Advertisement

ಒಂದು ತುತ್ತಿನ ಕತೆ

02:54 AM Feb 02, 2019 | Team Udayavani |

ಮಗಳ ಸ್ಕೂಲ್‌ ಬಸ್‌ ಏಳೂವರೆಗೇ ಗೇಟಿನೆದುರು ಹಾಜರ್‌. ಅಷ್ಟರೊಳಗೆ ಅಡುಗೆ ಮುಗಿಸಿ, ಅವಳನ್ನು ಎಬ್ಬಿಸಿ, ರೆಡಿ ಮಾಡಿ, ಹಠ ಮಾಡುವವಳನ್ನು ಹಿಡಿದು ಬಾಯಿಗೊಂದಷ್ಟು ತುರುಕಿ, ಡಬ್ಬಿ ರೆಡಿಮಾಡಿ ಕಳಿಸಬೇಕು. ಗಂಡನಿಗೂ ಎಂಟು ಗಂಟೆಗೇ ಆಫೀಸು. ಕೆಲವೊಮ್ಮೆ ಗಡಿಬಿಡಿಯಲ್ಲಿ ಅಡುಗೆಯ ಹದ ತಪ್ಪುತ್ತದೆ. ಮನೆಯವರಿಗೆ ಇಷ್ಟವಾದ ಅಡುಗೆ ಮಾಡಲು ಸಾಧ್ಯವಾಗುವುದಿಲ್ಲ. ಅದೇ ಬೇಸರದಲ್ಲಿ ಬೆಳಗ್ಗಿನ ತಿಂಡಿ ಮುಗಿಸಿ, ಮೊಬೈಲ್‌ ತೆಗೆದು ನೋಡಿದರೆ ‘ವೆಜ್‌ ಥಾಲಿ ಕಳಿಸಿ’ ಎಂಬ ಮೆಸೇಜು. ಬೆಳಗ್ಗೆ ಗಂಡನ ಡಬ್ಬಿಗೆ ಉಪ್ಪಿಟ್ಟು ತುಂಬಿದ್ದನ್ನೇ ನೆನೆಯುತ್ತಾ ಆಕೆ ಮತ್ತೆ ಅಡುಗೆ ಮನೆ ತಲುಪುತ್ತಾಳೆ. ಸ್ಟೌ ಹಚ್ಚಿ, ಶ್ರದ್ಧೆಯಿಂದ ಅಡುಗೆ ಮಾಡಿ, ಅಷ್ಟೇ ಪ್ರೀತಿಯಿಂದ ಬುತ್ತಿ ರೆಡಿ ಮಾಡುತ್ತಾಳೆ. ಆ ಬುತ್ತಿಯನ್ನು ಸವಿಯುವವರು ಅವಳ ಗಂಡನಲ್ಲ; ಮಗಳೂ ಅಲ್ಲ! ಆ ಊಟದ ಬಾಕ್ಸ್‌, ಈ ಮಾಯಾನಗರಿಯ ಅದೆಲ್ಲೋ ಇರುವ ಟೆಕ್‌ಪಾರ್ಕ್‌ನೊಳಗಿನ ಬ್ಯಾಚುಲರ್‌ ಹುಡುಗನ ಕೈ ಸೇರುತ್ತೆ. ಮೊದಲ ತುತ್ತು ಬಾಯಿಗಿಟ್ಟಾಗ ಎದೆಯಲ್ಲಿ ಅಮ್ಮನದ್ದೇ ನೆನಪು. ‘ಥೇಟ್ ನಮ್ಮಮ್ಮಂದೇ ಕೈ ರುಚಿ’ ಅಂತ ಬೆರಳು ಚೀಪುತ್ತಾ ಆತ ಅಮ್ಮನ ನೆನಪಿಗೆ ಜಾರುತ್ತಾನೆ.

Advertisement

ಹೀಗೆ, ಮಹಾನಗರಿಯ ಯಾವುದೋ ಮನೆಯಲ್ಲಿ ತಯಾರಾದ ಊಟವನ್ನು, ಇನ್ನ್ಯಾರಿಗೋ ತಲುಪಿಸುವ ಕೆಲಸ ಮಾಡುತ್ತಿರುವುದು ‘ಊಟ ಬಾಕ್ಸ್‌’ ಸರ್ವಿಸಸ್‌. ಆ ಮೂಲಕ ಗೃಹಿಣಿಯರಿಗೆ ಉದ್ಯೋಗವನ್ನೂ, ಗ್ರಾಹಕರಿಗೆ ಮನೆಯೂಟದ ಸವಿಯನ್ನೂ ಒದಗಿಸುತ್ತದೆ ‘ಊಟ ಬಾಕ್ಸ್‌’

ಊಟ ಬಾಕ್ಸ್‌’ ಯಾರದ್ದು?

‘ಊಟ ಬಾಕ್ಸ್‌’ ಹೆಸರಿನ, ಆನ್‌ಲೈನ್‌ ಫ‌ುಡ್‌ ಡೆಲಿವರಿ ಕಂಪನಿಯನ್ನು ಶುರುಮಾಡಿದ್ದು, ಬೆಂಗಳೂರಿನ ಶ್ರೀಕಾಂತ್‌ ಬಾಲಕುಮಾರ್‌ ಮತ್ತು ಗೆಳೆಯ ಕುಶಾಲ್‌ ಕುಮಾರ್‌. ಇವರು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಎಷ್ಟೋ ಜನರು ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಹೋಟೆಲ್‌ ಊಟ ಮಾಡುತ್ತಿದ್ದುದನ್ನು ನೋಡಿ, ಮನೆಯೂಟವನ್ನು ಎಲ್ಲರಿಗೂ ತಲುಪಿಸಬೇಕು ಎಂಬ ಯೋಚನೆ ಇವರಲ್ಲಿ ಮೂಡಿತು. ಗೃಹಿಣಿಯರ ಜೊತೆಗೂಡಿ ಈ ಕೆಲಸ ಮಾಡಬಹುದು ಅನ್ನಿಸಿತು. ಯಾಕೆಂದರೆ, ಅದೆಷ್ಟೋ ಗೃಹಿಣಿಯರು ಮನೆಯಿಂದ ಮಾಡಬಹುದಾದ ಕೆಲಸದ ಹುಡುಕಾಟದಲ್ಲಿರುತ್ತಾರೆ. ಅಂಥವರನ್ನು ಬಳಸಿಕೊಂಡು, ಅವರ ಅಡುಗೆಯನ್ನು ಗ್ರಾಹಕರಿಗೆ ತಲುಪಿಸುವ ಉದ್ದಿಮೆ ಶುರುಮಾಡಿದರೆ ಹೇಗೆಂಬ ಯೋಚನೆ, 2017ರಲ್ಲಿ ‘ಊಟ ಬಾಕ್ಸ್‌’ನ ರೂಪ ಪಡೆಯಿತು. ಈಗಾಗಲೇ ಸುಮಾರು 3 ಸಾವಿರ ಗೃಹಿಣಿಯರು, ‘ಊಟ ಬಾಕ್ಸ್‌’ನಲ್ಲಿ ಬಾಣಸಿಗರಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 300-400 ಮಹಿಳೆಯರು ನಿತ್ಯವೂ ಸಕ್ರಿಯರಾಗಿ ಕೆಲಸ ಮಾಡುತ್ತಾರೆ. ಇವರು ಮಾಡುವ ಅಡುಗೆಯನ್ನು ಗ್ರಾಹಕರಿಗೆ ತಲುಪಿಸುವುದಷ್ಟೇ ‘ಊಟ ಬಾಕ್ಸ್‌’ನ ಕೆಲಸ.

ಹೇಗೆ ನಡೆಯುತ್ತೆ?
ಹೆಸರು ನೋಂದಾಯಿಸುವಾಗ, ಗೃಹಿಣಿಯರು ತಾವು ವಾಸಿಸುವ ಏರಿಯಾ ಮತ್ತು ಯಾವ ಅಡುಗೆಯಲ್ಲಿ ಪರಿಣತಿ ಇದೆ ಎಂದು ನಮೂದಿಸಬೇಕು. ಊಟ ಬಾಕ್ಸ್‌ ಆ್ಯಪ್‌ ಮೂಲಕ ಆರ್ಡರ್‌ ಮಾಡುವಾಗ ಗ್ರಾಹಕನಿಗೆ, 3 ಕಿ.ಮೀ. ವ್ಯಾಪ್ತಿಯಲ್ಲಿ ಹೆಸರು ನೋಂದಾಯಿಸಿರುವ ಎಲ್ಲ ಬಾಣಸಿಗರ ಹೆಸರು ಮತ್ತು ಅವರು ಯಾವ್ಯಾವ ಖಾದ್ಯಗಳನ್ನು ಮಾಡುತ್ತಾರೆ ಎಂಬ ಮಾಹಿತಿ ಸಿಗುತ್ತದೆ. ಆತ ಅವುಗಳಲ್ಲೊಂದನ್ನು ಆಯ್ಕೆ ಮಾಡಿ, ಆರ್ಡರ್‌ ಮಾಡಬಹುದು. ಆತನಿಗೆ ಬೇಕಾದ ಪದಾರ್ಥ ಲಿಸ್ಟ್‌ನಲ್ಲಿ ಇಲ್ಲದಿದ್ದರೆ, ತನಗೆ ಬೇಕಾದ್ದನ್ನು ತಯಾರಿಸುವಂತೆ ಮನವಿ ಮಾಡಬಹುದು. ಆತ ಕಳುಹಿಸಿದ ಮನವಿ ಹತ್ತಿರದ ಎಲ್ಲ ಬಾಣಸಿಗರನ್ನು ತಲುಪುತ್ತದೆ. ಅವರಲ್ಲಿ ಯಾರಾದರೊಬ್ಬರು ಆ ಅಡುಗೆ ಮಾಡಿ, ಗ್ರಾಹಕನಿಗೆ ತಲುಪಿಸುತ್ತಾರೆ. ರುಚಿ ಹೇಗಿರ ಬೇಕೆಂದು ಕೂಡ ಗ್ರಾಹಕ ಸೂಚನೆ ನೀಡಬಹುದು. ಹಿಂದಿನ ಗ್ರಾಹಕರು ಎಲ್ಲ ಬಾಣಸಿಗರಿಗೂ ರೇಟಿಂಗ್‌ ಕೊಟ್ಟಿರುತ್ತಾರೆ. ಅದನ್ನು ನೋಡಿ, ನಿಮ್ಮಿಷ್ಟದ ಬಾಣಸಿಗರನ್ನು ಆಯ್ಕೆ ಮಾಡಿಕೊಳ್ಳಬಹುದು.

Advertisement

ಫ‌ಟಾಫ‌ಟ್‌ ಸಿಗೋದಿಲ್ಲ…
ಝೊಮ್ಯಾಟೊ, ಸ್ವಿಗಿ ಮುಂತಾದ ಆನ್‌ಲೈನ್‌ ಸರ್ವಿಸ್‌ ಗಳಂತೆ ಇಲ್ಲಿ, ಆರ್ಡರ್‌ ಮಾಡಿದ ಅರ್ಧ ಗಂಟೆಗೆ, ಮನೆ ಬಾಗಿಲಿಗೆ ಊಟ ಬರುವುದಿಲ್ಲ. ಯಾಕಂದ್ರೆ, ಊಟ ಬರೋದು ಹೋಟೆಲ್‌ನಿಂದ ಅಲ್ಲವಲ್ಲ! “ಊಟ ಬಾಕ್ಸ್‌’ ನಲ್ಲಿ ನೀವು ಕನಿಷ್ಠ ನಾಲ್ಕು ಗಂಟೆ ಮುಂಚಿತವಾಗಿ ಆರ್ಡರ್‌ ಮಾಡಬೇಕು. ಇಲ್ಲದಿದ್ದರೆ ಆಹಾರ ತಲುಪಿಸುವುದು ಕಷ್ಟವಾಗುತ್ತದೆ. ಹುಟ್ಟಿದ ಹಬ್ಬ, ಸಣ್ಣ ಪಾರ್ಟಿ, ಆμàಸ್‌ ಕಾರ್ಯಕ್ರಮಗಳಿಗೂ ಆಹಾರ ತಲುಪಿಸುವ ವ್ಯವಸ್ಥೆ ಇದೆ. ಆದರೆ, ವಿಶೇಷ ಸಮಾರಂಭಗಳಿಗೆ ಕನಿಷ್ಠ ಒಂದು ವಾರ ಮುಂಚೆ ಆರ್ಡರ್‌ ಕೊಡಬೇಕು. ಅಂಥ ದೊಡ್ಡ ಆರ್ಡರ್‌ಗಳು ಬಂದಾಗ, ಮೂರ್ನಾಲ್ಕು ಬಾಣಸಿಗರು ಮಾಡಿದ ಆಹಾರವನ್ನು ಮೊದಲು ಗ್ರಾಹಕರಿಗೆ ಕಳಿಸಲಾಗುತ್ತೆ.

ಶ್ರೀಕಾಂತ್‌ ಬಾಲಕುಮಾರ್‌, ಸ್ಥಾಪಕಗಳಿಕೆ ಜೊತೆಗೆ ಹೊಗಳಿಕೆ!

ನಾನು ಒಂದು ವರ್ಷದಿಂದ ‘ಊಟ ಬಾಕ್ಸ್‌’ನಲ್ಲಿ ಬಾಣಸಿಗ­ಳಾಗಿದ್ದೇನೆ. ನನಗೆ ಅಡುಗೆ ಬಗ್ಗೆ ತುಂಬಾ ಆಸಕ್ತಿ. ಟಿವಿಯಲ್ಲಿ ಬರುವ ಹೊಸ ರುಚಿಗಳನ್ನು ಟ್ರೈ ಮಾಡೋದು ನನ್ನ ಮೆಚ್ಚಿನ ಹವ್ಯಾಸ. ಮನೆಯಲ್ಲೇ ಮಾಡುವ ಬೇರೆ ಕೆಲಸ ಸಿಗುತ್ತಾ ಅಂತ ಹುಡುಕುತ್ತಿದ್ದಾಗ ಸಿಕ್ಕಿದ್ದೇ ‘ಊಟ ಬಾಕ್ಸ್‌’. ಈಗ ನಾನು ದಿನಕ್ಕೆ ಕನಿಷ್ಠ ಐದಾರು ಆರ್ಡರ್‌ ತೆಗೆದುಕೊಳ್ಳುತ್ತೀನಿ. ವೆಜ್‌ ತಾಲಿ, ನಾನ್‌ವೆಜ್‌ ಥಾಲಿ, ಚಿಕನ್‌ ಮತ್ತು ಮೀನಿನ ಖಾದ್ಯಗಳಿಗೆ ಗ್ರಾಹಕರು ಹೆಚ್ಚಿದ್ದಾರೆ. ಏಳೆಂಟು ತಿಂಗಳಿಂದ ಒಬ್ಬರು ಪ್ರತಿದಿನ ವೆಜ್‌ ಥಾಲಿ ಆರ್ಡರ್‌ ಮಾಡುತ್ತಾರೆ. ಸಪ್ಪೆ ಅಡುಗೆಯನ್ನು ಮಾತ್ರ ತಿನ್ನುವವರೊಬ್ಬರು ಕೂಡ ದಿನಾ ಆರ್ಡರ್‌ ಕೊಡುತ್ತಾರೆ. ಹೀಗೆ, ಗ್ರಾಹಕರು ನನ್ನ ಕೈಯಡುಗೆಯನ್ನು ಇಷ್ಟಪಟ್ಟಾಗ ತುಂಬಾ ಖುಷಿಯಾಗುತ್ತೆ. ಸ್ಪೆಷಲ್‌ ಅಡುಗೆಯಾದರೆ ಒಂದು ದಿನದ ಮುಂಚೆ ಆರ್ಡರ್‌ ತೆಗೆದುಕೊಳ್ಳುತ್ತೇನೆ. ಮಾಮೂಲಿ ಅಡುಗೆಯಾದರೆ, 2-3 ಗಂಟೆ ಮೊದಲು ಆರ್ಡರ್‌ ಮಾಡಿದರೆ ಸಾಕು. ಗಳಿಕೆಯ ಜೊತೆಗೆ ಗ್ರಾಹಕರು ‘ಫ‌ುಡ್‌ ವಾಸ್‌ awesome’ ಅಂತ ಕಮೆಂಟ್ ಮಾಡ್ತಾರಲ್ಲ, ಆಗ ಸಿಗುವ ಸಂತೋಷವೇ ಬೇರೆ.

•ಕವಿತಾ ಚಾರುಲಿನ್‌ , ಗೃಹಿಣಿ, ದೊಮ್ಮಲೂರು

www.ootabox.com +918030636310

ಪ್ರಿಯಾಂಕ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next