ನವದೆಹಲಿ:ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನಿಂದಾಗಿ ಸಚಿನ್ ಪೈಲಟ್ ಅವರಂತಹ ಯುವ ನಾಯಕ ಕಾಂಗ್ರೆಸ್ ಪಕ್ಷದಿಂದ ಹೊರಹೋಗಿರುವುದು ಬೇಸರದ ವಿಚಾರವಾಗಿದೆ. ಅವರೊಬ್ಬ ಉತ್ತಮ ಹಾಗೂ ಕುಶಾಗ್ರಮತಿ ವ್ಯಕ್ತಿತ್ವ ಹೊಂದಿರುವ ರಾಜಕೀಯ ಪಟು ಎಂದು ನಾನು ಪರಿಗಣಿಸುತ್ತೇನೆ ಎಂಬುದಾಗಿ ಸಂಸದ ಶಶಿ ತರೂರ್ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ರಾಜಕೀಯ ಜಿದ್ದಾಜಿದ್ದಿ ತಾರಕಕ್ಕೇರಿದ್ದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಏತನ್ಮಧ್ಯೆ ಸಚಿನ್ ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಹಾಗೂ ಪಿಸಿಸಿ ಹುದ್ದೆಯಿಂದ ಹೈಕಮಾಂಡ್ ವಜಾಗೊಳಿಸಿತ್ತು.
ಪೈಲಟ್ ಕುರಿತು ಟ್ವೀಟ್ ಮಾಡಿರುವ ತರೂರ್ “ಪೈಲಟ್ ಕಾಂಗ್ರೆಸ್ ನಿಂದ ಹೊರಹೋಗಿರುವುದು ಬೇಸರದ ಸಂಗತಿ. ಅವರೊಬ್ಬ ಉತ್ತಮ ಹಾಗೂ ಕುಶಾಗ್ರಮತಿ ನಾಯಕರಾಗಿದ್ದರು. ಇಂತಹ ನಿರ್ಧಾರ ಕೈಗೊಳ್ಳುವ ಮುನ್ನ ಅವರು ಈ ಪಕ್ಷವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಲಪಡಿಸಲು ನಮ್ಮೊಂದಿಗೆ ಕೈಜೋಡಿಸಬೇಕಾಗಿತ್ತು ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಾನು ಚುನಾವಣೆ ಗೆಲ್ಲಿಸಿಕೊಟ್ಟೆ, ಗೆಹ್ಲೋಟ್ ಸಿಎಂ ಆದರು! ಬೇಜಾರಿದೆ ಆದರೆ ಬಿಜೆಪಿ ಸೇರಲ್ಲ
ಶಾಸಕಾಂಗ ಪಕ್ಷದ ಎರಡು ಸಭೆಗೆ ಸಚಿನ್ ಪೈಲಟ್ ಗೈರು ಹಾಜರಾಗಿದ್ದರಿಂದ ಅವರನ್ನು ಡಿಸಿಎಂ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ವರದಿ ತಿಳಿಸಿದೆ.