ಮುಂಬಯಿ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿರೋಧ ಪಕ್ಷಗಳು ರಚಿಸಿಕೊಳ್ಳಲಿರುವ ಮಹಾ ಘಟಬಂಧನ ಕೇವಲ ಒಂದು ಭ್ರಮೆ; 2019ರ ಮಹಾ ಚುನಾವಣೆಯನ್ನು ಬಿಜೆಪಿ ಗೆದ್ದು ಅಧಿಕಾರಕ್ಕೆ ಮರಳುವುದು ನಿಶ್ಚಿತ ಎಂಬ ವಿಶ್ವಾಸವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವ್ಯಕ್ತಪಡಿಸಿದರು.
ಇಲ್ಲಿ ನಡೆದ ರಿಪಬ್ಲಿಕ್ ಸಮಿಟ್ ನಲ್ಲಿ ಮಾತನಾಡುತ್ತಿದ್ದ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಅದರ ಮಿತ್ರ ಪಕ್ಷ ಶಿವ ಸೇನೆ ಇರುತ್ತದೆ. ಅವರೊಂದಿಗಿನ ಮಾತುಕತೆ ಈಗ ಪ್ರಗತಿಯಲ್ಲಿದೆ ಎಂದು ಹೇಳಿದರು.
ವಿರೋಧ ಪಕ್ಷಗಳ ಮಹಾ ಘಟಬಂಧನದ ನಾಯಕರೆಲ್ಲ ಪ್ರಾದೇಶಿಕ ನಾಯಕರು; ಅವರು ಪರಸ್ಪರರಿಗೆ ಸಹಾಯ ಮಾಡಲಾರರು. 2019ರಲ್ಲಿ ಬಿಜೆಪಿಯು ಪಶ್ಚಿಮ ಬಂಗಾಲ, ಈಶಾನ್ಯ ಮತ್ತು ಒಡಿಶಾ ಗೆಲ್ಲುವುದು ಖಚಿತ ಎದು ಶಾ ಹೇಳಿದರು.
ಈ ಐದು ವರ್ಷಗಳ ಆಡಳಿತಾವಧಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ, ರಾಷ್ಟ್ರೀಯ ಭದ್ರತೆಯನ್ನು ಸಾಧಿಸಿದೆ; ಭ್ರಷ್ಟಾಚಾರಕ್ಕೆ ಅಂಕುಶ ಹಾಕಿದೆ; ಎಂಟು ಕೋಟಿ ಮನೆಗಳಿಗೆ ಶೌಚಾಲಯ ನಿರ್ಮಿಸಿದೆ ಮತ್ತು 2.5 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ ಎಂದು ಅಮಿತ್ ಶಾ ಹೇಳಿದರು.
ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢದ ಈಚಿನ ಚುನಾವಣೆ ಫಲಿತಾಂಶಗಳು ಬಿಜೆಪಿಗೆ ಅನುಕೂಲಕರವಾಗಿಲ್ಲ. ಹಾಗಿದ್ದರೂ 2019ರ ಲೋಕಸಭಾ ಚುನಾವಣೆ ವಿಭಿನ್ನವಾಗಿರುತ್ತದೆ ಎಂದು ಶಾ ಹೇಳಿದರು.