಂವಿಧಾನದ ಮೌಲ್ಯ ಘನತೆ ಎತ್ತಿ ಹಿಡಿಯುವುದು ಬಿಟ್ಟು ಕರ್ನಾಟಕದಲ್ಲಿಯೂ ಕೇಸರಿಕರಣ ಮಾಡಲು ಹಿಂಬಾಗಿಲಿನ ಮೂಲಕ ಪ್ರವೇಶಿಸಿ ಅಧಿಕಾರವನ್ನು ವಶಕ್ಕೆ ಮಾಡಿಕೊಳ್ಳಲೆತ್ನಿಸುತ್ತಿರುವ ತಮ್ಮ ಫ್ಯಾಸಿವಾದಿ ಧೋರಣೆ ಕೈಬಿಡಬೇಕೆಂದು ಒತ್ತಾಯಿಸಿದರು.

ಗೋವಾ, ಮಣಿಪುರದಂತಹ ರಾಜ್ಯಗಳಲ್ಲಿ ಮಾಡಿದಂತೆ, ಬಿಜೆಪಿಯು ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕಾಗಿ, ಕುದುರೆ ವ್ಯಾಪಾರ, ಆಪರೇಷನ್‌ ಕಮಲದಂತಹ ಕೊಳಕು ರಾಜಕೀಯ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌-ಜೆಡಿಎಸ್‌ ಜಂಟಿಯಾಗಿ ಸರ್ಕಾರ ರಚಿಸಲು ಮುಂದೆ ಬಂದಿದ್ದು ಅವಶ್ಯಕ ಸಂಖ್ಯೆ ಹೊಂದಿದ್ದರೂ ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯಪಾಲರ ಕಚೇರಿ ದುರುಪಯೋಗ ಮಾಡಿಕೊಂಡಿರುವುದು ರಾಜ್ಯದ ಪ್ರಜ್ಞಾವಂತ ನಾಗರಿಕರಲ್ಲಿ ಆಕ್ರೋಶವನ್ನುಂಟು ಮಾಡಿದೆ. ರಾಜ್ಯಪಾಲರು ಕೇಂದ್ರದ ಮೋದಿ ಸರ್ಕಾರದ ಅಣತಿ ಮೇರೆಗೆ ಹೇಗಾದರೂ ಬಿಜೆಪಿಯನ್ನು ಅಧಿಕಾರಕ್ಕೇರಿಸಲು ಎಲ್ಲ ಪ್ರಜಾತಾಂತ್ರಿಕ ರೂಢಿಗಳನ್ನು, ಆಚರಣೆಗಳನ್ನು ಮತ್ತು ನ್ಯಾಯಾಂಗೀಯ ತೀರ್ಪುಗಳನ್ನು ಸಹ ಉಲ್ಲಂಘಿಸುವ ಮೂಲಕ ಬಹುಮತ ಪಡೆಯಲು ಕುದುರೆ ವ್ಯಾಪಾರಕ್ಕೆ ರೆಸಾರ್ಟ್‌ ರಾಜಕಾರಣಕ್ಕೆ ವ್ಯಾಪಕ ಅವಕಾಶ ನೀಡಿದ್ದಾರೆ. ಇಂದು ಸರ್ವೋತ್ಛ ನ್ಯಾಯಾಲಯವು ಕರ್ನಾಟಕದಲ್ಲಿ ಸರಳ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲು ಸಮರ್ಥವಾಗಿರುವ ಪಕ್ಷಗಳು ಮುಂದೆ ಬರಬೇಕೆಂದು ಹೇಳಿರುವುದು ಸ್ವಾಗತಾರ್ಹವಾಗಿದೆ ಎಂದರು.

ಭರತ್‌ಕುಮಾರ ಎಚ್‌.ಟಿ., ಸಿದ್ದಲಿಂಗ ಬಾಗೇವಾಡಿ ಮಾತನಾಡಿದರು. ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಹೆಚ್‌.ಟಿ., ಸುನೀಲ ಸಿದ್ರಾಮಶೆಟ್ಟಿ, ಶಿವಬಾಳಮ್ಮ ಕೊಂಡಗೂಳಿ, ಪಿರ್‌ ಜಮಾದಾರ, ಶೊಭಾ ಯರಗಿದ್ರಿ, ದುಂಡೇಶ, ಜ್ಯೋತಿ ರೋಣಿಹಾಳ, ಲಾಲಸಾಬ ಜಾತಗಾರ, ರಾಮಸ್ವಾಮಿ ಮಣ್ಣುರ, ರವಿ ಬಿಜಾಪುರ ಶಿವಾನಂದ ಸಿಂದಗಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next