ಹೊಸಕೋಟೆ: ಕಾಂಗ್ರೆಸ್‌ನಿಂದ ರಾಷ್ಟ್ರದಲ್ಲಿ ಬಡಜನರ, ರೈತರ ಅಭಿವೃದ್ಧಿಗೊಳಿಸಲು ಸಾಧ್ಯ ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ಪಟ್ಟಣದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ದಿಕ್ಸೂಚಿ: ರಾಜ್ಯ ಸರ್ಕಾರ ನೀಡಿದ್ದ ಬಹುತೇಕ ಆಶ್ವಾಸನೆಗಳನ್ನು ಈಡೇರಿಸಿದ್ದು ಹಸಿವು ಮುಕ್ತ ಕರ್ನಾಟಕವನ್ನಾಗಿಸುವಲ್ಲಿ ಯಶಸ್ವಿಯಾಗಿದೆ. ಮತ್ತೆ ಅಧಿಕಾರ ನೀಡಿದಲ್ಲಿ ವಸತಿ ಹೀನರಿಗೆ 50 ಲಕ್ಷ ಮನೆ, 10 ಲಕ್ಷ ಉದ್ಯೋಗ ಸೃಷ್ಟಿಸಲು ಆದ್ಯತೆ ನೀಡಲಾಗುವುದು.
ಪ್ರಸಕ್ತ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಮಾತ್ರ ಪ್ರಜೆಗಳ ಹಿತ ಕಾಪಾಡಲು ಸಾಧ್ಯವಾಗಲಿದ್ದು, ನಿಶ್ಚಿತವಾಗಿ ಅಧಿಕಾರ ಗಳಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಯಶಸ್ಸು ಮುಂಬರುವ 2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದ್ದು ಕೇಂದ್ರದಲ್ಲೂ ಅಧಿಕಾರ ಪಡೆಯುವುದು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭರವಸೆ ನೀಡುವುದಕ್ಕೆ ಸೀಮಿತ: ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಕೇವಲ ಭರವಸೆಗಳನ್ನು ನೀಡುವುದಕ್ಕಷ್ಟೇ ಸೀಮಿತಗೊಂಡಿದ್ದು ಉಳಿತಾಯ ಖಾತೆಗಳಿಗೆ ಹಣ ತುಂಬುವ, ನಿರುದ್ಯೋಗ ಸಮಸ್ಯೆ ಪರಿಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯನ್ನು ಪ್ರಧಾನಿ ಹೊಂದಿಲ್ಲ. ಬಂಡವಾಳ ಶಾಹಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಮೂಲಕ ಬಡಜನರ ಜೀವನದೊಂದಿಗೆ ಚೆಲ್ಲಾಟವಾಡುವ ಮೂಲಕ ಪ್ರಜೆಗಳು ಹೊಂದಿದ್ದ ಆಶಾಭಾವನೆಗಳನ್ನು ಹುಸಿಗೊಳಿಸಿದ್ದಾರೆ ಎಂದರು.
ಸಂಸದ ಎಂ.ವೀರಪ್ಪ ಮೊಯ್ಲಿ, ಶಾಸಕ ಎನ್.ನಾಗರಾಜ್ ಮಾತನಾಡಿದರು. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹೊಟ್, ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವ ಇನ್ನಿತರರು ಉಪಸ್ಥಿತರಿದ್ದರು. ಸಾರ್ವಜನಿಕ ಸಭೆ ನಂತರ ಕೆ.ಆರ್.ರಸ್ತೆ, ಸೂಲಿಬೆಲೆ ರಸ್ತೆಯಲ್ಲಿ ರೋಡ್‌ಶೋ ನಡೆಸಿ ದೇವನಹಳ್ಳಿಗೆ ತೆರಳಿದರು.