Advertisement

ಮೀಸಲು ಮೇಲ್ಮನೆ ಮೊಹರು

12:30 AM Jan 10, 2019 | |

ಹೊಸದಿಲ್ಲಿ: ಮಂಗಳವಾರವಷ್ಟೇ ಲೋಕಸಭೆಯಲ್ಲಿ ಅನುಮೋದನೆಗೊಂಡಿದ್ದ ಆರ್ಥಿಕವಾಗಿ ಹಿಂದುಳಿದಿರುವ ಜನರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಮಸೂದೆಗೆ ರಾಜ್ಯಸಭೆಯೂ ಸುದೀರ್ಘ‌ ಚರ್ಚೆ ಬಳಿಕ ಒಪ್ಪಿಗೆ ನೀಡಿದೆ. ಮಸೂದೆ ಪರವಾಗಿ 165 ಮತಗಳು ಬಿದ್ದರೆ, ವಿರೋಧಿಸಿ ಕೇವಲ 7 ಮತಗಳು ಚಲಾವಣೆಗೊಂಡವು. ಈ ಮೂಲಕ ಆಡಳಿತ ಮತ್ತು ವಿಪಕ್ಷಗಳು ಸೇರಿ ಮಹತ್ವದ ಸಾಂವಿಧಾನಿಕ ತಿದ್ದುಪಡಿ(124ನೇ)  ಮಸೂದೆಗೆ ಒಪ್ಪಿಗೆ ನೀಡಿದವು.

Advertisement

ಮಂಗಳವಾರ ಲೋಕಸಭೆಯಲ್ಲಿ ನಾಲ್ಕೂವರೆ ಗಂಟೆಗಳ ಬಿಸಿ ಚರ್ಚೆಯ ಬಳಿಕ ಅನುಮೋದನೆ ಗೊಂಡಿದ್ದ ಶೇ. 10ರ ಮೀಸಲಾತಿ ಮಸೂದೆ, ರಾಜ್ಯಸಭೆ ಯಲ್ಲಿ ಬುಧವಾರ ಮಂಡನೆಯಾದಾಗ ವಿರೋಧ ಪಕ್ಷಗಳ ತೀವ್ರ ವಿರೋಧ ಎದುರಿಸಿತು. ಲೋಕಸಭೆಯಲ್ಲಿ ಮಸೂದೆಗೆ ಒಪ್ಪಿಗೆ ನೀಡಿದ್ದ ವಿಪಕ್ಷಗಳು ರಾಜ್ಯಸಭೆಯಲ್ಲಿ ಮಸೂದೆಯ ಮಂಡನೆ “ಸಮಯ’ದ ಬಗ್ಗೆ ವಿರುದ್ಧ ತಿರುಗಿಬಿದ್ದದ್ದು ಅಚ್ಚರಿಯ ನಡೆಯಾಗಿತ್ತು. ಅಲ್ಲದೆ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂಬ ವಿಪಕ್ಷಗಳ ಬೇಡಿಕೆಯನ್ನು ಸದನವೇ ತಿರಸ್ಕರಿಸಿತು.

ಬಹುತೇಕ ಪಕ್ಷಗಳು ಇದು ಲೋಕಸಭೆ ಚುನಾವಣೆಗಾಗಿ ಮಂಡಿಸಿದ್ದು ಎಂದು ಆಕ್ಷೇಪ ವ್ಯಕ್ತ ಪಡಿಸಿ ದವು. ಅಲ್ಲದೆ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ಮಾಡದೆ, ಆಗಿರುವ ವೈಫ‌ಲ್ಯವನ್ನು ಮುಚ್ಚಿಕೊಳ್ಳಲು ಈ ಮಸೂದೆ ಮಂಡಿಸಲಾಗಿದೆ ಎಂದು ವಿರೋಧ ಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಬಹುತೇಕ ಪಕ್ಷಗಳು ಮಸೂದೆಗೆ ಬೆಂಬಲ ವ್ಯಕ್ತಪಡಿಸಿದವು.

ಗದ್ದಲ, ಮುಂದೂಡಿಕೆ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಹಾಯಕ ಸಚಿವ ತಾವರ್‌ಚಂದ್‌ ಗೆಹೊಟ್‌ ಅವರು ಮಸೂದೆಯನ್ನು ಮಂಡಿಸಿದ ಕೂಡಲೇ ಪ್ರಮುಖ ವಿಪಕ್ಷಗಳಾದ ಕಾಂಗ್ರೆಸ್‌, ಡಿಎಂಕೆ, ಆರ್‌ಜೆಡಿ ಹಾಗೂ ಆಮ್‌ ಆದ್ಮಿ ಪಕ್ಷದ ಸಂಸದರು ಮಸೂದೆಗೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಮಸೂದೆ ತಯಾರಿಸಲಾಗಿದೆ ಹಾಗೂ ಯಾವುದೇ ಸೂಚನೆ ಯಿಲ್ಲದೆ ರಾಜ್ಯಸಭೆಯ ಕಲಾಪವನ್ನು ವಿಸ್ತರಿಸ ಲಾಗಿದೆ ಎಂದು ಆರೋಪಿಸಿದರು. ಸಭಾಪತಿಗಳ ಮುಂದಿರುವ ಬಾವಿಯಾಕಾರದ ವೃತ್ತದ ಬಳಿ ಸಾಗಿ ಹೋಗಿ ಮಸೂದೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಯಲ್ಲಿ ಉಪ ಸಭಾಧ್ಯಕ್ಷ ಹರಿವೀಶ್‌ ಅವರು ಕಲಾಪವನ್ನು ಅಪರಾಹ್ನ 2 ಗಂಟೆಗೆ ಮುಂದೂಡಿದರು.

ಗದ್ದಲ, ಟೀಕೆ, ಮಾತಿನ ಚಕಮಕಿ
ಅಪರಾಹ್ನ ಕಲಾಪ ಶುರುವಾದಾಗ, ಡಿಎಂಕೆ ಸಂಸದೆ ಕನ್ನಿಮೋಳಿ ಅವರು, ಮಸೂದೆಯನ್ನು ಸಂಸದೀಯ ಆಯ್ಕೆ ಸಮಿತಿಯ ಅವಗಾಹನೆಗೆ ಕಳುಹಿಸುವಂತೆ ಮನವಿ ಮಾಡಿದರು. ಇದಕ್ಕೆ ಡಿಎಂಕೆಯ ಇತರ ಸದಸ್ಯರು, ಸಿಪಿಐನ ಡಿ. ರಾಜಾ, ಕಾಂಗ್ರೆಸ್‌, ಆರ್‌ಜೆಡಿ  ಸಂಸದರು ಬೆಂಬಲ ಸೂಚಿಸಿ ಸರಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಘೋಷಣೆಗಳನ್ನು ಕೂಗಿದರು.

Advertisement

ಈ ಬಗ್ಗೆ ಕಲಾಪದಲ್ಲಿ ಚರ್ಚೆ ಮುಂದುವರಿದ ಬಳಿಕ ನಿರ್ಧರಿಸಲಾಗುವುದು ಎಂದು ಉಪ ಸಭಾಧ್ಯಕ್ಷರು ತಿಳಿಸಿದ ಮೇಲೆ ಚರ್ಚೆ ಮುಂದುವರಿಯಿತು. ಈ ವೇಳೆ ಗೆ‌ಹೊಟ್‌ ಅವರು, ಜನರಿಗೆ ಒಳಿತಾಗುವ ಉದ್ದೇಶದ ಈ ಮಸೂದೆಗೆ ಎಲ್ಲರೂ ಒಪ್ಪಿಗೆ ಸೂಚಿಸಬೇಕೆಂದು ಮನವಿ ಮಾಡಿದರೂ ಚರ್ಚೆ ಮುಂದುವರಿಯಿತು. ಈ ನಡುವೆ, ಕೇಂದ್ರ ಸಚಿವ ವಿಜಯ್‌ ಗೋಯೆಲ್‌ ಅವರು, ಮಸೂದೆಗೆ ವಿರೋಧ ಪಕ್ಷಗಳು ಅಡ್ಡಿಪಡಿಸುತ್ತಿವೆ ಎಂದು ಟೀಕಿಸಿದ್ದನ್ನು ಪ್ರತಿಪಕ್ಷಗಳ ನಾಯಕರು ತೀವ್ರವಾಗಿ ಖಂಡಿಸಿದ್ದು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು. 

ಕಾಂಗ್ರೆಸ್‌ ಕಟ್ಟಿಹಾಕಿದ ಘಟ”ಬಂಧನ’
ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷವು ಸಂಸದೀಯ ಆಯ್ಕೆ ಸಮಿತಿಯ ಅವಗಾಹನೆಗೆ ಮಸೂದೆ ಒಳಗಾಗಬೇಕೆಂಬ ವಾದವನ್ನು ಬೆಂಬಲಿಸಲಿಲ್ಲ. ಕಲಾಪದ ಆರಂಭದಲ್ಲಿ ಆಯ್ಕೆ ಸಮಿತಿಗೆ ಮಸೂದೆಯನ್ನು ಕಳುಹಿಸಬೇಕೆಂದು ಆಗ್ರಹಿಸಿ ಪ್ರತಿಭಟಿಸಿದ್ದ ಕಾಂಗ್ರೆಸ್‌, ಅನಂತರ ಕಾದು ನೋಡುವ ತಂತ್ರ ಅನುಸರಿಸಿತ್ತು. ಆದರೆ ಅಂತ್ಯದಲ್ಲಿ ವಿಪಕ್ಷಗಳಲ್ಲೇ ಆ ಬಗ್ಗೆ ಒಮ್ಮತ ಮೂಡದಿದ್ದ ಹಿನ್ನೆಲೆಯಲ್ಲಿ ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿತು.

ಖಾಸಗಿ ವಲಯದಲ್ಲೂ ಇರಲಿ
ಸರಕಾರದಲ್ಲಿ ಹಾಗೂ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗಗಳು ಕಡಿತಗೊಂಡಿವೆ. ಹಾಗಾಗಿ, ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೆ ಬರಲಿ ಎಂದು ಕಾಂಗ್ರೆಸ್‌ನ ಪಿ.ಎಲ್‌. ಪೂನಿಯಾ ಆಗ್ರಹಿಸಿದರು. ಈ ನಡುವೆ ಮಾತನಾಡಿದ ಆಪ್‌ ಸಂಸದ ಸಂಜಯ್‌ ಸಿಂಗ್‌, ಕೇಂದ್ರದ ನೋಟು ಅಪಮೌಲ್ಯ ಹಾಗೂ ಜಿಎಸ್‌ಟಿ ಈಗಾಗಲೇ ವಿಫ‌ಲಗೊಂಡಿವೆ. ಈಗ, ಮೀಸಲಾತಿ ಮಸೂದೆಯ ಮೂಲಕ ದೇಶದ ಜನರನ್ನು ಮೂರ್ಖರನ್ನಾಗಿಸಲು ಕೇಂದ್ರ ಹೊರಟಿದೆ. ಈ ನಡೆಯ ಹಿಂದೆ ಆರ್‌ಎಸ್‌ಎಸ್‌ ಕೈವಾಡವಿದೆ ಎಂದು ಟೀಕಿಸಿದ್ದು ಸದನದಲ್ಲಿ ಕೆಲ ಹೊತ್ತು ಗದ್ದಲಕ್ಕೆ ಕಾರಣವಾಯಿತು.

ಬಿಜೆಪಿಯ ಜಿವಿಎಲ್‌ ನರಸಿಂಹ ರಾವ್‌ ಮಾತನಾಡಿ, ಹಿಂದಿನ ಸರಕಾರಗಳು “ಗರೀಬಿ ಹಠಾವೊ’ (ಬಡತನ ತೊಲಗಿಸಿ) ಎಂಬ ಘೋಷಣೆ ಮಾಡಿದ್ದವು. ಆದರೆ, ಅವುಗಳಿಂದ ಬಡತನ ಹೊಡೆ ದೋಡಿಸುವುದು ಸಾಧ್ಯವಾಗಲಿಲ್ಲ. ಈಗ ಮೋದಿ ಯವರಿಂದ ಅದು ಸಾಧ್ಯವಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next