Advertisement

ಬರ್ಲಿನ್‌ ಕನ್ನಡ ಶಾಲೆ ಉದ್ಘಾಟನೆ

07:47 PM May 05, 2021 | Team Udayavani |

ಕನ್ನಡವನ್ನು ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಕಾಣಿಸುವ ಮತ್ತು ಕೇಳಿಸುವ ಹಾಗೆ ಬೋಧನೆ ಮಾಡಿ. ನಿಮ್ಮ ಜತೆ ನಾವಿದ್ದೇವೆ ಎಂದು ಭರವಸೆ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಅವರು ಬರ್ಲಿನ್‌ ಕನ್ನಡ ಶಾಲೆಯನ್ನು ಎ. 18ರಂದು ವರ್ಚುವಲ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು.”ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಎಂಬ ಧ್ಯೇಯದೊಂದಿಗೆ ಬರ್ಲಿನ್‌ನಲ್ಲಿ ಕನ್ನಡ ಶಾಲೆಯು ಇಲ್ಲಿನ ಕನ್ನಡ ಬಳಗದ ನೇತೃತ್ವದಲ್ಲಿ ರಚನೆಯಾಗಿದೆ.

Advertisement

ನೋಂದಾಯಿತ ಸಂಘವಾಗಿರುವ ಬರ್ಲಿನ್‌ ನಗರ ಮತ್ತು ಸುತ್ತಮುತ್ತಲಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿ ನಮ್ಮ ನಾಡಿನ ಸಾಂಸ್ಕೃತಿಕ ಮತ್ತು ಸಮಾಜಮುಖೀ ಕಾರ್ಯಕ್ರಮಗಳನ್ನು ಮಾಡುವ ಸಂಕಲ್ಪ ಹೊಂದಿದ್ದು, ಇಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಮಾತೃಭಾಷೆಯನ್ನು ಕಲಿಸಿ ಮುಂದಿನ ತಲೆಮಾರಿಗೆ ಕನ್ನಡವನ್ನು ತಲುಪಿಸುವ ಗುರಿಯೊಂದಿಗೆ ಕನ್ನಡ ಶಾಲೆಯನ್ನು ಪ್ರಾರಂಭಿಸಿದೆ. ಡಾ| ಕೆ. ಮುರಳೀಧರ್‌ ಅವರು ಶುಭಹಾರೈಸಿ, ಕನ್ನಡವನ್ನು ಹೇಗೆ ಮುಂದಿನ ಹಂತಕ್ಕೆ ತಲುಪಿಸಬಹುದು ಎಂಬ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕನ್ನಡ ಅಕಾಡೆಮಿಯ ಶಿವ ಗೌಡರ್‌ ಮತ್ತು ಅರುಣ್‌ ಸಂಪತ್‌ ಅವರು ಕನ್ನಡ ಅಕಾಡೆಮಿ ಕುರಿತು ಮಾಹಿತಿ ನೀಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷರು, ಕಾರ್ಯಕಾರಿ ತಂಡ, ಸದಸ್ಯರೊಂದಿಗೆ ಶಿಕ್ಷಕ ವೃಂದ, ಪೋಷಕರು ಹಾಜರಿದ್ದರು. ಎಲ್ಲರೂ ಬರ್ಲಿನ್‌ ಕನ್ನಡ ಶಾಲೆಯ ಯಶಸ್ಸಿಗಾಗಿ ಶುಭಹಾರೈಸಿದರು.ಕನ್ನಡೇತರರಿಗೂ ಅವಕಾಶಬರ್ಲಿನ್‌ ಕನ್ನಡ ಶಾಲೆಯು ಕನ್ನಡವನ್ನು ಮಕ್ಕಳಿಗೆ ಓದಲು, ಬರೆಯಲು, ಮಾತನಾಡಲು ಕಲಿಸುವುದರ ಜತೆಗೆ ಮಕ್ಕಳಿಗೆ ನಮ್ಮ ನಾಡು, ಜನ, ಜೀವನ ಶೈಲಿ, ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದೆ.

ಕನ್ನಡಿಗರಷ್ಟೇ ಅಲ್ಲದೇ ಕನ್ನಡೇತರರಿಗೂ ಬರ್ಲಿನ್‌ ಕನ್ನಡ ಶಾಲೆಯಲ್ಲಿ ಕನ್ನಡವನ್ನು ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ವೈಜ್ಞಾನಿಕ ಮತ್ತು ಶ್ರೀಮಂತ ಭಾಷೆಯಾದ ಕನ್ನಡವನ್ನು ವಿಶ್ವದಾದ್ಯಂತ ಪಸರಿಸುವ ಗುರಿಯನ್ನು ಹೊಂದಿದ್ದೇವೆ .ಬರ್ಲಿನ್‌ ಕನ್ನಡ ಶಾಲೆಯಲ್ಲಿ ಸದ್ಯ ಇಬ್ಬರು ಸ್ವಯಂಸೇವಕ ಶಿಕ್ಷಕಿಯರಿಂದ ಕನ್ನಡ ಅಕಾಡೆಮಿಯ ಹೊರದೇಶದಲ್ಲಿರುವ ಕನ್ನಡ ಮಕ್ಕಳಿಗಾಗಿಯೇ ರಚಿಸಿರುವ ಕನ್ನಡ ಪಠ್ಯಕ್ರಮವನ್ನು ಅಳವಡಿಸಿಕೊಂಡು ಬೋಧನೆಯನ್ನು ಮಾಡಲಾಗುತ್ತಿದೆ.

ಪ್ರತಿ ರವಿವಾರ ತರಗತಿಗಳು ನಡೆಯಲಿದ್ದು, ಈಗಾಗಲೇ 11 ಕನ್ನಡ ಮಕ್ಕಳು ಮತ್ತು ಮೂರು ಮಂದಿ ಪ್ರೌಢ ಜರ್ಮನರು ನೋಂದಾಯಿತರಾಗಿ ಅತ್ಯಂತ ಉತ್ಸಾಹದಿಂದ ಕನ್ನಡ ಕಲಿಯುತ್ತಿದ್ದಾರೆ. ತರಗತಿಗಳನ್ನು ವಯಸ್ಸಿನ ಆಧಾರದ ಮೇಲೆ ವಿಭಾಗಿಸಲಾಗಿದೆ. ಪ್ರತಿ ತರಗತಿಯು ಒಂದು ಗಂಟೆ ಅವಧಿಗೆ ಸೀಮಿತವಾಗಿದ್ದು, ಪ್ರಾರ್ಥನೆಯೊಂದಿಗೆ ಆರಂಭವಾಗಿ ಕಲಿತ ಪದಗಳ ಪುನರ್ಮನನ ಹೊಸಪದಗಳ ಕಲಿಕೆ ಮತ್ತು ಕಲಿತ ಹೊಸಪದಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಪರಿಯನ್ನು ಹಲವಾರು ಚಟುವಟಿಕೆಗಳ ಮೂಲಕ ಹೇಳಿಕೊಡಲಾಗುತ್ತದೆ.

Advertisement

 ಡಾ| ಬೋಪಣ್ಣ ಮೊಣ್ಣಂಡ,ಕಾರ್ಯದರ್ಶಿ, ಬರ್ಲಿನ್‌ ಕನ್ನಡ ಬಳಗ

Advertisement

Udayavani is now on Telegram. Click here to join our channel and stay updated with the latest news.

Next