Advertisement

ಶ್ವಾನ ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ.!

12:52 AM Dec 23, 2019 | Lakshmi GovindaRaj |

ಬೆಂಗಳೂರು: ವ್ಯಕ್ತಿಗಳು ಅಥವಾ ಬೆಲೆಬಾಳುವ ವಸ್ತುಗಳು ಕಳುವಾದಾಗ ಪತ್ತೆಗಾಗಿ ಸಾರ್ವಜನಿಕರ ಪ್ರಕಟಣೆ ಹೊರಡಿಸುವುದು, ಬಹುಮಾನ ಘೋಷಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ತಮ್ಮ ಎಂಟು ಕೋಟಿ ರೂ. ಮೌಲ್ಯದ ಚೀನಾ ಮೂಲದ ತಳಿಯ ಶ್ವಾನ ಕಳುವಾಗಿದೆ. ಅದನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ!

Advertisement

ಅಶ್ಚರ್ಯವಾದರೂ ನಿಜ. ನಗರದಲ್ಲಿ ಕ್ಯಾಡಬಾಮ್ಸ್‌ ಕೆನಾಲ್ಸ್‌ ಸಂಸ್ಥೆ ನಡೆಸುತಿರುವ, ಸೆಲೆಬ್ರಿಟಿ ಬ್ರೀಡರ್‌ ಸತೀಶ್‌ ಕ್ಯಾಡಬಾಮ್ಸ್‌ ಎಂಬವರು ದೇಶ ಮತ್ತು ವಿದೇಶಿ ತಳಿಯ 150 ನಾಯಿಗಳನ್ನು ಸಾಕಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಅವರು ಚೀನಾ ಮೂಲದ ಅಲಾಸ್ಕನ್‌ ಮಲಾಮ್ಯೂಟ್‌ ಜಾತಿಯ ಎರಡು ಹೆಣ್ಣು, ಒಂದು ಗಂಡು ನಾಯಿ ಮರಿಗಳನ್ನು ತಂದು ಸಾಕಿದ್ದರು. ಇತ್ತೀಚೆಗೆ ಪರಿಚಯಸ್ಥರಾದ ಚೇತನ್‌ ಎಂಬುವರು ಮೂರು ವರ್ಷದ ಹೆಣ್ಣು ನಾಯಿಯನ್ನು ಕೊಂಡೊಯ್ದಿದ್ದರು.

ಆದರೆ, ಇದೀಗ ಆ ನಾಯಿಯನ್ನು ಯಾರೋ ದುಷ್ಕರ್ಮಿಗಳು ಕಳವು ಮಾಡಿದ್ದು, ಅದನ್ನು ಪತ್ತೆ ಹಚ್ಚಿಕೊಂಡುವಂತೆ ಚೇತನ್‌ ಹನುಮಂತನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಾಯಿ ಮೌಲ್ಯವನ್ನು ಕೇಳಿದ ಪೊಲೀಸರೇ ಹೌಹಾರಿದ್ದು, ಗಂಭೀರ ಸ್ವರೂಪವಲ್ಲದ ಪ್ರಕರಣ(ಎನ್‌ಸಿಆರ್‌) ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಹೀಗಾಗಿ ಮೂಲ ಮಾಲೀಕ ಸತೀಶ್‌ ಕ್ಯಾಡಬಾಮ್ಸ್‌ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಶ್ವಾನದ ಫೋಟೋ ಪ್ರಕಟಿಸಿ, “ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ’ ಘೋಷಿಸಿದ್ದಾರೆ.

ಏನಿದು ಪ್ರಕರಣ?: ಚೀನಾ ಮೂಲದ ಅಲಾಸ್ಕನ್‌ ಮಲಾ ಮ್ಯೂಟ್‌ ತಳಿಯ ಮೂರು ನಾಯಿ ಮರಿಗಳನ್ನು ಸತೀಶ್‌ ಕೋಟ್ಯಂತರ ರೂ. ಕೊಟ್ಟು ಖರೀದಿ ಮಾಡಿದ್ದರು. ತಮ್ಮ ಸಂಸ್ಥೆ ಸಮೀಪದಲ್ಲಿರುವ ಅಣ್ಣ-ತಂಗಿ ಪ್ರತನಿತ್ಯ ಈ ನಾಯಿಯನ್ನು ಮುದ್ದಾಡಿ ಹೋಗುತ್ತಿದ್ದರು. ಹೀಗಾಗಿ ಕೆಲ ತಿಂಗಳ ಹಿಂದೆ ಕೆಲವೊಂದು ಷರತ್ತುಗಳನ್ನು ಹಾಕಿ ಅಣ್ಣ-ತಂಗಿಯ ಪೋಷಕರಾದ ಶ್ರೀನಗರ ನಿವಾಸಿ ಚೇತನ್‌ ಎಂಬವರಿಗೆ ಒಂದು ಶ್ವಾನವನ್ನು ಕೊಟ್ಟಿದ್ದರು.

ಚೇತನ್‌ ನಾಯಿಯನ್ನು ಸಾಕುತ್ತಿದ್ದು, ನಾಯಿ ಮರಿ ಹಾಕಿದಾಗ ಒಂದು ಮರಿ ಇಟ್ಟುಕೊಂಡರೆ, ಉಳಿದ ನಾಯಿ ಮರಿಗಳನ್ನು ತಮಗೆ ಕೊಡಬೇಕೆಂದು ಷರತ್ತು ವಿಧಿಸಲಾಗಿತ್ತು. ಅದರಂತೆ ಚೇತನ್‌ ನಾಯಿ ಸಾಕುತ್ತಿದ್ದರು. ಡಿ.12ಕ್ಕೆ ಚೇತನ್‌ಗೆ ಕರೆ ಮಾಡಿ ನಾಯಿ ಬಗ್ಗೆ ವಿಚಾರಿಸಿದ್ದರು. ಆಗ ನಾಯಿ ಸಂಬಂಧಿಕರ ಮನೆಯಲ್ಲಿದೆ ಎಂದು ಹೇಳಿದ್ದರು. ಅನುಮಾನದ ಮೇಲೆ ಮತ್ತೆ ವಿಚಾರಿಸಿದಾಗ, ಡಿ.5ರಂದು ಮನೆ ಮುಂದೆ ಕಟ್ಟಿದ್ದ ನಾಯಿಯನ್ನು ಯಾರೋ ಕಳ್ಳತನ ಮಾಡಿರುವುದಾಗಿ ಚೇತನ್‌ ತಿಳಿಸಿದ್ದರು.

Advertisement

ದೂರು ನೀಡಿದ ಬಳಿಕ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸತೀಶ್‌ ಇದೀಗ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಸತೀಶ್‌, ಇಡೀ ದೇಶದಲ್ಲಿ ಈ ತಳಿಯ ನಾಯಿಗಳು ಇರುವುದು ಮೂರೇ ಮೂರು. ಅದು ನಮ್ಮ ಸಂಸ್ಥೆಯಲ್ಲಿ ಮಾತ್ರ. ಇದರಲ್ಲಿ ಒಂದು ಗಂಡು ಹಾಗೂ ಎರಡು ಹೆಣ್ಣು ನಾಯಿಗಳಿವೆ.

ಇದು ಚೀನಾದಲ್ಲೂ ಇದಕ್ಕೆ ಸಾಕಷ್ಟು ಬೇಡಿಕೆಯಿದೆ. ನಾನು 8 ಕೋಟಿ ರೂ. ನೀಡಿ ಲಾಸ್ಕನ್‌ ಮಲಾಮ್ಯಾಟ್‌ ನಾಯಿಯನ್ನು ಎರಡು ವರ್ಷಗಳ ಹಿಂದೆ ಚೀನಾದಿಂದ ಖರೀದಿಸಿದ್ದೆ. 60ರಿಂದ 80 ಕೆ.ಜಿ. ತೂಗುವ ಅಲಾಸ್ಕನ್‌ ಮಲಾಮ್ಯೂಟ್‌ ಶ್ವಾನಗಳು, ಹಿಮ ಪ್ರದೇಶದಲ್ಲಿ ಎಂಟು ಹತ್ತು ಮಂದಿ ಕುಳಿತ ಗಾಡಿಯನ್ನು ಎಳೆದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಹೇಳಿದರು.

ಮರಿಗೆ ಮೂರರಿಂದ ಐದು ಲಕ್ಷ ರೂ.: ಅಲಾಸ್ಕನ್‌ ಮಲಾಮ್ಯೂಟ್‌ ತಳಿಯ ಒಂದೆರಡು ತಿಂಗಳ ನಾಯಿ ಮರಿಗೆ ಮೂರರಿಂದ ಐದು ಲಕ್ಷ ರೂ.ವರಗೆ ಬೆಲೆ ಇದೆ. ಅತ್ಯಂತ ಆಕರ್ಷಕ ಹಾಗೂ ಮುದ್ದಾಗಿ ಕಾಣುವ ಸೌಮ್ಯ ಸ್ವಭಾವಾದ ಈ ಶ್ವಾನ ಸ್ವಲ್ಪ ದೊಡ್ಡದಾದರೆ ಕೋಟ್ಯಂತರ ರೂ. ಬೆಲೆ ಬಾಳುತ್ತದೆ ಎಂದು ಸತೀಶ್‌ ಹೇಳಿದರು.

ಅಲಾಸ್ಕನ್‌ ಮಲಾಮ್ಯೂಟ್‌ ವಿಶೇಷ: ಮಲ್‌ ಅಥವಾ ಮ್ಯಾಲಿ ಎಂಬ ಅಡ್ಡ ಹೆಸರುಗಳಿಂದ ಕರೆಯಲ್ಪಡುವ ಅಲಾಸ್ಕನ್‌ ಮಲಾಮ್ಯೂಟ್‌ ಬಲು ಶಕ್ತಿಶಾಲಿಯಾದ ನಾಯಿ. ಇದರ ಮೂಲ ಅಲಾಸ್ಕಾದ ನಾರ್ಟನ್‌ ಸೌಂಡ್‌ ಎಂಬ ಪ್ರಾಂತ್ಯ. ಇದರ ತಳಿ ಅಭಿವೃದ್ಧಿಗೊಂಡಿದ್ದು ಅಮೆರಿಕದಲ್ಲಿ. ಅಲಾಸ್ಕಾದ ರಾಷ್ಟ್ರೀಯ ಪ್ರಾಣಿಯೆಂಬ ಹೆಗ್ಗಳಿಕೆಯೂ ಇದಕ್ಕಿದೆ.

10ರಿಂದ 14 ವರ್ಷಗಳವರೆಗೆ ಬದುಕುವ ಇದು 23ರಿಂದ 25 ಇಂಚು ಎದೆ, ಬಲಿಷ್ಠ ತೋಳು ಹಾಗೂ ಕಾಲುಗಳು, ಎಂಥ ಪ್ರತಿಕೂಲ ಹವಾಮಾನವನ್ನೂ ತಡೆದುಕೊಳ್ಳಬಲ್ಲ ಚರ್ಮವನ್ನು ಇದು ಹೊಂದಿರುತ್ತದೆ. ಆರೋಗ್ಯವಂತ ನಾಯಿಯು ಸರಾಸರಿಯಾಗಿ 34ರಿಂದ 38 ಕೆಜಿ ತೂಗಬಲ್ಲದು. ಇದರ ವಿಶೇಷವಾದ ಗುಣವೆಂದರೆ, ಇದರ ಅತ್ಯಂತ ಚುರುಕುತನ ಹಾಗೂ ವಿಚಕ್ಷಣ ಬುದ್ಧಿ.

ಅಪಾಯಗಳನ್ನು, ಅಪರಿಚಿತರನ್ನು ದೂರದಿಂದಲೇ ಗುರುತಿಸಬಲ್ಲದು ಹಾಗೂ ಮಾಲೀಕನನ್ನು ಎಚ್ಚರಿಸಬಲ್ಲದು. ಶತ್ರುಗಳ ಮೇಲೆ ದಾಳಿಗೆ ಎಗರಿದರೆ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಕೊಲ್ಲುವವರೆಗೂ ಬಿಡದು. ಇದರ ದಾಳಿಯಿಂದ ತಪ್ಪಿಸಿಕೊಳ್ಳುವುದು ಬಹುತೇಕ ಅಸಾಧ್ಯ ಎನ್ನಲಾಗುತ್ತದೆ. ನರಿಯಂತೆ ಊಳಿಡಬಲ್ಲ ಇದಕ್ಕೆ ಸಿಕ್ಕಾಪಟ್ಟೆ ಸಿಟ್ಟು. ಕಳ್ಳಕಾಕರು ಅಥವಾ ತನ್ನ ಮಾಲೀಕರಿಗೆ ತೊಂದರೆ ಕೊಡಲು ಬರುವವರ ಮೇಲೆ ಮುಗಿಬಿದ್ದು ಹೋರಾಡುವ ಛಾತಿಯುಳ್ಳದ್ದು.

ಈ ಹಿಂದೆಯೂ ತಮ್ಮ ಸಂಸ್ಥೆಯಲ್ಲಿ ಬೇರೆ ಜಾತಿಯ ನಾಯಿ ಕಳುವಾಗಿತ್ತು. ಆಗ ಕೆನಾಲ್ಸ್‌ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಹಾಕಿದ ಒಂದೆರಡು ದಿನಗಳಲ್ಲಿ ಪತ್ತೆಯಾಗಿತ್ತು. ಇದೀಗ ಯಾರೋ ಪರಿಚಯಸ್ಥರೇ ಕಳವು ಮಾಡಿದ್ದಾರೆ. ಹೀಗಾಗಿ ತಡವಾಗುತ್ತಿದೆ. ಶ್ವಾನ ಖಂಡಿತ ಸಿಗುತ್ತದೆ ಎಂಬ ವಿಶ್ವಾಸವಿದೆ.
-ಸತೀಶ್‌ ಕ್ಯಾಡಬಾಮ್ಸ್‌, ನಾಯಿ ಮಾಲೀಕ

Advertisement

Udayavani is now on Telegram. Click here to join our channel and stay updated with the latest news.

Next