ಬೆಂಗಳೂರು: ಒಂದೆಡೆ ಯಾವುದೇ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುತ್ತಿಲ್ಲ; ಮತ್ತೂಂದೆಡೆ ಆ ಪ್ರಕರಣಗಳ ವಿಚಾರಣೆ ನೆಪದಲ್ಲಿ ಅಧಿಕಾರಿಗಳೂ ಕೈಗೆ ಸಿಗುತ್ತಿಲ್ಲ. ಇದು ಕಿರಿಕಿರಿಯಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಒಂದೇ ಪ್ರಕರಣವನ್ನು ಒಂದಕ್ಕಿಂತ ಹೆಚ್ಚು ತನಿಖಾ ಸಂಸ್ಥೆಗಳು ವಿಚಾರಣೆಗೆ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೂಚಿಸಿದೆ. ಈ ಮೂಲಕ ಪರೋಕ್ಷವಾಗಿ ತನಿಖಾ ಸಂಸ್ಥೆಗಳಿಗೇ “ಬಿಸಿ’ ಮುಟ್ಟಿಸಿದೆ!
ಬಿಡಿಎಗೆ ಸಂಬಂಧಿಸಿದಂತೆ ಹತ್ತುಹಲವು ದೂರುಗಳು ದಾಖಲಾಗಿವೆ. ಈ ಪೈಕಿ ಕೆಲವು ವಿವಿಧ ಹಂತ ಗಳಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ, ಹಲವು ಪ್ರಸಂಗಗಳಲ್ಲಿ ಒಂದೇ ಪ್ರಕರಣವನ್ನು 2- 3 ತನಿಖಾ ಸಂಸ್ಥೆಗಳು ವಿಚಾರಣೆ ಕೈಗೆತ್ತಿಕೊಂಡಿವೆ. ಇದರಿಂದ ಸಮಯ ವ್ಯಯ ಜತೆಗೆ ಯಾವುದೇ ತಾರ್ಕಿಕ ಅಂತ್ಯ ತಲುಪುತ್ತಿಲ್ಲ. ಈ ಮಧ್ಯೆ ಪ್ರಾಧಿಕಾರದ ಅಧಿಕಾರಿಗಳು ವಿಚಾರಣೆಗಾಗಿ ಅಲೆಯುವುದೇ ಆಗಿದೆ. ಇದನ್ನು ತಪ್ಪಿಸಲು ಒಂದೇ ಪ್ರಕರಣವನ್ನು ಒಂದಕ್ಕಿಂತ ಹೆಚ್ಚು ತನಿಖಾ ಸಂಸ್ಥೆಗಳು ವಿಚಾರಣೆಗೆ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಈಚೆಗೆ ಆದೇಶ ಹೊರಡಿಸಲಾಗಿದೆ.
ಅಷ್ಟೇ ಅಲ್ಲ, ಎಫ್ಐಆರ್ ಆಗದಿದ್ದರೂ ಬರೀ ದೂರುಗಳನ್ನು ಆಧರಿಸಿ ಪ್ರಾಧಿಕಾರದ ವಿವಿಧ ಕಚೇರಿಗಳಿಗೆ ನೇರವಾಗಿ ಪತ್ರವ್ಯವಹಾರ ಮಾಡಿ, ದಾಖಲಾತಿಗಳೊಂದಿಗೆ ಖುದ್ದು ಅಧಿಕಾರಿ ಅಥವಾ ಸಿಬ್ಬಂದಿ ಹಾಜರಾಗುವಂತೆ ಸೂಚಿಸುತ್ತಿರುವುದು ಕಂಡುಬಂದಿದೆ. ಆದರೆ, ಆ ದಾಖಲೆಗಳ ಬಗ್ಗೆ ಸ್ವತಃ ಆಯುಕ್ತರ ಗಮನಕ್ಕೆ ಬಂದಿರುವುದಿಲ್ಲ. ಇದು ಮುಜುಗರಕ್ಕೂ ಎಡೆಮಾಡಿಕೊಡುವ ಸಾಧ್ಯತೆ ಇದೆ. ಆದ್ದರಿಂದ ದಾಖಲೆಗಳು ಅಥವಾ ಮಾಹಿತಿಗಳನ್ನು ಒದಗಿಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಬಿಡಿಎ ಆಯುಕ್ತ ಎಚ್.ಆರ್. ಮಹದೇವ ಆದೇಶಿಸಿದ್ದಾರೆ.
ದೂರು ದಾಖಲಾದ ನಂತರ ಮೊದಲು ಪ್ರಾಧಿಕಾರದ ವಿಶೇಷ ಕಾರ್ಯಪಡೆ ಹಾಗೂ ಜಾಗೃತ ದಳದಲ್ಲಿ ಎಫ್ಐಆರ್ ಆಗಬೇಕು. ಆಮೇಲೆ ಅದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಲಿ. ತದನಂತರ ಅಗತ್ಯಬಿದ್ದರೆ, ಬೆಂಗಳೂರು ಮಹಾನಗರ ಕಾರ್ಯಾಚರಣೆ ಪಡೆ (ಬಿಎಂಟಿಎಫ್), ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೇರಿದಂತೆ ಇತರೆ ಸಂಸ್ಥೆಗಳಿಂದ ತನಿಖೆ ನಡೆಯಲಿ. ಆದರೆ, ಪ್ರಸ್ತುತ ಇದಾವುದೂ ನಡೆಯುತ್ತಿಲ್ಲ. ದೂರಿನ ಮೇರೆಗೆ ನೇರವಾಗಿ ತನಿಖೆಗೆ ಕೈಗೆತ್ತಿಕೊಳ್ಳಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಎರಡು-ಮೂರು ಸಂಸ್ಥೆಗಳ ಕಚೇರಿಗಳಿಗೆ ವಿಚಾರಣೆಗೆ ಹಾಜರಾಗಬೇಕಿದೆ (ಕೆಲವೊಮ್ಮೆ ಈ ನೆಪದಲ್ಲಿ ಅಧಿಕಾರಿಗಳು ಕಚೇರಿಗಳಲ್ಲಿ ಲಭ್ಯ ಇರುವುದಿಲ್ಲ!). ಇದನ್ನು ತಪ್ಪಿಸಲು ಬಿಡಿಎ ಈ ಆದೇಶ ಹೊರಡಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ಬಿಡಿಎ ಹೊಸ ಆದೇಶವು ಅಧಿಕಾರಿಗಳಿಗೆ ಅನುಕೂಲವಾಗಿದೆ. ನೆಪ ಮಾಡಿಕೊಂಡು ವಿಚಾರಣೆಯಿಂದ ತಪ್ಪಿಸಿಕೊಳ್ಳಲು ದಾರಿಮಾಡಿ ಕೊಟ್ಟಂತಾಗಲಿದೆ. ಆದ್ದರಿಂದ ಇದು ಸರಿಯಾದ ಕ್ರಮವಲ್ಲ ಎಂಬ ಅಪಸ್ವರ ತನಿಖಾ ಸಂಸ್ಥೆಗಳಿಂದ ಕೇಳಿಬರುತ್ತಿದೆ.
ಒಂದೇ ಪ್ರಕರಣವನ್ನು ಒಂದಕ್ಕಿಂತ ಹೆಚ್ಚು ತನಿಖಾ ಸಂಸ್ಥೆಗಳು ವಿಚಾರಣೆಗೆ ಕೈಗೆತ್ತಿಕೊಳ್ಳಬಾರದು ಹಾಗೂ ಪೂರ್ವಾನುಮತಿ ಇಲ್ಲದೆ ಪ್ರಾಧಿಕಾರದ ಯಾವುದೇ ಅಧಿಕಾರಿ/ ಸಿಬ್ಬಂದಿ ವಿಚಾರಣೆಗೆ ಹಾಜರಾಗದಂತೆ ಹಾಗೂ ಪ್ರಾಧಿಕಾರದ ದಾಖಲೆಗಳು ಮತ್ತು ಮಾಹಿತಿಯನ್ನು ನೀಡಬಾರದು ಎಂದು ಹೇಳಿದ್ದೇನೆ. ಇದೆಲ್ಲವೂ ನಿಯಮದಲ್ಲೇ ಇದೆ. ಅದನ್ನೇ ನಾನು ಆದೇಶದಲ್ಲಿ ಸೂಚಿಸಿದ್ದೇನೆ ಅಷ್ಟೇ.
–ಎಚ್.ಆರ್. ಮಹದೇವ, ಆಯುಕ್ತರು, ಬಿಡಿಎ