ಆನಂದಪುರ: ಚೋರಡಿ ಹಾಗೂ ಸೂಡೂರು ಭಾಗದಲ್ಲಿ ಆನೆಗಳ ಓಡಾಟದ ಮಾಹಿತಿ ಬಂದಿದ್ದು, ಗ್ರಾಮಸ್ಥರು ಎಚ್ಚರದಿಂದ ಇರಬೇಕೆಂದು ಅರಣ್ಯ ಇಲಾಖೆ ಮನವಿ ಮಾಡಿದೆ.
ಕಳೆದ 2-3 ದಿನಗಳಿಂದ ಚೋರಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹಾಗೂ ಅರಸಾಳು ಸೂಡೂರು ಭಾಗದಲ್ಲಿ ಆನೆಗಳಿರುವ ಮಾಹಿತಿ ದೊರೆತಿದ್ದು, ಜನರಲ್ಲಿ ಆತಂಕ ಹುಟ್ಟಿಸಿದೆ.
ಚೋರಡಿ ಹಾಗೂ ಅರಸಾಳು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ರೈತರು ರಾತ್ರಿ ಸಿಡಿಮದ್ದು ಸಿಡಿಸಿ ಆನೆಗಳನ್ನು ಈ ಭಾಗದಿಂದ ಓಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಹಾಗೆಯೇ ಆನೆಗಳು ಇರುವ ಸ್ಥಳ ಹುಡುಕುವ ನಿಟ್ಟಿನಲ್ಲಿ ಅರಸಾಳು ಮತ್ತು ಚೋರಡಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿರುವುದಾಗಿ ಚೋರಡಿ ಅರಣ್ಯ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯದ ಕೆಲ ಭಾಗಗಳಲ್ಲಿ ಆನೆಯ ದಾಳಿಯಿಂದ ರೈತರು ಸಾವನ್ನಪ್ಪಿರುವ ಘಟನೆಗಳು ನಡೆದಿದೆ. ಆದ್ದರಿಂದ ಸಾರ್ವಜನಿಕರು ಸಂಜೆ ವೇಳೆ ಅರಣ್ಯ ಪ್ರದೇಶ, ಅಡಿಕೆ, ಬಾಳೆ, ತೋಟ, ಗದ್ದೆಗಳ ಕಡೆ ಯಾರು ಸಂಚರಿಸಬಾರದು ಎಂದು ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.