ನವದೆಹಲಿ: ಪೆಟ್ರೋಲ್ ಬೆಲೆಯ ಹೆಚ್ಚಳದ ನಡುವೆ ಇದೀಗ ಮುಂಬೈ ಮತ್ತು ಪೂನಾ, ಮಹಾರಾಷ್ಟ್ರದ ಜನರು ಆಹಾರ ಬೆಲೆ ಏರಿಕೆಯ ಸಮಸ್ಯೆ ಎದುರಿಸುತ್ತಿದ್ದಾರೆ. ನಾಸಿಕ್ ನ ಲಾಸಾಲ್ ಗಾಂವ್ ರಖಂ ಮಾರುಕಟ್ಟೆಯಲ್ಲಿ ದರ ಏರಿಕೆಯಿಂದಾಗಿ ಮುಂಬೈ ಮತ್ತು ಪೂನಾದಲ್ಲಿ ಈರುಳ್ಳಿ ಪ್ರತಿ ಕೆ.ಜಿಗೆ ನೂರು ರೂಪಾಯಿಗೆ ತಲುಪಿದೆ ಎಂದು ವರದಿ ತಿಳಿಸಿದೆ.
ಲಸಾಲ್ ಗಾಂವ್ ಈರುಳ್ಳಿ ಸಗಟು ಮಾರುಕಟ್ಟೆ ಅತೀ ದೊಡ್ಡ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ(ಎಪಿಎಂಸಿ) ಮತ್ತು ನಾಸಿಕ್ ಮಹಾರಾಷ್ಟ್ರದ ಶೇ.60ರಷ್ಟು ಈರುಳ್ಳಿ ಬೆಳೆಯನ್ನು ಉತ್ಪಾದಿಸುತ್ತದೆ.
ಅಕ್ಟೋಬರ್ 21ರಂದು ಮುಂಬೈನಲ್ಲಿ ಈರುಳ್ಳಿ ಚಿಲ್ಲರೆ ವ್ಯಾಪಾರದಲ್ಲಿ ಪ್ರತಿ ಕೆ.ಜಿಗೆ 80ರಿಂದ 100 ರೂಪಾಯಿಗೆ ಏರಿಕೆಯಾಗಿತ್ತು. ಪೂನಾದಲ್ಲಿ ಪ್ರತಿ ಕೆ.ಜಿ. ಈರುಳ್ಳಿ ಬೆಲೆ 100ರಿಂದ 120ರೂಪಾಯಿಗೆ ಏರಿಕೆಯಾಗಿರುವುದಾಗಿ ಪೂನಾ ಎಪಿಎಂಸಿ ಕಮಿಷನ್ ಏಜೆಂಟ್ ವಿಲಾಸ್ ಭುಜ್ ಬಲ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ:ಅನಂತ ಪದ್ಮನಾಭಸ್ವಾಮಿ ದೇವಸ್ಥಾನದೊಳಗೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ “ಬಬಿಯಾ” ಮೊಸಳೆ!
ಈರುಳ್ಳಿ ಸರಬರಾಜು ಕಡಿಮೆಯಾದ ಪರಿಣಾಮ ಬೆಲೆ ಏರಿಕೆಗೆ ಕಾರಣವಾಗಿದೆ. ಕಳೆದ ಜನವರಿಯಿಂದ ಲಾಸಾಲ್ ಗಾಂವ್ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಕ್ವಿಂಟಾಲ್ ಗೆ 1,900ರಿಂದ 6200ರೂಪಾಯಿವರೆಗೆ ಏರಿಕೆಯಾಗುತ್ತಲೇ ಇತ್ತು ಎಂದು ವರದಿ ವಿವರಿಸಿದೆ.
ನಾಸಿಕ್ ಜಿಲ್ಲೆಯಲ್ಲಿರುವ ವ್ಯಾಪಾರಿಗಳ ಆವರಣ, ಅಂಗಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದ ನಾಲ್ಕು ದಿನಗಳ ಬಳಿಕ ಸೋಮವಾರ (ಅಕ್ಟೋಬರ್ 19, 2020) ಎಪಿಎಂಸಿ ಮಾರುಕಟ್ಟೆ ತೆರೆಯಲಾಗಿತ್ತು ಎಂದು ವರದಿ ತಿಳಿಸಿದೆ.