Advertisement

ಗ್ರಾಮಸ್ಥರ ಹಲವು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ

03:34 PM Aug 21, 2022 | Team Udayavani |

ಹಾವೇರಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಸವಣೂರ ತಾಲೂಕಿನ ತೆವರಮೆಳ್ಳಿಹಳ್ಳಿಯಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿಗಳು, ಗ್ರಾಮಸ್ಥರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಪರಿಹಾರ ಒದಗಿಸಿದರು.

Advertisement

ಶನಿವಾರ ತೆವರಮೆಳ್ಳಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗರ್ಭಿಣಿಯರು, ಮಕ್ಕಳಿಗೆ ಪೌಷ್ಟಿಕ ಆಹಾರದ ಮಹತ್ವವನ್ನು ಸಾರುವ ಸರ್ಕಾರದ ಪೋಷಣ್‌ ಅಭಿಯಾನ ಯೋಜನೆಯಡಿ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮದಡಿ ಮಗುವಿಗೆ ತುತ್ತು ತಿನ್ನಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು, ಮಕ್ಕಳಿಗೆ ನಾಮಕರಣ, ಸುಕನ್ಯಾ ಸಮೃದ್ಧಿ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧರು, ವಿಧವೆಯರು, ವಿಕಲಚೇತನರಿಗೆ ಮಾಸಾಶನ ಮಂಜೂರು ಮಾಡಿ ಆದೇಶ ಪತ್ರ ವಿತರಿಸಿದರು.

ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ತಮ್ಮ ಗ್ರಾಮಗಳಿಗೆ ಆಗಮಿಸಿ, ನಿಮ್ಮ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹರಿಸಲು ಸಾಧ್ಯವಿರುವ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಉಳಿದ ಸಮಸ್ಯೆಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಬಗೆಹರಿಸಲಾಗುವುದು. ಗ್ರಾಮ ವಾಸ್ತವ್ಯದಲ್ಲಿ ಸ್ವೀಕರಿಸಿದ ಪ್ರತಿ ಅರ್ಜಿಗಳ ವಿಲೇವಾರಿ ಕುರಿತಂತೆ ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಮಾಹಿತಿ ಒದಗಿಸಲಾಗುವುದು. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸರ್ಕಾರದ ಮಹತ್ವದ ಉದ್ದೇಶವಾಗಿದೆ. ಸಣ್ಣ-ಪುಟ್ಟ ಸಮಸ್ಯೆಗಳಿಗೆ ಜನರು ಕಚೇರಿಗಳಿಗೆ ಅಲೆಯಬಾರದು. ಸರ್ಕಾರದ ಯೋಜನೆಗಳ ಮಾಹಿತಿಗಳನ್ನು ಜನರ ಬಳಿ ತೆಗೆದುಕೊಂಡು ಹೋಗಿ ತಿಳಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳ ವಸ್ತು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಜಿಪಂ ಸಿಇಒ ಮಹಮ್ಮದ ರೋಷನ್‌ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿಯ ಜವಾಬ್ದಾರಿಗಳು ಹೆಚ್ಚಾಗಲಿವೆ. ಬಹುಪಾಲು ಯೋಜನೆಗಳು ಗ್ರಾಮ ಪಂಚಾಯತಿ ವತಿಯಿಂದಲೇ ಅನುಷ್ಠಾನಗೊಳ್ಳಲಿವೆ. ಎಲ್ಲರೂ ಮನಸ್ಸು ಮಾಡಿದರೆ ಗ್ರಾಮದ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ, ಆರ್ಥಿಕ ಕ್ಷೇತ್ರದಲ್ಲಿ ಬರಪೂರ ಅಭಿವೃದ್ಧಿ ಸಾಧಿಸಬಹುದು. ಜಿಲ್ಲಾ ಪಂಚಾಯತಿ ವತಿಯಿಂದ ನರೇಗಾ ಯೋಜನೆಯಡಿ ಚರಂಡಿಗಳ ನಿರ್ಮಾಣ, ಕುಡಿಯುವ ನೀರು, ಅಂಗನವಾಡಿ, ಕೆರೆ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ತವರಮೆಳ್ಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಗ್ರ ಅಭಿವೃದ್ಧಿಗೆ 50 ಲಕ್ಷ ಅನುದಾನ ನೀಡಲಾಗುವುದು ಎಂದು ಪ್ರಕಟಿಸಿದರು.

ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ, ನಿಯಮಾವಳಿ ಅನುಸಾರ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ವೇದಿಕೆ ಮೇಲಿದ್ದ ಉಪವಿಭಾಗಾಧಿಕಾರಿ, ತಹಶೀಲ್ದಾರ್‌, ಇತರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ವಿವಿಧ ಇಲಾಖೆಗೆ ಸಂಬಂಧಿಸಿದಂತೆ 90ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕೃತವಾದವು. ಸ್ಥಳದಲ್ಲೇ ಶೇ.70ಕ್ಕೂ ಅಧಿಕ ಅರ್ಜಿಗಳಿಗೆ ಪರಿಹಾರ ಒದಗಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ ಅಣ್ಣಿಗೇರಿ, ಉಪಾಧ್ಯಕ್ಷೆ ಬಸಮ್ಮ ದೊಡ್ಡಮ್ಮನವರ, ಸವಣೂರು ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್‌, ತಹಶೀಲ್ದಾರ್‌ ಅನಿಲಕುಮಾರ, ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರವಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರ ಮನವಿ

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಹೊಲಗಳಿಗೆ ರೈತರು ಹೋಗಲು ರಸ್ತೆ ಸಮಸ್ಯೆ, ಪಶು ವೈದ್ಯರ ಸಮಸ್ಯೆ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಬೆಳೆ ವಿಮೆ, ಬೆಳೆ ಪರಿಹಾರ, ಯೂರಿಯಾ ಕೊರತೆ, ಸಣ್ಣ ಮತ್ತು ದೊಡ್ಡ ಹಿಡುವಳಿದಾರರು ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಬೆಳೆ ಹಾನಿ ಪರಿಹಾರ ನೀಡಬೇಕು. ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರಿಂದ ಅರ್ಜಿ ಪಡೆಯದೇ ಪರಿಹಾರ ಪಾವತಿಸಬೇಕು. ಅತಿವೃಷ್ಟಿಯಿಂದ ಹಾನಿಯಾಗಿರುವ ಮನೆಗಳ ಸಮರ್ಪಕ ಸರ್ವೇ ನಡೆಸುವುದು. ರಾಷ್ಟ್ರೀಯ ಹೆದ್ದಾರಿ ತವರಮೆಳ್ಳಿಹಳ್ಳಿ ಹೆದ್ದಾರಿ ಸೇತುವೆ ಕೆಳಗೆ ಹಾವೇರಿ-ರಾಣಿಬೆನ್ನೂರು-ದಾವಣಗೆರೆ-ಹುಬ್ಬಳ್ಳಿ ಬಸ್‌ಗಳು ಸಂಚರಿಸುವಂತೆ ಆದೇಶಿಸಿ ಗ್ರಾಮದ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವುದು ಸೇರಿದಂತೆ ಹಲವು ಮನವಿಗಳನ್ನು ಗ್ರಾಮದ ಮುಖಂಡರು ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next