ಒನ್ಪ್ಲಸ್ ಕಂಪೆನಿ ಮೇಲ್ಮಧ್ಯಮ ವಲಯದಲ್ಲಿ ಆರಂಭಿಸಿರುವ ನಾರ್ಡ್ ಸರಣಿ ಮಿತವ್ಯಯದ ದರದಲ್ಲಿ ಉತ್ತಮ ಫೋನ್ ಗಳನ್ನು ನೀಡುವ ವಿಷಯದಲ್ಲಿ ಗಮನ ಸೆಳೆದಿದೆ. ಸಾಮಾನ್ಯವಾಗಿ ಒನ್ ಪ್ಲಸ್ ಫೋನ್ ಗಳ ದರ 40 ಸಾವಿರ ರೂ.ಗಳ ಮೇಲೆಯೇ ಇರುತ್ತದೆ. ಹಾಗಾಗಿ ಒನ್ ಪ್ಲಸ್ ಕಂಪೆನಿ ಮಧ್ಯಮ ದರ್ಜೆಯ ಸ್ಪೆಸಿಫಿಕೇಷನ್ ಗಿಂತ ಹೆಚ್ಚಾದ, ಉನ್ನತ ದರ್ಜೆಯ ಫೋನ್‍ಗಳಿಗಿಂತ ಕಡಿಮೆ ಸ್ಪೆಸಿಫಿಕೇಷನ್ ಇರುವ 23 ಸಾವಿರದಿಂದ 30 ಸಾವಿರ ರೂ.ಗಳೊಳಗೆ ದರ ಇರುವ ವಲಯದಲ್ಲಿ ನಾರ್ಡ್ ಸರಣಿಯನ್ನು ಆರಂಭಿಸಿದೆ. ನಾರ್ಡ್ ಸರಣಿಯ 2ನೇ ಫೋನಾದ ಒನ್ ಪ್ಲಸ್ ನಾರ್ಡ್ ಸಿಇ 5ಜಿ ತನ್ನ ದರ ಹಾಗೂ ಗುಣಮಟ್ಟದಿಂದ ವಿದ್ಯಾರ್ಥಿಗಳು, ಯುವಕರ ಗಮನ ಸೆಳೆದಿದ್ದು, ಅದರ ಕಾರ್ಯಾಚರಣೆ ಹೇಗಿದೆ ನೋಡೋಣ.
ಮೊದಲಿಗೆ ಇದರ ದರ ಪಟ್ಟಿ ಇಂತಿದೆ: 6 ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ-22,999 ರೂ., 8ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ-24,999 ರೂ. ಹಾಗೂ 12 ಜಿಬಿ ರ್ಯಾಮ್ ಮತ್ತು 256 ಜಿಬಿ ಆಂತರಿಕ ಸಂಗ್ರಹ ಆವೃತ್ತಿಗೆ 27,999 ರೂ. ಅಮೆಜಾನ್.ಇನ್ ನಲ್ಲಿ ಲಭ್ಯ.
ಇದನ್ನೂ ಓದಿ:ಬಾಹ್ಯಾಕಾಶ ನಿಲ್ದಾಣಕ್ಕೆ ಕಾಲಿಟ್ಟ ವಿಶೇಷ ಜೀವಿ!
ಆರಂಭಿಕ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆವೃತ್ತಿಯ ದರವಂತೂ ಹಣಕ್ಕೆ ತಕ್ಕ ಮೌಲ್ಯ ಎಂದೇ ಹೇಳಬಹುದು. ನಿಮ್ಮ ಅಗತ್ಯಕ್ಕೆ ಆಂತರಿಕ ಸಂಗ್ರಹ 128 ಜಿಬಿ ಸಾಕಷ್ಟು ಎಂಬಂತಿದ್ದರೆ 23 ಸಾವಿರಕ್ಕೆ ಒಂದು ಉತ್ತಮ ಫೋನ್ ನಿಮಗೆ ದೊರೆತಂತಾಗುತ್ತದೆ. ಅಮೆಜಾನ್‍ನಲ್ಲಿ ಆಗಾಗ ಆಫರ್ ಇದ್ದೇ ಇರುತ್ತದೆ. ಅಂಥ ಸಮಯ ನೋಡಿಕೊಂಡರೆ ಇನ್ನೂ 1500 ರೂ. ಕಡಿಮೆಯಾಗಿ 21500 ಕ್ಕೇ ನಿಮಗೆ ಈ ಫೋನ್ ದೊರಕುತ್ತದೆ.
ವಿನ್ಯಾಸ: ಉನ್ನತ ದರ್ಜೆಯ ಮೊಬೈಲ್‍ಗಳ ಗುಣಮಟ್ಟದ ವಿನ್ಯಾಸವೇ ಇದರಲ್ಲೂ ಇದೆ. ಬಾಕ್ಸಿನಿಂದ ಮೊಬೈಲ್ ತೆರೆದು ಕೈಯಲ್ಲಿ ಹಿಡಿದರೆ ಮೊದಲು ನಿಮ್ಮ ಗಮನಕ್ಕೆ ಬರುವುದು ಅದರ ಸ್ಲಿಮ್‍ನೆಸ್. ಒನ್‌ಪ್ಲಸ್ 6ಟಿ ನಂತರ ಇದು ಅತ್ಯಂತ ತೆಳುವಾದ ಫೋನೆಂದು ಕಂಪೆನಿ ತಿಳಿಸಿದೆ. 170 ಗ್ರಾಂ ತೂಕ, 7.9 ಮಿಲಿಮೀಟರ್ ದಪ್ಪವಿದೆ.
ಪರದೆ: 6.43 ಇಂಚಿನ ಅಮೋಲೆಡ್ ಪರದೆ, 90 ಹರ್ಟ್‌ಜ್ ಸರಾಗ ಡಿಸ್‌ಪ್ಲೇ ಇದೆ. ಫುಲ್‌ಎಚ್‌ಡಿಪ್ಲಸ್ ಹಾಗೂ ಎಚ್‌ಡಿಆರ್ 10ಪ್ಲಸ್ ಸವಲತ್ತು ಇದೆ. ಅಮೋಲೆಡ್ ಡಿಸ್ ಪ್ಲೇ ನಲ್ಲಿ ಎಲ್‍ಸಿಡಿ ಗಿಂತ ಪರದೆಯ ರಿಚ್‍ನೆಸ್ ಹೆಚ್ಚಿರುತ್ತದೆ. ಹೀಗಾಗಿ ಸಹಜವಾಗಿಯೇ ಇದರಲ್ಲಿ ಚಿತ್ರಗಳು, ವಿಡಿಯೋಗಳ ಬಣ್ಣಗಳು ಚೆನ್ನಾಗಿ ಮೂಡಿಬರುತ್ತವೆ. ಅಲ್ಲದೇ, ಆಲ್‌ವೇಸ್ ಆನ್ ಡಿಸ್‌ಪ್ಲೇ ಫೀಚರ್ ಹೊಂದಿದೆ. ಇದರಲ್ಲಿ ಮೊಬೈಲ್ ಆಫ್ ಮಾಡಿದಾಗಲೂ ಸಮಯ, ದಿನಾಂಕ, ನೊಟಿಫಿಕೇಷನ್‍ಗಳು ಪರದೆಯ ಮೇಲೆ ಮೂಡಿಬರುತ್ತದೆ.
ಕಾರ್ಯಾಚರಣೆ: ಈ ವರ್ಗದಲ್ಲಿ ಅತ್ಯುನ್ನತ ಪ್ರೊಸೆಸರ್ ಆದ ಸ್ನಾಪ್‌ಡ್ರಾಗನ್ 750ಐ 5ಜಿ ಪ್ರೊಸೆಸರ್ ಅನ್ನು ಈ ಮೊಬೈಲ್ ಹೊಂದಿದೆ. ಈ ದರಕ್ಕೆ ಸ್ನಾಪ್ ಡ್ರಾಗನ್ ಪ್ರೊಸೆಸರ್ ನೀಡುವಲ್ಲಿ ಅನೇಕ ಕಂಪೆನಿಗಳು ಹಿಂಜರಿಯುತ್ತವೆ. ಇದು 5ಜಿ ಪ್ರೊಸೆಸರ್ ಎಂಬುದನ್ನು ಗಮನಿಸಬೇಕು. ಈ ದರದಲ್ಲಿ 5ಜಿ ಸೌಲಭ್ಯ ನೀಡಲು ಕೆಲವು ಕಂಪೆನಿಗಳು ಮೀಟಿಯಾಟೆಕ್ ಪ್ರೊಸೆಸರ್ ಬಳಸುತ್ತವೆ. ಆದರೆ ಒನ್‍ಪ್ಲಸ್ ಇದರಲ್ಲಿ ಸ್ನಾಪ್‍ಡ್ರಾಗನ್ ನೀಡಿದೆ. ಫೋನಿನ ಸಾಮಾನ್ಯ ಬಳಕೆಯಿಂದ ತೊಡಗಿ, ಗೇಮ್‍ಗಳಲ್ಲೂ ಫೋನ್ ವೇಗವಾಗಿ ಕೆಲಸ ಮಾಡುತ್ತದೆ.
ಆಂಡ್ರಾಯ್ಡ್ 11 ಆವೃತ್ತಿ ಹೊಂದಿದ್ದು, ಇದಕ್ಕೆ ಒನ್‌ಪ್ಲಸ್‌ನ ಆಕ್ಸಿಜನ್ ಓಎಸ್ ಬೆಂಬಲ ಇದೆ. ಗೊತ್ತಿರುವಂತೆ ಆಕ್ಸಿಜನ್ ಓಎಸ್ ಹೆಚ್ಚೂ ಕಡಿಮೆ ಪ್ಯೂರ್ ಆಂಡ್ರಾಯ್ಡ್ ಅನುಭವವನ್ನೇ ನೀಡುತ್ತದೆ.
ಬ್ಯಾಟರಿ: ಒನ್‌ಪ್ಲಸ್ ನೋರ್ಡ್ ಸಿಇ 4500 ಎಂಎಎಚ್ ಬ್ಯಾಟರಿ, ವಾರ್ಪ್ ಚಾಜ್ 30 ಟಿ ಪ್ಲಸ್ ಎಂಬ ತಂತ್ರಜ್ಞಾನ ಹೊಂದಿದ್ದು, ಸೊನ್ನೆ ಯಿಂದ ಶೇ. 70ರವರೆಗೆ ಅರ್ಧಗಂಟೆಯಲ್ಲಿ ಚಾರ್ಜ್ ಆಗುತ್ತದೆ. ಹೆಚ್ಚು ಬಳಕೆ ಮಾಡಿದರೂ ಒಂದು ದಿನ ಪೂರ್ತಿ ಬ್ಯಾಟರಿ ಬಾಳಿಕೆ ಬರುತ್ತದೆ.
ಉತ್ತಮ ಕ್ಯಾಮರಾ: ಸಾಮಾನ್ಯವಾಗಿ ಒನ್‍ಪ್ಲಸ್ ಮೊಬೈಲ್‍ಗಳು ಕ್ಯಾಮರಾ ವಿಭಾಗದಲ್ಲಿ ತೃಪ್ತಿಕರ ಫಲಿತಾಂಶ ನೀಡುತ್ತವೆ. ಹಾಗೆಯೇ ನಾರ್ಡ್ ಸಿಇ 5ಜಿ ಕೂಡ ಇದನ್ನು ಹುಸಿಗೊಳಿಸುವುದಿಲ್ಲ. ಇದು 64 ಮೆ.ಪಿ. ಮುಖ್ಯ ಲೆನ್ಸ್, 8 ಮೆ.ಪಿ. ಅಲ್ಟ್ರಾ ವೈಡ್ ಲೆನ್ಸ್ ಮತ್ತು 2 ಮೆ.ಪಿ. ಮೋನೋಕ್ರೋಮ್ ಸೆನ್ಸರ್ ಹೊಂದಿದೆ. ಸೆಲ್ಫೀಗೆ 16 ಮೆ.ಪಿ. ಕ್ಯಾಮರಾ ಇದೆ.
ಮುಖ್ಯ ಕ್ಯಾಮರಾದಲ್ಲಿ ಉತ್ತಮ ಫೋಟೋಗಳು ಮೂಡಿಬರುತ್ತವೆ. ಹೊರಾಂಗಣ, ಒಳಾಂಗಣ ಚಿತ್ರಗಳು ಉತ್ತಮ ಫಲಿತಾಂಶ ನೀಡುತ್ತವೆ. ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದ ಫೋಟೋಗಳು ಸುಂದರವಾಗಿ ಮೂಡಿಬಂದವು. 4ಕೆ ವಿಡಿಯೋ ಸೌಲಭ್ಯ ಇದ್ದು ಇದರ ಫಲಿತಾಂಶವೂ ಚೆನ್ನಾಗಿದೆ. ಒಟ್ಟಾರೆಯಾಗಿ ಈ ದರ ಪಟ್ಟಿಯಲ್ಲಿನ ಫೋನ್‍ಗಳಲ್ಲಿ ಒಂದು ಉತ್ತಮ ಕ್ಯಾಮರಾ ಫೋನ್ ಎನ್ನಲಡ್ಡಿಯಿಲ್ಲ.
ಇತರೆ: ವಿಶೇಷವೆಂದರೆ ಇದಕ್ಕೆ 3.5 ಎಂ.ಎಂ. ಆಡಿಯೋ ಜಾಕ್ ಹಾಕುವ ಸೌಲಭ್ಯ ನೀಡಲಾಗಿದೆ! ಈಗ ಬರುತ್ತಿರುವ ಒನ್ ಪ್ಲಸ್ ಫೋನ್‌ಗಳಲ್ಲಿ 3.5 ಎಂ.ಎಂ. ಆಡಿಯೋ ಜಾಕ್ ಸವಲತ್ತು ಇರಲಿಲ್ಲ. ನಿಮ್ಮ ಸಂಗ್ರಹದಲ್ಲಿರುವ ಉತ್ತಮ ವೈರ್ ಇಯರ್ ಫೋನ್ ಗಳಿಂದ ಸಂಗೀತ ಆಲಿಸಬಹುದು!
ಒನ್‌ಪ್ಲಸ್‌ನ ಅತ್ಯುನ್ನತ ದರ್ಜೆಯ ಫೋನ್‌ಗಳಿಗೆ ನೀಡುವಂತೆ, ಇದಕ್ಕೂ ಎರಡು ವರ್ಷಗಳ ಕಾಲ ಸಾಫ್ಟ್ ವೇರ್ ಅಪ್‌ಡೇಟ್ ಹಾಗೂ ಮೂರು ವರ್ಷಗಳ ಕಾಲ ಸೆಕ್ಯುರಿಟಿ ಅಪ್‌ಡೇಟ್ ನೀಡುವುದಾಗಿ ಕಂಪೆನಿ ತಿಳಿಸಿದೆ.
ನಾರ್ಡ್ ಸಿಇ 5ಜಿ ನಾವು ನೀಡಿದ ದರಕ್ಕೆ ಗುಣಮಟ್ಟದಲ್ಲಿ ರಾಜಿಯಾಗದೇ, ಉತ್ತಮ ಅನುಭವ ನೀಡುವ ಮೊಬೈಲ್ ಎಂದರೆ ತಪ್ಪಾಗಲಾರದು.
-ಕೆ.ಎಸ್. ಬನಶಂಕರ ಆರಾಧ್ಯ